ಬೆಂಗಳೂರು : ಬೆಂಗಳೂರಿನ ನರಸಿಂಹ ರಾಜ ಕಾಲೋನಿಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಹಿರಿಯಡ್ಕದ ಅಮೋಘ (ರಿ.) ಮತ್ತು ಸಪ್ನ ಬುಕ್ ಹೌಸ್ ಆಯೋಜಿಸಿದ ಕಲಾವಿದೆ ಶ್ರೀಮತಿ ಪೂರ್ಣಿಮಾ ಸುರೇಶ್ ಅವರು ರಚಿಸಿದ ರಂಗಭೂಮಿಯ ಒಡನಾಟದ ಕಥನವನ್ನು ಹೇಳುವ ಕೃತಿ ‘ರಂಗ ರಂಗೋಲಿ’ಯ ಲೋಕಾರ್ಪಣೆ ದಿನಾಂಕ 19-11-2023ರಂದು ನಡೆಯಿತು.
ಖ್ಯಾತ ಚಲನಚಿತ್ರ ನಿರ್ದೇಶಕರು ಹಾಗೂ ಕನ್ನಡಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಟಿ.ಎಸ್. ನಾಗಾಭರಣ ಅವರು ಕೃತಿ ಅನಾವರಣಗೊಳಿಸಿ ಮಾತನಾಡುತ್ತಾ, “ರಂಗಭೂಮಿ ಎನ್ನುವುದೇ ಸತ್ಯ. ಆದರೆ ಬಹುತೇಕರು ರಂಗಭೂಮಿಯನ್ನು ಮಿಥ್ಯಕ್ಕೆ ಹೋಲಿಸುತ್ತಾರೆ. ವಾಸ್ತವದಲ್ಲಿ ಸುಳ್ಳಿನ ನಿಜವಾದ ಅರ್ಥವನ್ನು ಹಾಗೂ ಸುಳ್ಳನ್ನು ಸರಣಿಯೋಪಾದಿಯಲ್ಲಿ ತೆರೆದಿಡುವ ವೇದಿಕೆಯೇ ರಂಗಭೂಮಿ. ಅದಕ್ಕೆ ಸತ್ಯದ ಪ್ರತೀಕವಾಗಿರುವ ರಂಗಭೂಮಿ ಉಳಿಯಬೇಕು, ಅದನ್ನು ಎಲ್ಲರೂ ಸೇರಿ ಬೆಳೆಸಬೇಕು. ಕಲೆ ಎನ್ನುವುದಕ್ಕೆ ಎಡ-ಬಲ ಸಂಸ್ಕೃತಿ ಇರುವುದಿಲ್ಲ. ಬದಲಾಗಿ ಕಲೆ ಎನ್ನುವುದು ಎಡ ಬಲ ಸಂಪ್ರದಾಯವನ್ನು ಮೀರಿ ಮಧ್ಯದ ಸಂಪ್ರದಾಯವನ್ನು ಬಿಂಬಿಸುವ ಕಲೆಗೆ ಯಾವುದೇ ಪಂಕ್ತಿಯ ರಂಗು ಹಚ್ಚಬಾರದು. ಕೃತಕ ಬುದ್ದಿಮತ್ತೆ ಎನ್ನವುದು ಇಂದು ರಂಗವನ್ನು ನುಂಗುತ್ತಿದೆ. ಪೂರ್ಣಿಮಾ ಅವರ ಕೃತಿ ರಂಗಭೂಮಿಯನ್ನು ಪ್ರವೇಶಿಸುವವರಿಗೆ ಉತ್ತಮವಾದ ಪ್ರವೇಶಿಕೆಯಾಗಲಿದೆ. ಇಂತಹ ಇನ್ನಷ್ಟು ಕೃತಿಗಳು ಅವರಿಂದ ಹೊರ ಬರಲಿ” ಎಂದು ಅವರು ಆಶಿಸಿದರು.
