ಕಾಸರಗೋಡು : ಕಾಸರಗೋಡಿನ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ 19ನೇ ವಾರ್ಷಿಕೋತ್ಸವ ಮತ್ತು ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 24 ಮೇ 2025ರಂದು ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಸ್ವಾಮೀಜಿ “ಎಲೆಮರೆಯ ಪ್ರತಿಭಾನ್ವಿತರನ್ನು, ಹಿರಿಯ ಕಲಾವಿದರನು ಗುರುತಿಸುವಂತಹ ಹಾಗೂ ಅವರಿಗೆ ವೇದಿಕೆ ಕಲ್ಪಿಸುವ ಕಾರ್ಯ ಅತ್ಯಂತ ಶ್ಲಾಘನೀಯ. ಇದರಿಂದಾಗಿ ಯುವ ಪ್ರತಿಭೆಗಳಿಗೆ ಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ. ಸುಪ್ತವಾಗಿದ್ದ ಪ್ರತಿಭೆ ಅನಾವರಣಗೊಳ್ಳುತ್ತದೆ. ರಂಗಚಿನ್ನಾರಿಯು ಕಲೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗಾಗಿ ನಿರಂತರ ಕೈಂಕರ್ಯ ನಡೆಸುತ್ತಿದ್ದು ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ. ಈಗಾಗಲೇ ನೂರಾರು ಮಂದಿ ಯುವ ಪ್ರತಿಭೆಗಳನ್ನು ಗುರುತಿಸಿ, ವೇದಿಕೆ ಕಲ್ಪಿಸಿ ಅವರಲ್ಲಿ ಸುಪ್ತವಾಗಿದ್ದ ಪ್ರತಿಭೆ ಅರಳುವುದಕ್ಕೆ ಕಾರಣವಾಗಿದೆ” ಎಂದರು.
ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಮಾತನಾಡಿ “ಎರಡು ದಶಕಗಳಿಂದ ನಿರಂತರವಾಗಿ ಕನ್ನಡ ನಾಡು, ನುಡಿ, ಸಂಸ್ಕೃತಿಗಾಗಿ ದುಡಿಯುತ್ತಿರುವುದು ಕಷ್ಟದ ಕೆಲಸವಾದರೂ ಕನ್ನಡ ಭಾಷೆ ಮೇಲಿನ ಅಭಿಮಾನದಿಂದ ರಂಗ ಚಿನ್ನಾರಿ ದುಡಿಯುತ್ತಿರುವುದು ಉಳಿದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖ್ಯಾತ ನೇತ್ರ ತಜ್ಞ ಹಾಗೂ ಧರ್ಮದರ್ಶಿಗಳಾದ ಡಾ. ಅನಂತ ಕಾಮತ್ ಮಾತನಾಡಿ “ರಂಗ ಚಿನ್ನಾರಿಯು ಸಾಹಿತ್ಯ, ನಾಟಕ, ಸಂಗೀತ, ಕ್ರೀಡೆ, ಸಿನಿಮಾ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾಸರಗೋಡಿದ ಐವರು ಕನ್ನಡಿಗರನ್ನು ಪ್ರಶಸ್ತಿ ನೀಡಿ ಗೌರವ ಧನದೊಂದಿಗೆ ಗೌರವಿಸಿರುವುದು ನಿಜಕ್ಕೂ ಸ್ಲಾ ಘನೀಯ” ಎಂದರು.
ಸಮಾರಂಭದಲ್ಲಿ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಮಾಧವ ಪಾಟಾಳಿ ಇವರಿಗೆ ‘ಶ್ರೀ ಕೇಶವಾನಂದ ಭಾರತಿ ಪ್ರಶಸ್ತಿ’, ನಾಟಕ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ರಾಂ ಎಲ್ಲಂಗಳ ಮತ್ತು ಸಂಗೀತ ಕ್ಷೇತ್ರದ ಸಾಧನೆಗಾಗಿ ಶಕುಂತಲಾ ಕೃಷ್ಣ ಭಟ್ ಇವರಿಗೆ ‘ರಂಗಚಿನ್ನಾರಿ ಪ್ರಶಸ್ತಿ’, ಸಿನೆಮಾ ಕ್ಷೇತ್ರದ ಸಾಧನೆಗಾಗಿ ಕಿರಣ್ ರಾಜ್, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ದೀಕ್ಷಾ ಕೆ. ಇವರಿಗೆ ‘ರಂಗಚಿನ್ನಾರಿ ಯುವ ಪ್ರಶಸ್ತಿ’ಯನ್ನು ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಸ್ವಾಮೀಜಿಯವರು ನೀಡಿ ಗೌರವಿಸಿದರು.
ರಾಷ್ಟ್ರಪ್ರಶಸ್ತಿ ವಿಜೇತ ಸುಬ್ರಹ್ಮಣ್ಯ ಬಾಡೂರು, ಸಾಹಿತಿ ಉಮೇಶ ಮೈಸೂರು, ಉದಯಕುಮಾರ್ ಮನ್ನಿಪ್ಪಾದೆ, ಜನಾರ್ಧನ ಅಣಂಗೂರು, ದಿವ್ಯಗಟ್ಟಿ, ಶರಣ್ಯ, ನಾರಿ ಚಿನಾರಿಯ ಅಧ್ಯಕ್ಷೆ ಸವಿತಾ ಟೀಚರ್, ಯಕ್ಷಗಾನ ಕಲಾವಿದ ಸುಧಾಕರ ಸಾಲ್ಯಾನ್, ರಂಗಚಿನ್ನಾರಿ ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಉಪಸ್ಥಿತರಿದ್ದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಸ್ವಾಗತಿಸಿ, ನಿರೂಪಿಸಿ, ಬಬಿತಾ ಆಚಾರ್ಯ ಬಾಡೂರು ಪ್ರಾರ್ಥಿಸಿದರು.