ಬೆಂಗಳೂರು : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ (ರಿ.) ಮೈಸೂರು ಇದರ ಸಹಯೋಗದೊಂದಿಗೆ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ರಮಣಶ್ರೀ ಶರಣ ಪ್ರಶಸ್ತಿ’ ಪ್ರದಾನ ಮತ್ತು ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಆಣಿಮುತ್ತು ಭಾಗ 12-13’ ಪುಸ್ತಕಗಳ ಲೋಕಾರ್ಪಣೆಯು ದಿನಾಂಕ 16-11-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುತ್ತಾ “ಸಂವಿಧಾನ ಮತ್ತು ಶರಣ ಸಾಹಿತ್ಯದ ಆಶಯ ಒಂದೇ ಆಗಿದೆ. ಜಾತಿ ಬೇಧ-ಭಾವವಿಲ್ಲದ ಸಮಾಜ ನಿರ್ಮಾಣ ಇವೆರಡರ ಗುರಿಯೂ ಆಗಿದೆ. ಸಮಾಜದ ಋಣ ನಮ್ಮ ಮೇಲೆ ಇದೆ. ಬಸವಣ್ಣವನರ ವಚನ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಋಣ ತೀರಿಸಬೇಕು. ಪ್ರಸ್ತುತತೆಯಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ. ಸಂವಿಧಾನವಿದ್ದರೆ ನಾವೆಲ್ಲರೂ ಬಸವಣ್ಣನವರ ವಚನ ತತ್ವಾದರ್ಶಗಳ ಕಡೆಗೆ ಹೋಗುತ್ತೇವೆ” ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ದಯವೇ ಧರ್ಮದ ಮೂಲವಯ್ಯ ಎಂಬಂತೆ ಇಂದಿನ ಜನಾಂಗಕ್ಕೆ ದಯೆ, ಕರುಣೆ, ನಂಬಿಕೆ, ಪ್ರೀತಿ ವಿಶ್ವಾಸ ಮನೋಭಾವನೆ ಅತಿಮುಖ್ಯವಾಗಿದೆ” ಎಂದರು. ಡಾ.ಎಂ.ಸಿ. ಸುಧಾಕರ್ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, “ರಾಜಕೀಯದಲ್ಲಿ ಅಧಿಕಾರ ಎನ್ನುವುದು ಕೆಲವೊಮ್ಮೆ ಬರುವುದು, ಹೋಗುವುದು ಸಹಜ. ಆದರೆ ಯಾವುದೇ ಪಕ್ಷದಲ್ಲಿರಲಿ ನಾವೆಲ್ಲರೂ ಒಂದು ಎನ್ನುವ ಭಾವವನ್ನು ಹೊಂದಿರಬೇಕು” ಎಂದು ನುಡಿದರು.
ಪ್ರಶಸ್ತಿ ಪುರಸ್ಕೃತ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ “ಪ್ರಶಸ್ತಿಗೆ ನಾನು ಚಿರಋಣಿ. ಮಕ್ಕಳಲ್ಲಿ ವಚನ ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಬರುವ ವರ್ಷದಿಂದ ವಚನ ಸಾಹಿತ್ಯ ಹಾಗೂ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಮಕ್ಕಳಿಗೆ ರಮಣಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕು” ಎಂದು ಹೇಳಿದರು.
ರಮಣಶ್ರೀ ಪ್ರತಿಷ್ಠಾನದ 2023ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾದ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಬೆಂಗಳೂರು, ಡಾ. ವೀಣಾ ಬನ್ನಂಜೆ ಬೆಂಗಳೂರು, ಡಾ.ಬಸವರಾಜ್ ಸಾದರ ಬೆಂಗಳೂರು, ಡಾ. ನಾಗರಾಜ್ ರಾವ್ ಹವಾಲ್ದಾರ್, ಶ್ರೀ ಓಂಕಾರ್ನಾಥ್ ಹವಾಲ್ದಾರ್, ಅಖಿಲ ಭಾರತ ವಾಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಬೆಂಗಳೂರು, ಡಾ.ಎ.ಜೆ.ಶಿವಕುಮಾರ್ ಚಿತ್ರದುರ್ಗ, ಶ್ರೀ ದೇವರಾಜು ಪಿ. ಚಿಕ್ಕಹಳ್ಳಿ ಮೈಸೂರು, ಡಾ.ಕುಮಾರ ಕಣವಿ ಬೆಂಗಳೂರು, ನಾಡೋಜ ಡಾ. ಜೆ.