ಕೃತಿಯ ಪರಿಚಯಿಸಿ ಮಾತನಾಡಿದ ಲೇಖಕಿ, ಪ್ರಾಧ್ಯಾಪಕಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಮಾತನಾಡಿ “ನಮ್ಮ ಸಮಗ್ರ ಶಿಕ್ಷಣದಲ್ಲಿ ರಂಗಭೂಮಿ ಇರಬೇಕು. ಶಿಕ್ಷಣ ಕ್ಷೇತ್ರದಿಂದ ನಾಟಕಗಳು ದೂರವಾಗುತ್ತಿವೆ. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿಯೂ ನಾಟಕದ ಶಿಕ್ಷಕರು ಇರಬೇಕು. ಪಠ್ಯವನ್ನು ನಾಟಕದ ಮೂಲಕ ತಿಳಿಸಿದರೆ ಹೆಚ್ಚು ಪರಿಣಾಮಕಾರಿ. ಅದನ್ನು ನಾಟಕ ರೂಪದಲ್ಲಿ ಪ್ರದರ್ಶನ ಮಾಡಿದರೆ ಮಕ್ಕಳಲ್ಲಿ ಧೈರ್ಯಬರುತ್ತದೆ. ಈ ಸತ್ಯವನ್ನು ಅರಿತುಕೊಂಡು ಶಿಕ್ಷಣದಲ್ಲಿ ರಂಗಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಶಿಕ್ಷಣ ತಜ್ಞರು ಗಮನ ಹರಿಸುವ ಅವಶ್ಯಕತೆ ಇದೆ” ಎಂದು ಹೇಳಿ ಪೂರ್ಣಿಮಾ ಸುರೇಶ್ ಅವರು ತಮ್ಮ ರಂಗಭೂಮಿಯ ಅನುಭವಗಳನ್ನು ಹಿಡಿದಿಟ್ಟ ಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಭಿವ್ಯಕ್ತಿಯಲ್ಲಿ ಅವರು ಮಾತು ಮತ್ತು ಮೌನಗಳನ್ನು ಬಳಸಿಕೊಂಡ ಕ್ರಮ ವಿಶಿಷ್ಟವಾಗಿದೆ. ರಂಗಭೂಮಿ, ಪ್ರವೇಶಿಕೆ, ಧಾರಾವಾಹಿ, ಚಲನಚಿತ್ರ ಕೊನೆಗೆ ಸಿರಿಯಾಗಿ ನಡೆಸಿದ ಏಕವ್ಯಕ್ತಿ ಪ್ರದರ್ಶನದ ಮೂಲಕ ಕಂಡ ಯಶಸ್ಸು ಎಲ್ಲವನ್ನೂ ನಿರುದ್ವಿಗ್ನವಾಗಿ ದಾಖಲಿಸಿದ ಕ್ರಮ ಗಮನ ಸೆಳೆಯುತ್ತದೆ. ಅವರಿಂದ ಇಂತಹ ಇನ್ನಷ್ಟು ಕೃತಿಗಳು ಬರಲಿ ಎಂದು ಅವರು ಆಶಿಸಿದರು.
ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಲೇಖಕಿ ಪೂರ್ಣಿಮಾ ಸುರೇಶ್ “ರಂಗಭೂಮಿಯ ಅನುಭವ ನನ್ನನ್ನು ಸಾಕಷ್ಟು ಬೆಳೆಸಿದೆ. ಹೀಗೆ ಬೆಳೆಯುತ್ತಾ ಬಂದ ಕ್ರಮವನ್ನು ಈ ಕೃತಿಯಲ್ಲಿ ದಾಖಲಿಸುವ ಪ್ರಯತ್ನವನ್ನು ಮಾಡಿದ್ದೇನೆ. ಕಲಾವಿದೆಯಾಗಿ ನನಗೆ ಒಂದು ರಂಗಕೃತಿ ಅರಳುವ ಕ್ರಮ ಯಾವತ್ತೂ ಕುತೂಹಲ ಮೂಡಿಸುವ ಸಂಗತಿ. ಈ ಹಿನ್ನೆಲೆಯಲ್ಲಿಯೇ ಈ ಕೃತಿ ರೂಪುಗೊಂಡಿದೆ” ಎಂದು ಹೇಳಿ ಕೃತಿ ರಚಿಸಲು ತಮಗೆ ನೆರವಾದವರಿಗೆಲ್ಲರಿಗೂ ಕೃತಜ್ಞತೆಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ “ರಂಗ ರಂಗೋಲಿ ಕೃತಿಯ ಕಲಾವಿದೆ ಪೂರ್ಣಿಮಾ ಸುರೇಶ್ ಅವರ ವಿಶಿಷ್ಟವಾದ ರಂಗ ಪಯಣದ ಕಥೆ. ಕಲಾವಿದೆಯೊಬ್ಬಳು ಉತ್ತಮ ಬರಹಗಾರ್ತಿ ಕೂಡ ಆದಾಗ ದೊರಕುವ ಅಪರೂಪದ ಸೃಜನಾತ್ಮಕ ಕೊಡುಗೆಯಾಗಿ ಕೂಡ ಇದನ್ನು ನೋಡಬಹುದು. ವಿಶೇಷವೆಂದರೆ ಪೂರ್ಣಿಮಾ ಎಲ್ಲಿಯೂ ಅನುಭವಗಳನ್ನು ವೈಭವೀಕರಿಸುವುದಿಲ್ಲ. ಒಂದು ಅಂತರವನ್ನಿಟ್ಟುಕೊಂಡೇ ಅವರು ದಾಖಲಿಸುತ್ತಾ ಹೋಗುತ್ತಾರೆ. ಇಲ್ಲಿನ ಪ್ರತಿ ಕಂತಿನಲ್ಲಿಯೂ ಜೀವಂತಿಕೆಯ ಕಥೆ ಇದೆ. ಕಲಿತದ್ದನ್ನು ಪ್ರಾಮಾಣಿಕವಾಗಿ ದಾಖಲಿಸುವ ಸಾಕ್ಷಿಪ್ರಜ್ಞೆ ಇದೆ. ಅನುಭವದ ಸಾರವನ್ನು ಸಂಯಮ ಸಡಿಲಿಸದೆ ಹಿಡಿದಿಡುವ ಕುಶಲತೆ ಇದೆ. ಬಹಳ ಮುಖ್ಯವಾದ ಸಂಗತಿ ಎಂದರೆ ಇದು ಕೇವಲ ಪೂರ್ಣಿಮಾ ಅವರ ಅನುಭವದ ಕಥನ ಮಾತ್ರವಲ್ಲ ರಂಗಭೂಮಿಯ ದಾಖಲಾತಿ ಕೂಡ ಹೌದು. ಪಾಡ್ದನದಂತಹ ಅಪ್ಪಟ ಜನಪದದ ನೆಲೆಯಿಂದ ಸಿನಿಮಾದ ಆಧುನಿಕತೆಯವರೆಗೂ ಇದರ ಹರಹು ಹರಡಿರುವುದರಿಂದ ಇದಕ್ಕಿರುವ ಬಹುಮುಖಿ ಅಧ್ಯಯನದ ನೆಲೆಗಳು ಬಹಳ ಮಹತ್ವದ್ದು. ಹೀಗಾಗಿ ಇದು ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಮೈಲುಗಲ್ಲಾಗಿ ಉಳಿಯುವುದರಲ್ಲಿ ಯಾವ ಸಂಶಯವೂ ಇಲ್ಲ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಲೆನಾಡಿನ ಖ್ಯಾತ ಗಾಯಕಿ ಭಾಗ್ಯಶ್ರೀಗೌಡ ಅವರು ಸುಗಮ ಸಂಗಿತ ಗಾಯನ ಪ್ರಸ್ತುತ ಪಡಿಸಿದರು. ಶ್ರೀನಾಥ್ ಜೋಶಿ ಸ್ವಾಗತಿಸಿ, ಎ. ಭಾರತಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.