ಕಾಸರಗೋಡು : ಗಡಿ ಪ್ರದೇಶವಾದ ಕಾಸರಗೋಡಿನಲ್ಲಿ ಕಳೆದ 17 ವರ್ಷಗಳಿಂದ ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ದುಡಿಯುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ 2022-23ನೇ ವರ್ಷದ ‘ರಂಗಚಿನ್ನಾರಿ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.
ಅದರಂತೆ ‘ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿ’ಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಪಿ. ಲಕ್ಷ್ಮೀನಾರಾಯಣ ಭಟ್ ಆಯ್ಕೆಯಾಗಿದ್ದಾರೆ. ‘ರಂಗಚಿನ್ನಾರಿ ಪ್ರಶಸ್ತಿ’ಗೆ ಕಥೆಗಾರ, ಸಾಹಿತಿ ವಿಠಲ ಗಟ್ಟಿ ಉಳಿಯ ಮತ್ತು ಖ್ಯಾತ ವಾಗ್ಮಿ ಶ್ರೀಮತಿ ಜಯಲಕ್ಷ್ಮೀ ಕಾರಂತ ಅವರನ್ನು ಆರಿಸಲಾಗಿದೆ. ಪ್ರಶಸ್ತಿಯು ತಲಾ ಐದು ಸಾವಿರ ರೂ. ನಗದು, ಸ್ಮರಣಿಕೆ, ಫಲತಾಂಬೂಲ ಹೊಂದಿದೆ. ಯುವ ಪ್ರತಿಭೆಗಳಿಗೆ ನೀಡುವ ‘ರಂಗಚಿನ್ನಾರಿ ಯುವ ಪ್ರಶಸ್ತಿ’ಗೆ ಜಾನಪದ ಕಲಾವಿದ ಸುಜಿತ್ ಕುಮಾರ್ ಹಾಗೂ ಸಂಗೀತ ಕಲಾವಿದೆ ಬಿ. ಮೇಧಾ ಕಾಮತ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 2,500 ರೂ. ನಗದು, ಸ್ಮರಣಿಕೆ, ಫಲತಾಂಬೂಲ ಹೊಂದಿದೆ.
ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿ ನಗದನ್ನು ದಿ. ಹರಿರಾಯ ಕಾಮತ್ ಸ್ಮಾರಕವಾಗಿ ನೀಡಲಾಗುವುದು. ರಂಗಚಿನ್ನಾರಿ ಪ್ರಶಸ್ತಿ ನಗದನ್ನು ದಿ.ಎನ್.ಆರ್. ಬೇಕಲ್ ಸ್ಮರಣಾರ್ಥ ನೀಡಲಾಗುವುದು. ರಂಗಚಿನ್ನಾರಿ ಯುವ ಪ್ರಶಸ್ತಿ ನಗದನ್ನು ದಿ. ದೇರಪ್ಪ ಸ್ಮರಣಾರ್ಥ ವಿತರಿಸಲು ನಿರ್ಧರಿಸಲಾಗಿದೆ. ಮೇ 20ರಂದು ಸಂಜೆ 5ಕ್ಕೆ ಎಡನೀರು ಮಠದಲ್ಲಿ ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಶ್ರೀ ಪಿ. ಲಕ್ಷ್ಮೀನಾರಾಯಣ ಭಟ್ – ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಪ್ರಶಸ್ತಿ ಸ್ವೀಕರಿಸುವವರು
