ಬೆಂಗಳೂರು : ಯಕ್ಷದೇಗುಲ (ರಿ.) ಬೆಂಗಳೂರು ಅರ್ಪಿಸುವ ‘ರಾಮಾಯಣ ದರ್ಶನ’ ಯಕ್ಷಗಾನ ಉತ್ಸವವನ್ನು ದಿನಾಂಕ 5 ಅಕ್ಟೋಬರ್ 2024ರಂದು ಬೆಂಗಳೂರಿನ ಕೆಂಪೇಗೌಡ ನಗರ, ಉದಯಭಾನು ಕಲಾಸಂಘ ಗವಿಪುರಂ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ, ಮಕ್ಕಳ ಯಕ್ಷಗಾನ, ರಾಮಾಯಣ ದರ್ಶನ ನೃತ್ಯ ಸ್ಪರ್ಧೆ, ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿಕ್ಷಾಲೋಕಮ್ ಮ್ಯಾನೇಜರ್ ಶ್ರೀ ಅನುಭೂತಿ ಶ್ರೀ ವಾತ್ಸವ್ ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಹೆರಂಜಾಲು ಸುಬ್ಬಣ್ಣ ಗಾಣಿಗ ಇವರುಗಳು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಪಾರ್ಥಿಸುಬ್ಬ ವಿರಚಿತ ‘ಭರತಾಗಮನ’ ಯಕ್ಷಗಾನ ತಾಳಮದ್ದಳೆ ಮತ್ತು ಪ್ರೊ. ಪವನ್ ಕಿರಣಕೆರೆ ಪರಿಕಲ್ಪನೆಯ ‘ಕೃಷ್ಣಂ ವಂದೇ ಜಗದ್ಗುರುಂ’ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ 2-00 ಗಂಟೆಗೆ ಭಾಗವತ ಸುಬ್ರಹ್ಮಣ್ಯ ಹೊಳ್ಳರವರ ನೆನಪಿನಲ್ಲಿ ‘ರಾಮಾಯಣ ದರ್ಶನ ನೃತ್ಯ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದ್ದು, ಸಭಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನ್ ದಾಸ್ ಶೆಣೈ ಇವರನ್ನು ಸನ್ಮಾನಿಸಲಾಗುವುದು. ಬಳಿಕ ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ ‘ರಾವಣ ವಧೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.