ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು, ಸ್ವರ ಚಿನ್ನಾರಿ, ನಾರಿ ಚಿನ್ನಾರಿ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ರಂಗಚಿನ್ನಾರಿಯ 18ನೇ ವಾರ್ಷಿಕೋತ್ಸವ ಮತ್ತು ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 30-03-2024ರಂದು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ ಆಶೀರ್ವಚನ ನೀಡಿ “ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕೈಂಕರ್ಯ ಶ್ಲಾಘನೀಯವಾದುದು. ಈ ನಿಟ್ಟಿನಲ್ಲಿ ರಂಗಚಿನ್ನಾರಿ ನಡೆಸುತ್ತಿರುವ ಸತ್ಕಾರ್ಯ ಮಾದರಿ ಹಾಗೂ ಆದರ್ಶವಾಗಿದೆ” ಎಂದು ಹೇಳಿದರು.
ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಅವರು ಮಾತನಾಡಿ ಯಕ್ಷಗಾನವನ್ನು ಉಳಿಸುವ ನಿಟ್ಟಿನಲ್ಲಿ ‘ಯಕ್ಷ ಚಿನ್ನಾರಿ’ ಘಟಕ ಆರಂಭಿಸುವಂತೆ ವಿನಂತಿಸಿಕೊಂಡರು. ಅತಿಥಿಗಳಾಗಿ ಭಾಗವಹಿಸಿದ ಪ್ರಸಿದ್ಧ ಕಾನತ್ತೂರು ನಾಲ್ವರ್ ದೈವಸ್ಥಾನದ ಟ್ರಸ್ಟಿ ಖ್ಯಾತ ಸಾಹಿತಿ ಕೆ.ಪಿ. ಶಶಿಧರನ್ ನಾಯರ್ ಮಾತನಾಡಿ “ರಂಗ ಚಿನ್ನಾರಿ ಮಾಡುವ ಕೆಲಸವನ್ನು ಶ್ಲಾಘಿಸಿದರಲ್ಲದೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಸ್ತುತ್ಯಾರ್ಹ” ಎಂದರು. ಕಾನತ್ತೂರು ನಾಲ್ವರ್ ದೈವಸ್ಥಾನದ ವತಿಯಿಂದ ರಂಗಚಿನ್ನಾರಿ ಟ್ರಸ್ಟಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ದೇಣಿಗೆಯನ್ನಾಗಿ ನೀಡಿ ಹರಸಿದರು.
ದಿ. ಹರಿರಾಯ ಕಾಮತ್ ಸ್ಮರಣಾರ್ಥ ಡಾ. ಅನಂತ ಕಾಮತ್ ಪ್ರಾಯೋಜಿತ ‘ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ’ಯನ್ನು ರಾಮ ಜೋಗಿ ಅವರಿಗೆ ಪ್ರದಾನ ಮಾಡಲಾಯಿತು. ಸ್ಯಾಕ್ಸೋಫೋನ್ ವಾದಕ ಚಂದ್ರಶೇಖರ ಹಾಗೂ ಕಸೂತಿ ಕಲಾವಿದೆ ಶಶಿಕಲಾ ಬಾಯಾರು ಅವರಿಗೆ ದಿ. ಎನ್. ಆರ್. ಬೇಕಲ್ ಸ್ಮರಣಾರ್ಥ ಶಶಿಕಾಂತ್ ರಾವ್ ಬೇಕಲ್ ಪ್ರಾಯೋಜಿತ ‘ರಂಗ ಚಿನ್ನಾರಿ ಪ್ರಶಸ್ತಿ’, ಯುವ ಪ್ರತಿಭೆಗಳಾದ ಕಾರ್ತಿಕ್ ಪಡ್ರೆ ಮತ್ತು ಶಿವಾನಿ ಕೆ. ಕೂಡ್ಲು ಅವರಿಗೆ ದಿ. ದೇರಪ್ಪ ಸ್ಮರಣಾರ್ಥ ಸುಧಾಕರ ಸಾಲ್ಯಾನ್ ಪ್ರಾಯೋಜಿತ ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಶಶಿಕಲಾ ಬಾಯಾರು ಅವರು “ಫಲಾಪೇಕ್ಷೆಯಿಲ್ಲದೆ ಮಾಡುವ ಕೆಲಸಕ್ಕೆ ಗೌರವ ಸಂದಾಯವಾದಾಗ ಆಗುವ ಅನುಭವ ವರ್ಣಿಸಲಸಾಧ್ಯ ಎಂದು ತನ್ನ ಸಾಹಿತ್ಯ ಯಾತ್ರೆಯ ಕುರಿತಾದ ಮಾಹಿತಿ ನೀಡಿದರು. ರಂಗ ಚಿನ್ನಾರಿಯ ಯುವ ಪ್ರಶಸ್ತಿ ಸ್ವೀಕರಿಸಿದ ಕಾರ್ತಿಕ್ ಪಡ್ರೆ ಅವರು ತಂದೆ ತಾಯಿ ಗುರುಗಳ ಸಮ್ಮುಖದಲ್ಲಿ ಸ್ವೀಕರಿಸುವ ಪ್ರಶಸ್ತಿಗೆ ಬೆಲೆ ಕಟ್ಟಲಸಾಧ್ಯ” ಎಂದರು.
