ಉಡುಪಿ : ಮಣಿಪಾಲದ ಸರಳೇಬೆಟ್ಟು ಇಲ್ಲಿನ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಇವರ ನೇತೃತ್ವದಲ್ಲಿ ರಂಗ ಚಿನ್ನಾರಿ ಕಾಸರಗೋಡು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಏರ್ಪಡಿಸಲಾದ ಕಾಸರಗೋಡು ಚಿನ್ನಾ ಇವರ ನಿರ್ದೇಶನದಲ್ಲಿ ರಂಗಸಂಸ್ಕೃತಿ ಶಿಬಿರವು ದಿನಾಂಕ 28 ಜುಲೈ 2024ರಂದು ನಡೆಯಿತು.
ಈ ಶಿಬಿರವನ್ನು ಉದ್ಘಾಟಿಸಿದ ಮಾಧವ ಕೃಪಾ ಸ್ಕೂಲ್‌ನ ಉಪ ಪ್ರಾಂಶುಪಾಲರಾದ ಜ್ಯೋತಿ ಸಂತೋಷ್ ಇವರು ಮಾತನಾಡಿ “ಮಕ್ಕಳು ರಂಗಭೂಮಿಯ ಕಲಾವೇದಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿ ಕಷ್ಟ ಎದುರಿಸುವ ಎದೆಗಾರಿಕೆಯೂ ಬರುತ್ತದೆ. ರಂಗ ನಿರ್ದೇಶಕ ಕಾಸರಗೋಡು ಚಿನ್ನಾರವರು ರಂಗ ಸಂಸ್ಕೃತಿ ಮುಖಾಂತರ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಮಹೇಶ್ ಠಾಕೂರ್ ಮಾತನಾಡಿ, “ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿವಿಧ ಕಲಾ ಪ್ರಕಾರಗಳ ತರಗತಿಗಳನ್ನು ಉಚಿತವಾಗಿ ಏರ್ಪಡಿಸುತ್ತಿದ್ದೇವೆ. ಇದೀಗ ಈ ಸಾಲಿಗೆ ರಂಗಸಂಸ್ಕೃತಿ ಕೂಡ ಸೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಉಡುಪಿ ಪರಿಸರದ ಶಾಲಾ ಕಾಲೇಜುಗಳಲ್ಲಿ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಈ ಕಾರ್ಯ ಮಾಡಲಿದೆ” ಎಂದು ಹೇಳಿದರು.
ಪರ್ಕಳ ಪ್ರೌಢಶಾಲೆ ಸಂಚಾಲಕ ದಿನೇಶ್ ಹೆಗ್ಡೆ, ಶಿಲ್ಪಾ ಸಾಮಂತ್, ಟ್ರಸ್ಟಿ ರಮಾನಂದ್ ಸಾಮಂತ್, ಕಾರ್ಯದರ್ಶಿ ಅಶ್ವಿನಿ ಮಹೇಶ್ ಠಾಕೂರ್, ನಿತ್ಯಾನಂದ ಪಡ್ರೆ, ರಂಗಕರ್ಮಿ ಶಶಿ ಭೂಷಣ ಕಿಣಿ ಹಾಗೂ ಇತರರು ಉಪಸ್ಥಿತರಿದ್ದರು.