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ‘ಸಂಪ್ಯ ಮನೆ’ಯ ಪೂಕಳ ಲಕ್ಷ್ಮಿನಾರಾಯಣ ಭಟ್ ಅವರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪೂಕಳ ಕೃಷ್ಣ ಭಟ್ ಮತ್ತು ಶಂಕರಿ ಅಮ್ಮ ದಂಪತಿಗಳ ಪುತ್ರರಾಗಿರುವ ಲಕ್ಷ್ಮೀನಾರಾಯಣ ಭಟ್ ಯಕ್ಷಗಾನದ ಅರ್ಥದಾರಿಗಳ ಪರಂಪರೆಯಿಂದ ಬಂದಿದ್ದು, ಇವರು ದಿ. ಉಪ್ಪಳ ಕೃಷ್ಣ ಮಾಸ್ತರ್ ರಲ್ಲಿ ನೃತ್ಯ ಅಭ್ಯಾಸ ಮಾಡಿ, ಅಜ್ಜ ದಿ. ಎಡಕ್ಕಾನ ಕೇಶವ ಭಟ್ ರಲ್ಲಿ ಅರ್ಥಗಾರಿಕೆ ಕಲಿತು, ಹಲವು ಪ್ರತಿಷ್ಠಿತ ಮೇಳಗಳಲ್ಲಿ ತಿರುಗಾಟ ನಡೆಸಿದರು. ಸುಮಾರು 35 ವರ್ಷಗಳ ಕಾಲ ಸ್ತ್ರೀ ಪಾತ್ರವನ್ನು ಬಿಟ್ಟು ಉಳಿದೆಲ್ಲಾ ಪಾತ್ರಗಳನ್ನು ಮಾಡಿದ್ದಾರೆ. ಇದು ಇವರಿಗೆ ಹೆಸರು ತಂದುಕೊಟ್ಟಿತು. ದಿ. ಮಲ್ಪೆ ವಾಸುದೇವ ಸಾಮಗರ ತಂಡದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಇದ್ದು, ಹೆಚ್ಚು ಅನುಭವ ಪಡೆದಿದ್ದಾರೆ. ‘ಶೇಣಿ ಪ್ರಶಸ್ತಿ’, ಎಡನೀರು ಬ್ರಹ್ಮಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರಿಂದ ಸಮ್ಮಾನ, ಮುಂಬಯಿ, ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಯ ಪ್ರತೀಕವಾಗಿ ಇವರನ್ನು ಪುರಸ್ಕರಿಸಿ ಗೌರವಿಸಲಾಗಿದೆ.
ಶ್ರೀ ವಿಠಲ ಗಟ್ಟಿ ಉಳಿಯ – ರಂಗಚಿನ್ನಾರಿ ಪ್ರಶಸ್ತಿ ಪುರಸ್ಕಾರಗೊಳ್ಳಲಿರುವವರು
ಶ್ರೀ ವಿಠಲ ಗಟ್ಟಿ ಉಳಿಯ ಇವರು ಶ್ರೀ ಕಿಳಿಂಗಾರ್ ತುಂಡಪ್ಪ ಮತ್ತು ಶ್ರೀಮತಿ ಲಕ್ಷ್ಮೀ ದಂಪತಿಗಳ ಪುತ್ರರು. ಖ್ಯಾತ ಸಣ್ಣ ಕತೆಗಾರರಾಗಿದ್ದ ಎಂ.ವ್ಯಾಸ ಅವರ ಏಕಮಾತ್ರ ಶಿಷ್ಯರಾಗಿರುವ ವಿಠಲ ಗಟ್ಟಿ ಉಳಿಯ ಅವರು 1979ರಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿ ಮುಂದೆ ಹೋದವರು ಹಿಂದಿರುಗಿ ನೋಡಲೇ ಇಲ್ಲ. ಈವರೆಗೆ ಅವರ 268 ಸಣ್ಣ ಕಥೆಗಳು ಮತ್ತು ಧಾರವಾಹಿಗಳಾಗಿ 23 ಕಾದಂಬರಿಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 38 ಕೃತಿಗಳು ಬೆಳಕು ಕಂಡಿವೆ. ಕಥಾ ಸಂಕಲನಗಳು, ಸಂಪಾದಿತ ಕವನ ಸಂಕಲನ, ಬೇಲಿ ಪ್ರಶಸ್ತಿ, ವಿಜೇತ ನಾಟಕ, ಮೊದಲಾದ ಖ್ಯಾತ ಕೃತಿಗಳನ್ನು ರಚಿಸಿದ ಖ್ಯಾತಿ ಇವರದು. ಬದುಕಿನುದ್ದಕ್ಕೂ ಸಾಹಿತ್ಯ ಸೇವೆಗೈದು ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿರುವ ವಿಠಲ ಗಟ್ಟಿ ಅವರು ತನ್ನ ಕೃತಿಗಳ ಬಗ್ಗೆ ತಾನೇ ಹೇಳಿಕೊಳ್ಳದೆ ತನ್ನ ಬಗ್ಗೆ ಕೃತಿಗಳೇ ಹೇಳಲಿ ಎನ್ನುವ ನಿಲುವನ್ನು ಹೊಂದಿದರು. ಕಾಸರಗೋಡು ಮತ್ತು ಕರ್ನಾಟಕದ ಹತ್ತು ಹಲವು ಸಂಸ್ಥೆಗಳಲ್ಲಿ ದುಡಿದಿರುವ ಅವರು ಪತ್ರಿಕೋದ್ಯಮದಲ್ಲೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ‘ಅವರ ಅತ್ಯಂತ ಜನ ಪ್ರಿಯ ಧ್ವನಿ ಸುರುಳಿ, ಮಲ್ಲದ ವಸಂತ ಪೂಜೆ’ ತುಳು ಭಕ್ತಿಗೀತೆಯದ್ದು ಜನಪ್ರಿಯ ಧ್ವನಿಸುರುಳಿ. ವಿಠಲ ಗಟ್ಟಿ ಉಳಿಯ ಅವರು ಪತ್ರಿಕೆಗಳಲ್ಲಿಯೂ ದುಡಿದ ಅನುಭವಿಗಳು.
ಶ್ರೀಮತಿ ಕೆ. ಜಯಲಕ್ಷ್ಮಿ ಕಾರಂತ – ಮತ್ತೊಬ್ಬ ರಂಗಚಿನ್ನಾರಿ ಪ್ರಶಸ್ತಿ ವಿಜೇತರು
ಕಸೂತಿ, ಹೊಲಿಗೆ, ತಾಳಮದ್ದಳೆ, ಬರವಣಿಗೆ, ಕಾವ್ಯ ವಾಚನ, ವ್ಯಾಖ್ಯಾನ, ಧಾರ್ಮಿಕ, ಭಾಷಣ, ಯೋಗ ತರಬೇತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವ ಶ್ರೀಮತಿ ಕೆ. ಜಯಲಕ್ಷ್ಮಿ ಕಾರಂತ ಅವರು ಖ್ಯಾತ ವಾಗ್ಮಿಗಳಲ್ಲೊಬ್ಬರು. ನಿವೃತ್ತ ಅಧ್ಯಾಪಕ ಶ್ರೀ ಕೆ. ನಾರಾಯಣ ಹೊಳ್ಳ ಮತ್ತು ಶ್ರೀಮತಿ ಕೆ. ಶಾರದಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಜಯಲಕ್ಷ್ಮಿಯವರು ಕೆ. ರಾಮ ಕಾರಂತರ ಪತ್ನಿ, ಪಣಂಬೂರು ಎನ್.ಎಂ.ಪಿ.ಟಿ. ಹೈಸ್ಕೂಲ್‌ನ ನಿವೃತ್ತ ಕನ್ನಡ ಅಧ್ಯಾಪಕಿಯಾಗಿರುವ ಇವರು ಗಮಕ ವ್ಯಾಖ್ಯಾನಕಾರರಾಗಿ ಗುರುತಿಸಿಕೊಂಡಿದ್ದು, ಹಲವು ಗಮಕ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದ್ದಾರೆ. ದಶಾವತಾರ ಸಾರ (ಮಕ್ಕಳಿಗಾಗಿ ಪ್ರಶ್ನೋತ್ತರ ಮಾಲಿಕೆ), ಶ್ರೀದೇವಿ ಮಹಾತ್ಮೆ (ಕಾಫಿ ಟೇಬಲ್ ಬುಕ್) ಇವರ ಪ್ರಕಟಿತ ಕೃತಿಗಳು. ವಿಜಯ ಕರ್ನಾಟಕ ಮತ್ತು ಕಥಾ ಕೀರ್ತನ ಮಾಸ ಪತ್ರಿಕೆಯ ಅಂಕಣಗಾರ್ತಿಯಾಗಿದ್ದಾರೆ. ಡಿ.ಎಸ್.ಇ.ಆರ್.ಟಿಯವರು ನಡೆಸಿದ ‘ಡಾ. ಸರ್ವಪಳ್ಳಿ ರಾಧಾಕೃಷ್ಣರ ಜೀವನಚರಿತ್ರೆ’ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಬಹುಮಾನ, ಎನ್.