29 ಮಾರ್ಚ್ 2023, ಉಡುಪಿ: ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಸಾಧಕರಿಗೆ ವಿಶ್ವ ರಂಗಭೂಮಿ ಗೌರವಾರ್ಪಣೆಯು ರಾಜ್ಯದ ಪ್ರತಿಷ್ಠಿತ ರಂಗಭೂಮಿ ಸಂಸ್ಥೆಗಳಲ್ಲಿ ಒಂದಾಗಿರುವ ರಂಗಭೂಮಿ (ರಿ.) ಉಡುಪಿ ಇದರ ವತಿಯಿಂದ ಎಂ.ಜಿ.ಎಂ. ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಸೋಮವಾರ, ದಿನಾಂಕ 27-03-2023ರಂದು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಡುಪಿಯ ಪ್ರಭಾಕರ ಸೌಂಡ್ಸ್ ಮಾಲೀಕ ಶ್ರೀ ಕೆ.ಪ್ರಭಾಕರ ಶೆಟ್ಟಿಗಾರ್ ಹಾಗೂ ಹಿರಿಯ ರಂಗನಟ ಶ್ರೀ ಯು.ಎಂ.ಅಸ್ಲಾಮ್ ಅವರಿಗೆ “ವಿಶ್ವ ರಂಗಭೂಮಿ” ಗೌರವಾರ್ಪಣೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ (ರಿ.) ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, “ರಂಗಭೂಮಿಯಲ್ಲಿ ಏನು ಉಂಟು, ಏನಿಲ್ಲ ಎನ್ನುವುದಕ್ಕಿಂತ ಬದುಕಿನ ಪಾಠವೇ ಇಲ್ಲಡಗಿದೆ ಎಂಬುದನ್ನು ಅರಿಯಬೇಕು. ರಂಗಭೂಮಿ ಉಡುಪಿ ಸಂಸ್ಥೆ ನಿರಂತರ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಸಂಸ್ಥೆಗೆ ರಂಗಾಸಕ್ತರ ನಿರಂತರ ಪ್ರೋತ್ಸಾಹ ಅಗತ್ಯ” ಎಂದರು. ವಿಶ್ವ ರಂಗಭೂಮಿ ಗೌರವಕ್ಕೆ ಆಯ್ಕೆಯಾದ ಕೆ.ಪ್ರಭಾಕರ ಶೆಟ್ಟಿಗಾರ್ ಹಾಗೂ ಹಿರಿಯ ರಂಗನಟ ಯು.ಎಂ.ಅಸ್ಲಾಮ್ ಅವರ ಜೀವನ ಸಾಧನೆಯನ್ನು ಅವರು ಕೊಂಡಾಡಿ ಇವರಿಗೆ ರಂಗಭೂಮಿಯ ಗೌರವ ಸಂದಿರುವುದು ತುಂಬಾ ಖುಷಿ ನೀಡಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗ ನಿರ್ದೇಶಕ ಪ್ರೊ.ಜಯಪ್ರಕಾಶ್ ಮಾವಿನಕುಳಿ ಮಾತನಾಡಿ, “ಪ್ರಭುತ್ವ ನಡೆಸುವ ಶೋಷಣೆ, ಕುತಂತ್ರದ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ಆದ್ದರಿಂದಲೇ ನಾಟಕಕಾರರು, ಸಾಹಿತಿಗಳನ್ನು ಕಂಡರೆ ಪ್ರಭುತ್ವಕ್ಕೆ ಭಯದ ಪ್ರೀತಿಯೇ ಹೊರತು ನಿಜವಾದ ಪ್ರೀತಿಯಲ್ಲ” ಎಂದರು.
ಕಾರ್ಯಕ್ರಮದಲ್ಲಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮಿ ನಾರಾಯಣ ಕಾರಂತ, ರಂಗಕರ್ಮಿ ರಾಮ ಶೆಟ್ಟಿ, ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾಧ್ಯಕ್ಷ ಎನ್.ಆರ್.ಬಲ್ಲಾಳ್, ಕೋಶಾಧಿಕಾರಿ ಭೋಜ ಯು., ಜತೆ ಕಾರ್ಯದರ್ಶಿ ಶ್ರೀಪಾದ ಹೆಗಡೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ಸ್ವಾಗತಿಸಿ, ಜತೆ ಕಾರ್ಯದರ್ಶಿ ವಿವೇಕಾನಂದ ಎನ್. ನಿರೂಪಿಸಿದರು.