ಎಸ್. ಖಂಡೇರಾವ್ ಕಲ್ಬುರ್ಗಿ ಮತ್ತು ಶ್ರೀಮತಿ ಸ್ನೇಹಾ ಕಪ್ಪಣ್ಣ ಬೆಂಗಳೂರು ಇವರುಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಸಾಹಿತಿ ಗೊ.ರು.ಚನ್ನಬಸಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಮನು ಬಳಿಗಾರ್, ಡಾ.ಸಿ.ಸೋಮಶೇಖರ, ಪತ್ರಕರ್ತರಾದ ವಿಶ್ವೇಶ್ವರ ಭಟ್, ರವಿ ಹೆಗಡೆ, ರಮಣಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಷಡಕ್ಷರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೋಣೆ ಸೇರಿದಂತೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಹಾಗೂ ರಮಣಶ್ರೀ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಮಣಶ್ರೀ ಶರಣ ಪ್ರಶಸ್ತಿಗಳು :
ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣದಲ್ಲಿ ಲೋಕಸೋಜಿಗದ ಸಮಾಜೋ-ಧಾರ್ಮಿಕ ಆಂದೋಲನ ನಡೆಸಿದ ಶರಣರ ವೈಚಾರಿಕ ಸಂದೇಶವನ್ನು ಇಂದಿನ ತಲೆಮಾರಿಗೆ ಮುಟ್ಟಿಸುವ ಆಶಯದಿಂದ ಸುತ್ತೂರು ಶ್ರೀ ವೀರ ಸಿಂಹಾಸನ ಮಠದ ಜಗದ್ಗುರು ಪೂಜ್ಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಸ್ಥಾಪಿಸಿದ ಒಂದು ಸಾಂಸ್ಕೃತಿಕ ಸಂಸ್ಥೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು. ಕಳೆದ ಮೂವತ್ತೈದು ವರ್ಷಗಳಿಂದ ಶರಣ ಸಾಹಿತ್ಯ ಮತ್ತು ಸಂಸ್ಕೃತಿಗಳ ಪ್ರಸಾರ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಪರಿಷತ್ತು ದಾನಿಗಳ ನೆರವಿನಿಂದ, ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರನ್ನು ಗುರುತಿಸಿ, ಪ್ರಶಸ್ತಿ ನೀಡಿ ಪುರಸ್ಕರಿಸುತ್ತಿದೆ.
ದಾನಿಗಳಿಂದ ಪ್ರಾಯೋಜಿತವಾಗಿರುವ ಅಂತಹ ಪ್ರತಿಷ್ಠಿತ ಪ್ರಶಸ್ತಿ – ರಮಣಶ್ರೀ ಶರಣ ಪ್ರಶಸ್ತಿ. ಪ್ರತಿ ವರ್ಷ ಜೀವಮಾನ ಸಾಧನೆಯ ಸನ್ಮಾನವೂ ಸೇರಿದಂತೆ ಒಂಬತ್ತು ಜನ ಸಾಧಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಯ ಪ್ರಾಯೋಜಕರು ರಮಣಶ್ರೀ ಪ್ರತಿಷ್ಠಾನ ಸಂಸ್ಥೆಯವರು. ನಾಡಿನ ಉದ್ಯಮ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಸರಾಗಿರುವ ಈ ಸಂಸ್ಥೆಯ ಕೊಡುಗೆಯಿಂದ ಶರಣ ಸಾಹಿತ್ಯ ಸಂಶೋಧನೆ, ಆಧುನಿಕ ವಚನ ರಚನೆ, ವಚನ ಸಂಗೀತ ಮತ್ತು ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಹಿರಿಯ ಶ್ರೇಣಿಯ ಮೂವರು ವ್ಯಕ್ತಿಗಳಿಗೆ ಹಾಗೂ ಒಂದು ಸೇವಾ ಸಂಸ್ಥೆಗೆ ತಲಾ ರೂ.40,000/- ಗಳನ್ನು, ಅದೇ ರೀತಿ ಉತ್ತೇಜನ ಶ್ರೇಣಿಯ ಶರಣ ಸಾಹಿತ್ಯ ಸಂಶೋಧನೆ, ಆಧುನಿಕ ವಚನ ರಚನೆ, ವಚನ ಸಂಗೀತ ಮತ್ತು ಶರಣ ಸಂಸ್ಕೃತಿ ಸೇವಾ ಸಂಸ್ಥೆಗೆ ತಲಾ ರೂ.20,000/- ಗಳನ್ನು ನೀಡಲಾಗುತ್ತದೆ. ರಮಣಶ್ರೀ ಶರಣ ಜೀವಮಾನ ಸಾಧಕ ಸನ್ಮಾನಿತರಿಗೆ ರೂ.50,000/- ಗಳನ್ನು ಪ್ರಶಸ್ತಿ ಫಲಕದೊಂದಿಗೆ ನೀಡಿ ಗೌರವಿಸಲಾಗುತ್ತದೆ.