ಮಂಗಳೂರು : ಖ್ಯಾತ ರಂಗಕರ್ಮಿ, ರಾಜ್ಯ ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೇಶಕ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಇವರಿಗೆ ಡಾ. ಪಿ. ದಯಾನಂದ ಪೈ ಪ್ರಾಯೋಜಿತ ವಿಶ್ವ ಕೊಂಕಣಿ ಕೇಂದ್ರ ನೀಡುವ ‘ರಂಗ ಶ್ರೇಷ್ಟ ಪುರಸ್ಕಾರ’ವನ್ನು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಭಾಂಗಣದಲ್ಲಿ ದಿನಾಂಕ 11-02-2024ರಂದು ನಡೆದ ವಿಶ್ವ ಕೊಂಕಣಿ ಸಮಾರೋಹ ಎಂಬ ಸಾಹಿತ್ಯ ಕಲೋತ್ಸವದಲ್ಲಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಯರಾಂ ಅಮೀನ್ ಮಾತನಾಡಿ “ಉದ್ಯಮ, ಸಾಹಿತ್ಯ, ಕಲೆ, ಸೇವೆ ಸಹಿತ ವಿವಿಧ ಕ್ಷೇತ್ರಗಳಿಗೆ ಕೊಂಕಣಿಗರು ದೇಶ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಕೊಂಕಣಿ ಭಾಷೆ ಮಾತನಾಡುವ ವಿವಿಧ ಧರ್ಮ ಜಾತಿಯ ಬಹು ಸಂಸ್ಕೃತಿ ಜೀವನ ಪದ್ಧತಿಯ ಜನ ವಿಶ್ವ ಕೊಂಕಣಿ ಕೇಂದ್ರ ಎಂಬ ಕೊಡೆಯ ಅಡಿ ಒಂದಾಗಿದ್ದಾರೆ” ಎಂದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ನಂದ ಗೋಪಾಲ ಶೆಣೈ ಮಾತನಾಡಿ “ಕೊಂಕಣಿಗರು ಇಂದು ಜಾಗತಿಕ ಮಟ್ಟದ ಆಸ್ತಿತ್ವ ಪಡೆದುಕೊಂಡಿದ್ದಾರೆ. ಕಲೆ, ಸಾಹಿತ್ಯ, ಶಿಕ್ಷಣ, ಉದ್ಯಮ ಎಲ್ಲಾ ಕ್ಷೇತ್ರದಲ್ಲೂ ಕೊಂಕಣಿ ಭಾಷಿಗರು ತಮ್ಮದೇ ಪಾತ್ರ ಮೂಡಿಸಿ, ಯಶಸ್ಸಿನ ಮಾದರಿಗಳನ್ನು ನಿರ್ಮಿಸುತ್ತಿದ್ದಾರೆ” ಎಂದರು.
ಹಿರಿಯ ಕೊಂಕಣಿ ಕಲಾವಿದರಾದ ರಮಾನಂದ ರಾಯ್ಕರ್, ಡಾ. ಪ್ರಕಾಶ್ ಪೆರಿಯಂಕಾರ್, ಆರ್.ಎಸ್. ಭಾಸ್ಕರ್, ಶಕುಂತಳಾ ಎ. ಭಂಡಾರ್ಕರ್, ಜೋಸೆಫ್ ಕ್ರಾಸ್ತಾ, ರಮೇಶ್ ಲಾಡ್ ಇವರ ಉಪಸ್ಥಿತಿಯಲ್ಲಿ ಕಾಸರಗೋಡು ಚಿನ್ನಾ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿತ್ತು.
ಪ್ರಶಸ್ತಿ ಸ್ವೀಕರಿದ ಕಾಸರಗೋಡು ಚಿನ್ನಾ ಅವರು ತಮ್ಮನ್ನು ಮತ್ತು ತಮ್ಮೊಂದಿಗೆ ಇತರ ಮಹನೀಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಿದ ವಿಶ್ವ ಕೊಂಕಣಿ ಕೇಂದ್ರಕ್ಕೆ, ಪ್ರಶಸ್ತಿ ಆಯ್ಕೆ ಸಮಿತಿಗೆ ಮತ್ತು ಕೊಂಕಣಿ ಬಾಷೆ ಮತ್ತು ಸಂಸ್ಕತಿಯ ಬಗ್ಗೆ ಅತೀವ ಕಾಳಜಿ ಮತ್ತು ಅಭಿಮಾನ ಹೊಂದಿ ಪ್ರಶಸ್ತಿಗೆ ಪ್ರಾಯೋಜಕರಾದ ಪಿ. ದಯಾನಂದ ಪೈ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದರು. ಈ ಪ್ರಶಸ್ತಿ ತಮ್ಮಲ್ಲಿ ಇನ್ನೂ ಹೆಚ್ಚಿನ ಉತ್ಸಾಹ ತುಂಬಿದೆ ಮಾತ್ರವಲ್ಲ, ಕೊಂಕಣಿ ಭಾಷೆ ಮತ್ತು ಸಂಸ್ಕತಿ ಉಳಿಸಲು, ಬೆಳೆಸಲು ಇನ್ನಷ್ಟು ಪ್ರಯತ್ನ ಪಡಲು ಹುರಿದುಂಬಿಸಿದೆ ಎಂದರು.
ಉಪಾಧ್ಯಕ್ಷರಾದ ಗಿಲ್ಬರ್ಟ್ ಡಿ’ಸೋಜ, ಡಾ. ಕಿರಣ್ ಐದೆ, ಬಿ.ಆರ್. ಭಟ್, ಟ್ರಸ್ಟಿಗಳಾದ ಶಕುಂತಳಾ ಕಿಣಿ, ರಮೇಶ್ ನಾಯಕ್, ಡಾ. ಕಸ್ತೂರಿ ಮೋಹನ ಪೈ, ವಾಧಿಕಾ ಪೈ, ವಿಲಿಯಂ ಡಿ’ಸೋಜ ಉಪಸ್ಥಿತರಿದ್ದರು. ಡಾ. ಟಿ. ದಯಾನಂದ ಪೈ, ಡಾ. ಟಿ.ವಿ. ಮೋಹನ ದಾಸ್ ಪೈ, ಪ್ರದೀಪ ಜಿ. ಪೈ ಮುಂತಾದವರ ವಿಡಿಯೋ ಸಂದೇಶ ಬಿತ್ತರಿಸಲಾಯಿತು. ಸ್ಮಿತಾ ಶೆಣೈ ಕಾರ್ಯಕ್ರಮ ನಿರ್ವಹಿಸಿ, ಸುಚಿತ್ರಾ ಶೆಣೈ ಸಾಧಕರನ್ನು ಪರಿಚಯಿಸಿ, ಆಡಳಿತಾಧಿಕಾರಿ ಡಾ. ದೇವದಾಸ ಪೈ ವಂದಿಸಿದರು.