ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಅರ್ಪಿಸುವ 38ನೇ ಕಾರ್ಯಕ್ರಮದಲ್ಲಿ 2025ನೇ ವರ್ಷ ಪೂರ್ತಿ ‘ರಾಮಸಾಗರಗಾಮಿನೀ’ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲೆಯನ್ನು ದಿನಾಂಕ 15 ಫೆಬ್ರವರಿ 2025ರಂದು ಸಂಜೆ 5-00 ಗಂಟೆಗೆ ಕಾರ್ಕಳ ಹೊಟೇಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಇವರು ‘ದ್ವಿತೀಯ ಸೋಪಾನ : ಯಜ್ಞ ಸಂರಕ್ಷಣೆಯ ಪಥದಲ್ಲಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿರುವರು.
ಡಾ. ರಾಘವೇಂದ್ರ ರಾವ್ :
ಉತ್ತರ ಕನ್ನಡ ಜಿಲ್ಲೆಯ ಶಿರಸಿಮೂಲದವರಾದ ರಾಘವೇಂದ್ರ ರಾವ್ ಇವರು ತಂದೆ ವಾಸುದೇವ ರಾವ್ ಮತ್ತು ತಾಯಿ ಅರುಂಧತಿ ರಾವ್ ರವರ ಪೌರಾಣಿಕ ಆಧ್ಯಾತ್ಮಿಕ ಜ್ಞಾನಗಳಿಂದ ಪ್ರೇರಿತರಾಗಿ ಬಾಲ್ಯದಲ್ಲೇ ತನ್ನ ಆಸಕ್ತಿಯನ್ನು ಆ ಕಡೆಗೆ ಹರಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಬಳಿಕದ ವಿದ್ಯಾಭ್ಯಾಸವನ್ನು ಇವರು ಉಡುಪಿ ಮತ್ತು ತಿರುಪತಿಯಲ್ಲಿ ನಡೆಸಿದರು. ಬಿ.ಕಾಂ, ಕನ್ನಡ ರತ್ನ, ಹಿಂದಿ ರಾಷ್ಟ್ರಭಾಷಾ ಪ್ರವೀಣ ಪದವಿಗಳ ಜೊತೆಯಲ್ಲಿ ಕನ್ನಡ, ಸಂಸ್ಕೃತ, ಹಿಂದಿ, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ವಿಶೇಷ ಅಧ್ಯಯನ ನಡೆಸಿ ಸ್ನಾತಕೋತ್ತರ ಪದವಿಗಳನ್ನೂ ಪಡೆದರು. ಸಂಸ್ಕೃತ ಮತ್ತು ಹಿಂದಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ಗಳಿಸಿರುತ್ತಾರೆ. ಬಿ.ಎಡ್.ನಲ್ಲಿ ಪ್ರಥಮ ಮತ್ತು ಎರಡು ಚಿನ್ನದ ಪದಕಗಳನ್ನು ಗಳಿಸಿರುವ ‘ದಶಾಫಲವಿಮರ್ಶಃ’ ಎಂಬ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನ ಪ್ರಬಂಧಕ್ಕೆ ತಿರುಪತಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ತಮ್ಮ ಇಪ್ಪತ್ತಾರನೇ ವಯಸ್ಸಿಗೇ ಪಡೆದುಕೊಂಡರು.
ಕಾವ್ಯ, ನಾಟಕ, ತಾಳಮದ್ದಳೆ, ಗಮಕ ಇತ್ಯಾದಿ ಸಾಂಸ್ಕೃತಿಕ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಇವರು ದೂರದರ್ಶನದ ಧಾವಾಹಿಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ. ದೂರದರ್ಶನಗಳಿಗಾಗಿ ಚಿತ್ರಕಥೆಗಳನ್ನೂ ಬರೆದಿದ್ದಾರೆ. ಇವರ ‘ಶರಧಿತಟದ ಭಾರ್ಗವರಾಮ’, ‘ಪಂಚಾವತಾರ’ ಮತ್ತು ‘ಕಟೀಲು ಶ್ರೀದೇವಿ ಚರಿತೆ’ ಎಂಬ ಮೂರು ನಾಟಕಗಳು ಡಿ.ಡಿ. ‘ಚಂದನ ವಾಹಿನಿ’ಯಲ್ಲಿ ಸುದೀರ್ಘ ಕಾಲ ಪ್ರಸಾರಗೊಂಡಿವೆ. ಸ್ವತಂತ್ರವಾಗಿ ಕೆಲವು ಕವನ ಸಂಕಲನಗಳನ್ನು ಪ್ರಕಟಿಸಿರುವ ಇವರು ಉಪನ್ಯಾಸ ಮತ್ತು ಗಮಕ ವ್ಯಾಖ್ಯಾನದ ಮೂಲಕ ಸಂಸ್ಕೃತ ಮತ್ತು ಕನ್ನಡದ ಪ್ರಸಿದ್ಧ ಕವಿಗಳ ಕಾವ್ಯ ಕೃತಿಗಳನ್ನು ಸಹೃದಯರಿಗೆ ತಲುಪಿಸುವ ಕಾರ್ಯವನ್ನು ನಿರಂತರ ಮಾಡುತ್ತಿದ್ದಾರೆ. ಪ್ರಸ್ತುತ ಇವರು ಪಡುಬಿದ್ರಿಯಲ್ಲಿ ಭಾಷಾ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2025ರ ಈ ವರ್ಷ ಪೂರ್ತಿ ‘ರಾಮಸಾಗರಗಾಮಿನೀ’ (ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ)’ ಎಂಬ ನೆಲೆಯಲ್ಲಿ ತಿಂಗಳ ಉಪನ್ಯಾಸ ಕಾರ್ಯಕ್ರಮಗಳನ್ನು ನಮ್ಮ ಮೂರು ಸಂಸ್ಥೆಗಳ ಅಶ್ರಯದಲ್ಲಿ ಕಾರ್ಕಳದಲ್ಲಿ ನಡೆಸಿಕೊಡಲಿದ್ದಾರೆ. ದೂರವಾಣಿ : 9880295681