ಸಿ.ಇ.ಆರ್.ಟಿ.ಯವರ ಸಂಶೋಧನಾತ್ಮಕ ಪ್ರಬಂಧ ಸ್ಪರ್ಧೆಯಲ್ಲಿ ‘ಸಾಹಿತ್ಯ ಸಂಘಗಳ ಮೂಲಕ ಕನ್ನಡ ಭಾಷಾ ಬೆಳವಣಿಗೆ’ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. 2006 ಮತ್ತು 2014ರಲ್ಲಿ ಸುರತ್ಕಲ್ ನಲ್ಲಿ ಜರಗಿದ ಗಮಕ, ಕಲಾಸಮ್ಮೇಳನದಲ್ಲಿ ಎರಡು ಭಾರಿ ನೀಡಿದ ಅಭಿನಂದನೆ ಹಾಗೂ ಸನ್ಮಾನ, ಮಹಿಳಾ ಯಕ್ಷಗಾನದ ತಾಳಮದ್ದಳೆ ಕೂಟದಲ್ಲಿ 2 ಬಾರಿ ಭಾಗವಹಿಸಿ, ಇವರು ಜೇಸೀಸ್, ರೋಟರಿ ಸಂಸ್ಥೆಗಳಿಂದ ಸನ್ಮಾನ ಇವರ ಪ್ರತಿಭೆಗೆ ಸಂದ ಗೌರವ. ಶ್ರವಣ ನ್ಯೂನತೆಯುಳ್ಳ ಮಕ್ಕಳ ಪೋಷಕರ ಸಂಘದಲ್ಲಿ ಗೌರವ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳಿಂದಲೇ ಯಕ್ಷಗಾನ ಪ್ರದರ್ಶನ ನೀಡಿ ಸುಮಾರು ಐದು ಲಕ್ಷ ರೂ ನಿಧಿ ಸಂಚಯವ ಕಾರ್ಯದಲ್ಲಿ ಯಶಸ್ವಿಯಾಗಿದ್ದ ಇವರು ಪ್ರಸ್ತುತ ನಿತ್ಯಾನಂದ ವಿದ್ಯಾಪೀಠ ಕೊಂಡೆವೂರಿನಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀ ಸುಜಿತ್ ಕುಮಾರ್– ರಂಗ ಚಿನ್ನಾರಿ ಯುವ ಪ್ರಶಸ್ತಿಗೆ ಆಯ್ಕೆಯಾದವರು
ಕಾಸರಗೋಡು : ಶ್ರೀಮತಿ ಗೀತಾ ಪುಳಿಕುತ್ತಿ ಮತ್ತು ದಿ. ಮೋನಪ್ಪ ಅವರ ದ್ವಿತೀಯ ಪುತ್ರರಾದ ಶ್ರೀ ಸುಜಿತ್ ಕುಮಾರ್ ಪುಳಿಕುತ್ತಿಯಲ್ಲಿ ಜನಿಸಿದರು. ಸರಕಾರಿ ಕಾಲೇಜಿನಲ್ಲಿ ತೃತೀಯ ಶ್ರೇಣಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್. ಪದವಿ ಅತ್ಯುನ್ನತ ಅಂಕದೊಂದಿಗೆ ಪಡೆದ ಇವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಅಭಿನಯ, ಬರವಣಿಗೆ, ಹಾಡುಗಾರಿಕೆಯಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿದ್ದು, ವಿವಿಧ ಪತ್ರಿಕೆಗಳಲ್ಲಿ 150ಕ್ಕೂ ಮಿಕ್ಕಿ ಲೇಖನ, ಕತೆ, ಕವಿತೆಗಳು ಪ್ರಕಟಗೊಂಡಿದೆ. ತನ್ನ ವೃತ್ತಿಯ ಜೊತೆಗೆ ಕೊರಗತನಿಯ ದೈವದ ಚಾಕರಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ, ಪದಾಧಿಕಾರಿಗಳಾಗಿ ದುಡಿಯುತ್ತಿದ್ದು, ಈಗಾಗಲೇ ಹಲವಾರು ಪ್ರಶಸ್ತಿ ಸಮ್ಮಾನ, ಅಭಿನಂದನೆಗೆ ಪಾತ್ರರಾಗಿದ್ದಾರೆ.