ಪ್ರಶಸ್ತಿ ವಿಜೇತರಿಗೆಲ್ಲಾ ಕನ್ನಡ ಭಾವ ಗೀತೆಗಳನ್ನು ಹಾಡುವ ಮುಖಾಂತರ ಗೌರವ ಸಲ್ಲಿಸಲಾಯಿತು. ಸ್ವರ ಚಿನ್ನಾರಿ ಸದಸ್ಯೆಯರಾದ ಅಕ್ಷತಾ ವರ್ಕಾಡಿ, ಕಿಶೋರ ಪೆರ್ಲ, ವೇಧಾ ಕಾಮತ್, ಬಬಿತಾ ಆಚಾರ್ಯ, ರತ್ನಾಕರ ಎಸ್. ಓಡಂಗಲ್, ಬಿ.ಪಿ. ಗೋಪಾಲ ಕೃಷ್ಣ ಆಚಾರ್ಯರು ಭಾವಗೀತೆಗಳನ್ನು ಹಾಡಿ ರಂಜಿಸಿದರು. ರಾಜ್ಯ ಮಟ್ಟದಲ್ಲಿ ಸ್ಕೌಟ್ ಸಾಧನೆ ಮಾಡಿದ ಕಿರಣ್ ಪ್ರಸಾದ್ ಕೂಡ್ಲು, ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ನಿಯುಕ್ತಿಗೊಂಡ ಸಂಕ ಬೈಲು ಸತೀಶ್ ಅಡಪ ಹಾಗೂ ಕೇರಳ ಗಡಿನಾಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ನಿಯುಕ್ತಗೊಂಡ ಡಾ. ಜಯಪ್ರಕಾಶ ತೊಟ್ಟೆ ತೋಡಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ದಿವ್ಯಾ ಗಟ್ಟಿ ಪರಕ್ಕಿಲ ಮತ್ತು ಸರ್ವಮಂಗಳ ಪುಣಿಂಚಿತ್ತಾಯ ನಿರೂಪಿಸಿ, ಕಾಸರಗೋಡು ಚಿನ್ನಾ ಪ್ರಾಸ್ತಾವಿಸಿ, ಸ್ವಾಗತಿಸಿ, ವಂದಿಸಿದರು.
ರಂಗ ಚಿನ್ನಾರಿಯ ನಿರ್ದೇಶಕರಾದ ಕೆ. ಸತ್ಯನಾರಾಯಣ, ಮನೋಹರ ಶೆಟ್ಟಿ, ಜನಾರ್ದನ ಅಣಂಗೂರು, ಶರಣ್ಯ ನಾರಾಯಣನ್ ನಾರಿ ಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್, ಸ್ವರ ಚಿನ್ನಾರಿಯ ಗೌರವಾಧ್ಯಕ್ಷರಾದ ಶ್ರೀ ಕೃಷ್ಣಯ್ಯ ಅನಂತಪುರ ಮುಂತಾದವರು ಉಪಸ್ಥಿತರಿದ್ದರು.