ಉಡುಪಿ : ರಥಬೀದಿ ಗೆಳೆಯರು ಉಡುಪಿ ಇದರ ರಥಬೀದಿ ಮಾತುಕತೆ ಸರಣಿ ಕಾರ್ಯಕ್ರಮದ ಅಂಗವಾಗಿ ‘ರಂಗಭೂಮಿ ಮತ್ತು ಮುದ್ರೆ’ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕವಿ, ನಾಟಕಗಾರ, ರಂಗನಿರ್ದೇಶಕ, ರಂಗವಿನ್ಯಾಸಕ ಮತ್ತು ರಂಗಾಭಿನಯ ವಿನ್ಯಾಸ ಹಾಗೂ ನಿರ್ದೇಶನದ ಅಧ್ಯಾಪಕರಾದ ರಘುನಂದನ ಇವರಿಂದ ದಿನಾಂಕ : 01-07-2023ರ ಸಂಜೆ 4.30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಹಾಗೂ ಕಾರ್ಯದರ್ಶಿಯಾದ ಸುಬ್ರಹ್ಮಣ್ಯ ಜೋಶಿಯವರು ಆತ್ಮೀಯ ಸ್ವಾಗತ ಬಯಸಿದ್ದಾರೆ.
ಉಪನ್ಯಾಸಕರ ಬಗ್ಗೆ :
ಕವಿ, ನಾಟಕಕಾರ, ರಂಗನಿರ್ದೇಶಕ, ರಂಗವಿನ್ಯಾಸಕ ಮತ್ತು ರಂಗಾಭಿನಯ ವಿನ್ಯಾಸ ಹಾಗೂ ನಿರ್ದೇಶನದ ಅಧ್ಯಾಪಕ
ಶ್ರೀ ರಘುನಂದನ ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಪದವಿ ಮುಗಿಸಿ, ಹೊಸದೆಹಲಿಯ ರಾಷ್ಟ್ರೀಯ ನಾಟ್ಯವಿದ್ಯಾಲಯದಲ್ಲಿ ಡಿಪ್ಲೊಮಾ ಮತ್ತು ಅಲ್ಲಿಯೇ ರಂಗನಿರ್ದೇಶನದ ವಿಶೇಷ ಅಧ್ಯಯನ ನಡೆಸಿದ್ದಾರೆ. ಅನೇಕ ಪ್ರತಿಷ್ಟಿತ ರಂಗ ಶಿಕ್ಷಣ ಕೇಂದ್ರ, ನಾಟಕ ಶಾಲೆ, ಸಂಸ್ಕೃತಿ ಶಾಲೆ, ನಾಟ್ಯ ವಿದ್ಯಾಲಯ, ನಾಟ್ಯ ಅಕಾಡಮಿಗಳಲ್ಲಿ ಅತಿಥಿ ಪ್ರಾಧ್ಯಾಪಕರಾಗಿ, ರಂಗನಿರ್ದೇಶಕರಾಗಿ, ಅಭಿನಯ ಪ್ರಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ.
ರಂಗವಿನ್ಯಾಸ ಮತ್ತು ನಿರ್ದೇಶನ: ಭಾಸ, ಶೂದ್ರಕ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪಿ. ಲಂಕೇಶ್, ಶ್ರೀರಂಗ, ಜಿ.ಬಿ. ಜೋಷಿ, ಶಿವರಾಮ ಕಾರಂತ, ಪಂಪ ಮಹಾಕವಿ ಮತ್ತು ಜಿ.ಪಿ. ರಾಜರತ್ನಂ ಹೀಗೆ ಹಲವಾರು ಪ್ರಸಿದ್ಧ ಕವಿಗಳು ಮತ್ತು ಸಾಹಿತಿಗಳ ಬರಹಗಳು, ನಾಟಕಗಳು ಮತ್ತು ತಾನೇ ಬರೆದ ಪೂರ್ಣಪ್ರಮಾಣದ ನಾಟಕ ಮತ್ತು ಬೀದಿ ನಾಟಕಗಳಿಗೂ ರಂಗ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಇವರು ಬರೆದಿರುವ ನಾಟಕ ಕೃತಿಗಳು – ಎತ್ತ ಹಾರಿದೆ ಹಂಸ…, ಸತ್ತವರ ಕಥೆಯಲ್ಲ ಹಾಗೂ ಶಿವಬಿಕ್ಖು.
ಅನುವಾದ ಮತ್ತು ರೂಪಾಂತರ ಕಾರ್ಯದಲ್ಲೂ ಕೃಷಿ ಮಾಡಿದ ಇವರು ದೀಪಾವಳಿ ವಿಶೇಷ ಸಂಚಿಕೆ ಹಾಗೂ ಪ್ರಸಿದ್ಧ ವಾರ್ತಾ ಪತ್ರಿಕೆಗಳಲ್ಲಿ ಇವರ ವೈವಿಧ್ಯಮಯ ಬರಹಗಳನ್ನು ನಾವು ಕಾಣಬಹುದು. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ರಂಗಭೂಮಿ ಕುರಿತ ಅಧ್ಯಯನ ಮತ್ತು ಬರೆವಣಿಗೆಗಾಗಿ ಕೊಡಮಾಡುವ ಸೀನಿಯರ್ ಫೆಲೊಷಿಪ್, ಪುತಿನ ಕಾವ್ಯನಾಟಕ ಪುರಸ್ಕಾರ ಮತ್ತು ಬಿ.ವಿ. ಕಾರಂತ ಫೆಲೋಷಿಪ್‌ನ ಮೊತ್ತಮೊದಲ ವಿಜೇತರು ಇವರಗಿದ್ದಾರೆ. ಇವು ಇವರ ಅನನ್ಯ ಪ್ರತಿಭೆಗೆ ಸಂದ ಗೌರವಗಳು.