ಬಿ. ಮೇಧಾ ಕಾಮತ್: ರಂಗ ಚಿನ್ನಾರಿ ಯುವ ಪ್ರಶಸ್ತಿಗೆ ಆಯ್ಕೆಯಾದ ಇನ್ನೊಬ್ಬರು
ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನೊತ್ತಿರುವ ಬಿ.ಮೇಧಾ ಕಾಮತ್ ಭರವಸೆಯ ಯುವ ಪ್ರತಿಭೆ. ಶ್ರೀಪತಿ ಬಿ. ಮತ್ತು ಗೀತಾ ಶ್ರೀಪತಿ ದಂಪತಿಗಳ ಪುತ್ರಿಯಾದ ಬಿ.ಮೇಧಾ ಕಾಮತ್ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ. ಸಿಬಿಎಸ್‌ಇ ಸಹೋದಯ ಸಾಂಸ್ಕೃತಿಕ ಉತ್ಸವದ ಉತ್ತರ ಕೇರಳ ವಲಯದ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಚಿನ್ಮಯ ಇಂಟರ್ ನ್ಯಾಶನಲ್ ಪೌಂಡೇಶನ್ ನಡೆಸಿದ ಸ್ಪರ್ಧೆಯ ಕನಕಧಾರ ಸ್ತೋತ್ರಂನಲ್ಲಿ ಪ್ರಥಮ ಸ್ಥಾನ, ರಾಷ್ಟ್ರೀಯ ಮಟ್ಟದ ಬಾಲಪ್ರತಿಭಾ ಉತ್ಸವದ ಭಜನ್ ಸ್ಪರ್ಧೆಯಲ್ಲಿ ಪ್ರಥಮ, ಕಲಾ ವೈಭವಂ ಇಂಟರ್ ಸ್ಕೂಲ್ ಮಟ್ಟದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ, 2022-23ರ ಚಿನ್ಮಯ ಫೆಸ್ಟ್- ಶಾಲಾ ಮಟ್ಟದ ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತ ಪ್ರಥಮ, ಸುಗಮ ಸಂಗೀತ ಪ್ರಥಮ, ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ, ಭಕ್ತಿಗೀತೆಯಲ್ಲಿ ದ್ವಿತೀಯ, ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಸಮೂಹಗಾನದಲ್ಲಿ ಪ್ರಥಮ, ಮಲಯಾಳ ಮನೋರಮ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ ಅಟ್ಟಂಪಾಟು ಕಾರ್ಯಕ್ರಮದ ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹೀಗೆ ಎಲ್ಲೆಲ್ಲೂ ಪ್ರಥಮ ಇವರ ವಿಶೇಷತೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ರಂಗಚಿನ್ನಾರಿ ಕಾಸರಗೋಡು ಏರ್ಪಡಿಸುವ ಹದಿನೇಳನೇ ವಾರ್ಷಿಕೋತ್ಸವ ಮತ್ತು ‘ರಂಗಚಿನ್ನಾರಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 20.05.2023ರಂದು ಶ್ರೀ ಎಡನೀರು ಮಠ ಸಭಾಂಗಣದಲ್ಲಿ ನಡೆಯಲಿದೆ.
