ಮಂಗಳಾದೇವಿ : ಮಂಗಳೂರು ರಾಮಕೃಷ್ಣ ಮಠದ ನೂತನ ಯೋಜನೆ ‘ಭಜನ್ ಸಂಧ್ಯಾ’ ಕಾರ್ಯಕ್ರಮಕ್ಕೆ ದಿನಾಂಕ : 02-07-2023ರಂದು ಚಾಲನೆ ನೀಡಲಾಯಿತು.
ಮಠದ ಪ್ರಾರ್ಥನಾ ಮಂದಿರದಲ್ಲಿ ವಿವಿಧ ಭಜನಾ ಮಂಡಳಿಗಳು ಪ್ರತಿ ತಿಂಗಳ ಮೊದಲ ಮತ್ತು ಎರಡನೇ ರವಿವಾರ ಭಜನಾ ಸೇವೆ ನೀಡಲಿವೆ. ಕಾರ್ಯಕ್ರಮವನ್ನು ಮಂಗಳೂರಿನ ಎಸ್.ಸಿ.ಎಸ್. ಆಸ್ಪತ್ರೆಯ ಮುಖ್ಯಸ್ಥ ಡಾ. ಜೀವರಾಜ್ ಸೊರಕೆ ಅವರು ಉದ್ಘಾಟಿಸಿದರು, ಈ ಸಂದರ್ಭ ಮಾತನಾಡಿದ ಅವರು “ರಾಮಕೃಷ್ಣ ಮಠದ ಈ ಸಾನ್ನಿಧ್ಯದಲ್ಲಿ ಭಜನೆ ಸಲ್ಲಿಸುವುದು ಒಂದು ಸುಕೃತವೇ ಸರಿ. ಇದಕ್ಕೆ ಅನುವು ಮಾಡಿಕೊಟ್ಟ ಸ್ವಾಮೀಜಿ ಶ್ಲಾಘನೆಗೆ ಪಾತ್ರರು, ಭಜನಾ ಸೇವೆ ನಿರತರವಾಗಿ ಮುಂದುವರಿಯಲಿ” ಎಂದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸೀತಾರಾಮ ಎ. ಉಪಸ್ಥಿತರಿದ್ದರು. ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿ ಪ್ರಸ್ತಾಪಿಸಿದರು. ರಾಮಕೃಷ್ಣ ಮಿಷನ್‌ನ ಮೌಲ್ಯ ಶಿಕ್ಷಣ ಕಾರ್ಯಕ್ರಮಗಳ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಅವರು ವಂದಿಸಿ, ಮಂಜುಳಾ ನಿರೂಪಿಸಿದರು.
ಭಜನ್ ಸಂಧ್ಯಾದ ಮೊದಲ ಕಾರ್ಯಕ್ರಮದಲ್ಲಿ ಮುಳಿಹಿತ್ಲು ಶ್ರೀ ಅಂಬಾ ಮಹೇಶ್ವರಿ ಭಜನ ಮಂಡಳಿಯವರು ಭಜನಾ ಸೇವೆ ನೀಡಿದರು. ಬಳಿಕ ಆರತಿ ಹಾಗೂ ಆಶ್ರಮದ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಸದಸ್ಯರಿಗೆ ಸ್ವಾಮಿ ಜಿತಕಾಮಾನಂದಜಿ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಆಶ್ರಮದ ಭಕ್ತರು ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.
ಮಂಗಳೂರಿನ ಸುತ್ತಮುತ್ತಲಿನ 12 ಭಜನಾ ತಂಡಗಳು ಈಗಾಗಲೇ ನೋಂದಾಯಿಸಿಕೊಂಡಿವೆ. ಸಂಜೆ 4 ಗಂಟೆಗೆ ಭಜನೆ ಆರಂಭವಾಗಲಿದ್ದು, 5.45ವರೆಗೆ ನಡೆಯಲಿದೆ. ಸಂಜೆ 5.45ರಿಂದ ಸ್ವಾಮೀಜಿ ಅವರಿಂದ ಆಶೀರ್ವಚನ, 6.30ರಿಂದ 7.15ರವರೆಗೆ ಆಶ್ರಮದ ವಿದ್ಯಾರ್ಥಿಗಳಿಂದ ಆರತಿ ಹಾಗೂ ಭಜನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಭಜನಾ ಮಂಡಳಿಗಳು ನೋಂದಣಿಗೆ 7448441972 ಸಂಖ್ಯೆಯನ್ನು ಸಂಪರ್ಕಿಸಿ ಆಸಕ್ತರು ಪಾಲ್ಗೊಳ್ಳಬಹುದು.
ಎರಡನೇ ದಿನದ ‘ಭಜನ್ ಸಂಧ್ಯಾ’ ಕಾರ್ಯಕ್ರಮ ಜು.9ರಂದು ಸಂಜೆ 4 ಗಂಟೆಗೆ ಬಾಲ ಭಜನ ಕಲಿಕಾ ತಂಡ, ಯೂತ್ ಸೆಂಟರ್, ಪಡೀಲು ಇವರಿಂದ ಭಜನಾ ಸೇವೆ ನಡೆಯಲಿದೆ.