ಬೆಂಗಳೂರು : ಕರ್ನಾಟಕ ಬೀದಿನಾಟಕ ಅಕಾಡೆಮಿ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ವತಿಯಿಂದ ಸಿಜಿಕೆ 75 ಸಿಜಿಕೆ ಬೀದಿರಂಗ ದಿನ ಆಚರಣೆ ಪ್ರಯುಕ್ತ ‘ರಂಗಭೂಮಿಯ ಒಡಲಾಳ ನಾಟಕೋತ್ಸವ’ವನ್ನು ದಿನಾಂಕ 08ರಿಂದ 10 ಡಿಸೆಂಬರ್ 2025ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಮತ್ತು ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 08 ಡಿಸೆಂಬರ್ 2025ರಂದು ಸಂಜೆ ಗಂಟೆ 6-45ಕ್ಕೆ ರಂಗಕರ್ಮಿ ಎನ್. ಮಂಗಳಾ ಇವರು ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದು, ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ರಂಗಕರ್ಮಿ ಜನ್ನಿ ಇವರಿಗೆ ರಂಗ ಗೌರವ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ನವರಸಂ ರಂಗತಂಡ ಅಭಿನಯಿಸುವ ‘ಬೆರಳ್ಗೆ ಕೊರಳ್’ ನಾಟಕವು ರಾಘವೇಂದ್ರ ಎಸ್. ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ.
ದಿನಾಂಕ 09 ಡಿಸೆಂಬರ್ 2025ರಂದು ಸಂಜೆ ಗಂಟೆ 7-15ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ ಸಿ.ಕೆ. ಗುಂಡಣ್ಣ ಇವರು ವಹಿಸಲಿದ್ದು, ಕರ್ಣಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಇವರಿಗೆ ರಂಗ ಗೌರವ ನೀಡಲಾಗುವುದು. ಬಳಿಕ ರಂಗವಾಹಿನಿ ಚಾಮರಾಜನಗರ ಅಭಿನಯಿಸುವ ‘ಬೆಲ್ಲದ ದೋಣಿ’ ನಾಟಕವು ರೂಬಿನ್ ಸಂಜಯ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ.
ದಿನಾಂಕ 10 ಡಿಸೆಂಬರ್ 2025ರಂದು ಬೆಳಗ್ಗೆ 11-00 ಗಂಟೆಗೆ ವಿಚಾರ ಸಂಕಿರಣ ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ. ಮೂಡ್ನಕೊಡು ಚಿನ್ನಸ್ವಾಮಿ ಇವರು ನಿರ್ವಹಿಸಲಿದ್ದು, ಕರ್ಣಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಲ್.ಎನ್. ಮುಕುಂದರಾಜ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12-00 ಗಂಟೆಗೆ ಗೋಷ್ಠಿ 1ರಲ್ಲಿ ‘ಸಿಜಿಕೆ ರಂಗ ಹುಡುಕಾಟ’ ಎಂಬ ವಿಷಯದ ಬಗ್ಗೆ ಕರ್ಣಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೆಚ್.ಎಲ್. ಪುಷ್ಪ ಇವರು ಹಾಗೂ ಮಧ್ಯಾಹ್ನ 03-00 ಗಂಟೆಗೆ ಗೋಷ್ಠಿ 2ರಲ್ಲಿ ‘ಜನ ಚಳುವಳಿಗಳು ಮತ್ತು ಸಾಂಸ್ಕೃತಿಕ ಜಾಥಾಗಳು’ ಎಂಬ ವಿಷಯದ ಬಗ್ಗೆ ಪ್ರಗತಿಪರ ಚಿಂತಕರಾದ ಜಿ.ಎನ್. ನಾಗರಾಜ್ ಮತ್ತು ತಾಯಣ್ಣ ಯಾರಗೇರಾ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ 6-45 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ. ಎಂ.ಎಸ್. ಮೂರ್ತಿ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಸಂಸ್ಕೃತಿ ಚಿಂತಕರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ರಂಗಕರ್ಮಿ ನಟರಾಜ ಹೊನ್ನವಳ್ಳಿ ಇವರಿಗೆ ಸಿಜಿಕೆ ರಂಗ ಪುರಸ್ಕಾರ ಹಾಗೂ ಹಿರಿಯ ಕಲಾವಿದೆ ಡಾ. ಉಮಾಶ್ರೀ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರಿಗೆ ರಂಗ ಗೌರವ ನೀಡಲಾಗುವುದು. ಬೆಂಗಳೂರಿನ ಯಲಹಂಕದ ಸ.ಪ್ರ.ದ. ಕಾಲೇಜಿನ ರಂಗಸಿರಿ ರಂಗ ತಂಡದವರಿಂದ ಮಧು ಎಂ. ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನಗೊಳ್ಳಲಿದೆ.

