ಉಡುಪಿ : ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ಮೂರು ದಿನಗಳ ‘ರಂಗಭೂಮಿ ರಂಗೋತ್ಸವ’ ಮತ್ತು ‘ರಂಗಭೂಮಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 25-01-2024ರಿಂದ 27-01-2024ರವರೆಗೆ ಉಡುಪಿ, ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಫೌಂಡೇಶನ್, ಉಡುಪಿಯ ಎಂ.ಜಿ.ಎಂ. ಕಾಲೇಜು, ಮಂಗಳೂರಿನ ಪಿ.ವಿ.ಎಸ್. ಸಮೂಹ ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-ಬೆಂಗಳೂರು ಮತ್ತು ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಇವರ ಸಹಕಾರದೊಂದಿಗೆ ನಡೆಯಲಿದೆ.
ದಿನಾಂಕ 25-01-2024ರಂದು ‘ರಂಗಭೂಮಿ ರಂಗೋತ್ಸವ’ ಉದ್ಘಾಟನಾ ಸಮಾರಂಭ ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಇವರ ಸಹಯೋಗದಲ್ಲಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಜಿನ್ನಪ್ಪ ಗೌಡ ಇವರಿಗೆ ‘ಜಾನಪದ ಪ್ರತಿಭಾ ಪ್ರಶಸ್ತಿ’ ಪ್ರದಾನ ನಡೆಯಲಿದೆ. ರಂಗಭೂಮಿಯ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ. ಕೆ. ವಿದ್ಯಾ ಕುಮಾರಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಇದರ ಉಡುಪಿ ಜಿಲ್ಲಾ ಘಟಕದ ಸಹಯೋಗದಲ್ಲಿ ‘ಜಾನಪದ ವೈಭವ ಮತ್ತು ಯಕ್ಷಗಾನ’ ಹಾಗೂ ಶ್ರೀ ಹಟ್ಟಿಯಂಗಡಿ ಮೇಳದ ಕಲಾವಿದರಿಂದ ಉದಯ ಕುಂಜತ್ತೂರು ವಿರಚಿತ ‘ಶಿವದೂತ ಪಂಜುರ್ಲಿ’ ಯಕ್ಷಗಾನ ಬಯಲಾಟ ಪ್ರಸ್ತುತಿಗೊಳ್ಳಲಿದೆ.
ದಿನಾಂಕ 26-01-2024ರಂದು ಸಂಜೆ 5.45ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ 44ನೇ ರಾಜ್ಯಮಟ್ಟದ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ರಂಗಾಸ್ಥೆ ಟ್ರಸ್ಟ್ (ರಿ.) ಇವರಿಂದ ಕುಮಾರವ್ಯಾಸ ಭಾರತ ಹಾಗೂ ಜನಪದ ಭಾರತ ಆಧಾರಿತ ಶ್ರೀ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ‘ದ್ರೋಪದಿ ಹೇಳ್ತವ್ಳೆ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕವು ನಾಟಕೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಾಟಕವಾಗಿದೆ.
ದಿನಾಂಕ 27-01-2024ರಂದು ಅಪರಾಹ್ನ 2 ಗಂಟೆಗೆ ‘ಭಾವಗೀತಾ ಗಾಯನ’ ಕಾರ್ಯಕ್ರಮವನ್ನು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ ಶ್ರೀಮತಿ ವಾಸಂತಿ ರಮೇಶ್ ಶೆಣೈ ಇವರು ನಡೆಸಿಕೊಡಲಿದ್ದಾರೆ. ‘ಅರುಂಧತಿ ನಾಗ್ ಇವರೊಂದಿಗೆ ನಾವು ನೀವು’ ಗೋಷ್ಠಿಯನ್ನು ಉಡುಪಿಯ ಕಲ್ಕೂರ ಬಿಲ್ಡರ್ಸ್ ಮತ್ತು ಡೆವೆಲಪರ್ಸ್ ಇದರ ಆಡಳಿತ ನಿರ್ದೇಶಕರಾದ ಶ್ರೀ ರಂಜನ್ ಕಲ್ಕೂರ ಇವರು ಉದ್ಘಾಟಿಸಲಿದ್ದಾರೆ. ನಂತರ ಅರುಂಧತಿ ನಾಗ್ ಇವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 6ಕ್ಕೆ ಅಭಿನೇತ್ರಿ, ಸಂಘಟಕಿ, ರಂಗಶಂಕರದ ರೂವಾರಿಯಾಗಿ ನಾಡಿನ ಸಾಂಸ್ಕೃತಿಕ ರಂಗಕ್ಕೆ ಅಭೂತಪೂರ್ವ ಕೂಡುಗೆ ನೀಡುತ್ತಿರುವ ಪದ್ಮಶ್ರೀ ಪುರಸ್ಕೃತೆ ಅರುಂಧತಿ ನಾಗ್ ಇವರಿಗೆ ರಂಗಭಾರತಿ ಬಿರುದಿನೊಂದಿಗೆ ‘ರಂಗಭೂಮಿ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಸದಸ್ಯರಿಂದ ಕ್ಲಾನ್ವಿನ್ ಫೆರ್ನಾಡಿಸ್ ಇವರ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನದ ‘ಹ್ಯಾಂಗ್ ಆನ್’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಂಗಭೂಮಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.