ಖ್ಯಾತ ನೇತ್ರ ತಜ್ಞರಾದ ಡಾ. ಅನಂತ ಕಾಮತ್ ಇವರ ಘನ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಶಾಸಕರು ಮತ್ತು ಖ್ಯಾತ ನ್ಯಾಯವಾದಿಗಳಾದ ಶ್ರೀ ಪ್ರತಾಪ ಸಿಂಹ ನಾಯಕ್ ರಂಗ ಚಿನ್ನಾರಿ ಪ್ರಶಸ್ತಿ ಪ್ರದಾನ ಮಾಡಲಿರುವರು. ನೃತ್ಯ ಕಲಾವಿದೆ ಹಾಗೂ ಕಾಂತಾರ ಖ್ಯಾತಿಯ ಚಲನಚಿತ್ರ ನಟಿ ವಿದುಷಿ ಮಾನಸಿ ಸುಧೀರ್ ಮುಖ್ಯ ಅತಿಥಿಯಾಗಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ನಾ. ದಾಮೋದರ ಶೆಟ್ಟಿ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಇದೇ ವೇದಿಕೆಯಲ್ಲಿ ಡಾ ರೋಹಿಣಿ ಅಯ್ಯರ್ ಅವರ ‘ಸಾಕ್ಷಿ’ ಕೃತಿಯು ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಂದ ಲೋಕಾರ್ಪಣೆಗೊಳ್ಳಲಿದೆ ಮತ್ತು ನಿವೃತ್ತ ವಿಜ್ಞಾನಿ ಶ್ರೀಮತಿ ಗಿರಿಜಾ ಚಂದ್ರನ್ ಪ್ರಥಮ ಪ್ರತಿಯನ್ನು ಸ್ವೀಕರಿಸಲಿದ್ದಾರೆ. ನಿವೃತ್ತ ಅಧ್ಯಾಪಕರಾದ ಶ್ರೀ ಮಾಧವ ಹೇರಳ ಈ ಕಾರ್ಯಕ್ರಮಕ್ಕೆ ಶುಭ ಕೋರಲಿರುವರು.
ಶ್ರೀ ಎಡನೀರು ಮಠದ ಮ್ಯಾನೇಜರ್ ಶ್ರೀ ರಾಜೇಂದ್ರ ಕಲ್ಲೂರಾಯ, ಲಂಡನ್ ನ ಖ್ಯಾತ ಡ್ರಮ್ ಕಲಾವಿದರಾದ ಶ್ರೀ ಗಣೇಶ ಕುಂಬಳೆ, ಲಂಡನ್ ನ ಖ್ಯಾತ ವೈದ್ಯೆ, ಡಾ. ರಮಾ ಐಯ್ಯರ್, ರಂಗಕಲಾವಿದರಾದ ಶ್ರೀ ಸುಧಾಕರ್ ಸಾಲ್ಯಾನ್, ಖ್ಯಾತ ನೃತ್ಯಗುರುಗಳಾದ ವಿದ್ವಾನ್ ಸುಧೀರ್ ರಾವ್ ಇವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಖ್ಯಾತ ಗಾಯಕರಾದ ಕಿಶೋರ್ ಪೆರ್ಲ ಮತ್ತು ಸಂಗಡಿಗರಿಂದ ಭಕ್ತಿ-ಭಾವ-ಜನಪದ ಗೀತೆಗಳ ಗಾಯನ ‘ಭಾವ ಗಂಧ’ ಕಾರ್ಯಕ್ರಮ ಹಾಗೂ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ನಿರ್ದೇಶನದ ‘ನೃತ್ಯ ಸಿಂಚನ’ ಕಾರ್ಯಕ್ರಮವು ನೃತ್ಯ ನಿಕೇತನ ಕೊಡವೂರು, ಉಡುಪಿ ಕಲಾವಿದರಿಂದ ನಡೆಯಲಿದೆ.
ಕಾಸರಗೋಡು ಚಿನ್ನಾ, ಸತ್ಯನಾರಾಯಣ ಕೆ., ಕೆ. ಸತೀಶ್ಚಂದ್ರ ಭಂಡಾರಿ, ಮನೋಹರ ಶೆಟ್ಟಿ ಹಾಗೂ ನಿರ್ದೇಶಕರು ರಂಗ ಚಿನ್ನಾರಿ ಕಾಸರಗೋಡು ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.