ವಿಜಯಪುರ : ದಿನಾಂಕ 28-10-2023 ಶನಿವಾರ ಶೀಗೀ ಹುಣ್ಣಿಮೆಯಂದು ನಗರದ ಶ್ರೀ ಕುಮಾರವ್ಯಾಸ ಭಾರತ ಭವನದಲ್ಲಿ ‘ವಾಲ್ಮೀಕಿ ಜಯಂತಿ’ ನೆರವೇರಿಸಲಾಯಿತು. ಈ ಸಮಾರಂಭವನ್ನು ಶ್ರೀಮತಿ ಸುಲಭಾ ಮೋಹನರಾವ್ ಕುಲಕರ್ಣಿಯವರು ದೀಪ ಬೆಳಗಿಸಿ ಉದ್ಘಾಟಿಸಿ “ರತ್ನಾಕರನೆಂಬ ಹೆಸರಿನ ಬೇಡನು ಮಹಾನ್ ಕವಿ ವಾಲ್ಮೀಕಿಯಾದ ಬಗೆ ರೋಮಾಂಚಕವಾದುದು. ಕವಿ ವಾಲ್ಮೀಕಿಗಳು ರಚಿಸಿದ ರಾಮಾಯಣವು ಲೋಕವಂದ್ಯವಾದುದು. ರಾಮಾಯಣ ಮಹಾಕಾವ್ಯದಲ್ಲಿ ರಾಮನು ಹೇಳಿದ ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಮಾತು ಭಾರತೀಯರಿಗೆ ದೇಶಭಕ್ತಿ ಮೂಡಿಸುವಲ್ಲಿ ವೇದ ವಾಕ್ಯವಾಗಿದೆ. ಕುಮಾರವ್ಯಾಸ ಭಾರತ ವೇದಿಕೆಯಿಂದ ಮೇಲಿಂದ ಮೇಲೆ ಗಮಕ ಕಾರ್ಯಕ್ರಮಗಳು ಜರುಗುತ್ತಿರುವುದು. ವಿಜಯರಪುರ ನಗರಕ್ಕೆ ಶೋಭೆ ತಂದಿದೆ” ಎಂದರು. ಆಮೇಲೆ ಮುಖ್ಯ ಅತಿಥಿಗಳಾದ ಶ್ರೀಮತಿ ಸುಲಭಾ ಕುಲಕರ್ಣಿ ಹಾಗೂ ಮೋಹನ್ ಕುಲಕರ್ಣಿ ದಂಪತಿಗಳನ್ನು ಶಾಲು ಹೊದಿಸಿ, ಫಲಪಷ್ಟ ನೀಡಿ ಸನ್ಮಾನಿಸಲಾಯಿತು.
ನಂತರ ನಡೆದ ಕುಮಾರ ವಾಲ್ಮೀಕಿಗಳ ತೊರವೆ ರಾಮಾಯಣದ ಗಮಕ ಕಾರ್ಯಕ್ರಮವು ಸಭಿಕರನ್ನು ರಾಮಾಯಣ ಲೋಕಕ್ಕೆ ಕರೆದೊಯ್ಯಿತು. ಗಮಕ ವಿದುಷಿ ಶಾಂತಾ ಕೌತಾಳ ಹಾಗೂ ಕಲ್ಯಾಣರಾವ್ ಇವರುಗಳು ಸುಂದರಕಾಂಡದ ‘ಮುದ್ರಿಕಾ ಪ್ರದಾನ’ ಭಾಗವನ್ನು ಗಮಕದಲ್ಲಿ ಪ್ರಸ್ತುತ ಪಡಿಸಿದರು. ನಂತರ ಪುಷ್ಟಾ ಕುಲಕರ್ಣಿ ಹಾಗೂ ಭೂದೇವಿ ಕುಲಕರ್ಣಿಯವರು ‘ಶ್ರೀರಾಮ ಪಟ್ಟಾಭಿಷೇಕ’ ಭಾಗದ ಗಮಕ ವಾಚನವನ್ನು ಪ್ರಥಮ ಬಾರಿಗೆ ನೀಡಿ ಸಭಿಕರ ಮೆಚ್ಚುಗೆ ಪಡೆದರು. ವಿಜಯಪುರ ನಗರವು ಉತ್ತರ ಕರ್ನಾಟಕದಲ್ಲಿ ಗಮಕದಲ್ಲಿ ಮುನ್ನಡೆ ಸಾಧಿಸುತ್ತಿರುವುದನ್ನು ಸಭಿಕರು ಪ್ರಶಂಶಿಸಿದರು. ಸಮಾರಂಭದಲ್ಲಿ ಸರ್ವಶ್ರೀ ಗೋವಿಂದ ಡಂಬಳ, ಡಾ. ನವೀನ್ ಕುಲಕರ್ಣಿ, ಗೀತಾ ಹುದ್ದಾರ, ಲತಾ ದೇಶಪಾಂಡೆ, ಮೋಹನ್ ಕುಲಕರ್ಣಿ, ಅನುರಾಧಾ ಜಹಗಿರದಾರ್, ವಿಮಲಾ ಪ್ರ. ಕುಲಕರ್ಣಿ, ಮಂಜುಳಾ ಪಾಟೀಲ್, ವೀಣಾ ಪಾಟೀಲ್, ಪ್ರಮಿಳಾ ದೇಶಪಾಂಡೆ, ಅಶೋಕ್ ಗುಮಾಸ್ತೆ, ಕಾರ್ತಿಕ್ ಕುಲಕರ್ಣಿ, ಧ್ರುವರಾವ್ ದೇಸಾಯಿ, ಶೋಭಾ ದೇಸಾಯಿ, ವಿದ್ಯಾ ದೇಶಪಾಂಡೆ ಮುಂತಾದವರು ಭಾಗವಹಿಸಿದ್ದರು.