ಬೆಂಗಳೂರು : ‘ಜನಪದರು ಸಾಂಸ್ಕೃತಿಕ ವೇದಿಕೆ’ಯಿಂದ ‘ರಂಗಮಾಲೆ -75’ ಅಮೃತ ಮಹೋತ್ಸವ ಪ್ರಯುಕ್ತ ಮೂರು ದಿನಗಳ ರಂಗ ಸಂಭ್ರಮವು ದಿನಾಂಕ 14-10-2023, 15-10-2023 ಮತ್ತು 16-10-2023ರಂದು ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ನಡೆಯಲಿದೆ.
ದಿನಾಂಕ 14-10-2023ರಂದು ಸಂಜೆ 6.30ಕ್ಕೆ ಸಿದ್ದೇಶ್ವರ ನನಸುಮನೆ ರಚಿಸಿ ನಿರ್ದೇಶಿಸಿರುವ ‘ಮಾತೆ ಮಹತ್ವ’ ನಾಟಕ ಪ್ರದರ್ಶನಗೊಳ್ಳಲಿದೆ. ಮಂಡೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗುರುರಾಜ್ ನಿಂಬೆಕಾಯಿಪುರ ಇವರು ಈ ಕಾರ್ಯಕ್ರಮದ ಪ್ರಾಯೋಜಕರು.
ದಿನಾಂಕ 15-10-2023ರಂದು ಸಂಜೆ 6.30ಕ್ಕೆ ಡಾ. ಸಿದ್ಧಲಿಂಗಯ್ಯ ರಚಿಸಿರುವ ಹಾಗೂ ನಾಗೇಶ್ ಬೋಧನ ಹೊಸಹಳ್ಳಿ ನಿರ್ದೇಶಿಸಿರುವ ‘ಏಕಲವ್ಯ’ ನಾಟಕ ಪ್ರದರ್ಶನ ನಡೆಯಲಿದ್ದು, ಬಿದರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಬಿ.ಜಿ. ರಾಜೇಶ್ ಬಿದರಹಳ್ಳಿ ಈ ಕಾರ್ಯಕ್ರಮದ ಪ್ರಾಯೋಜಕರಾಗಿರುತ್ತಾರೆ.
ದಿನಾಂಕ 16-10-2023ರಂದು ಸಂಜೆ 6.30ಕ್ಕೆ ಮುದೇನೂರು ಸಂಗಣ್ಣ ರಚಿಸಿರುವ ಹಾಗೂ ರಾಮಕೃಷ್ಣ ಬೆಳ್ತೂರು ನಿರ್ದೇಶಿಸಿರುವ ‘ಸೂಳೆ ಸಂಕವ್ವ’ ನಾಟಕ ಪ್ರದರ್ಶನಗೊಳ್ಳಲಿದ್ದು, ಶ್ರೀಮತಿ ಅಮರವತಿ ಮುನಿರಾಜು ಗೌಡ ಇವರು ಈ ಕಾರ್ಯಕ್ರಮದ ಪ್ರಾಯೋಜಕರು.
ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ (ರಿ) – ಕರ್ನಾಟಕದ ರಂಗಭೂಮಿಯಲ್ಲಿ ಕಾಲು ಶತಮಾನದಿಂದ ಜನ ಜಾಗೃತಿಗೆ ಬರಲು ಕಲಾ ಮಾಧ್ಯಮ ಸಶಕ್ತ ಮಾಧ್ಯಮ ಎಂದು ನಂಬಿ, ಪ್ರಾರಂಭದಲ್ಲಿ ಬೀದಿ ನಾಟಕ ಚಳುವಳಿಯನ್ನ ಆಯ್ಕೆ ಮಾಡಿಕೊಂಡ ಇವರು 500ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನರ ಮನಗೆದ್ದರು. ಈ ಭಾಗದಲ್ಲಿ ಪ್ರಾಯೋಗಿಕ ರಂಗಭೂಮಿ ಹುಟ್ಟುಹಾಕಲು ವೇದಿಕೆ ಅಧ್ಯಕ್ಷ ಪಾಪಣ್ಣ ಕಾಟ0 ನಲ್ಲೂರು ಜೊತೆ ಉಪನ್ಯಾಸಕ ಜಗದೀಶ ಕೆಂಗನಾಳ್ ರಾಮಕೃಷ್ಣ ಬೆಳತ್ತೂರು, ಚಲಪತಿ ಕೆ.ಸಿ. ಶಿವಕುಮಾರ್, ಜನಾರ್ಧನ ಟಿ., ರಾಮಚಂದ್ರಮೂರ್ತಿ ಕೈ ಜೋಡಿಸಿದರು. ಮೊದಮೊದಲು ನಾಡಿನ ಖ್ಯಾತ ರೆಪರ್ಟರಿಗಳಾದ ನೀನಾಸಂ, ಶಿವಸಂಚಾರ, ರಂಗಾಯಣಗಳ ನಾಟಕೋತ್ಸವ ಮತ್ತು ವಾರ್ಷಿಕ ಸಂಘಟನೆ ಮಾಡಲು ಅಣಿಯಾಯಿತು. ಆಗ ಪ್ರಾಯೋಜಕತೆಯ ಕೊರತೆಯನ್ನು ನೀಗಿಸಲು ವೇದಿಕೆ ಅಧ್ಯಕ್ಷರು ಸಬಲ ಆಸರೆ ನೀಡಿದರು. ಕೆಲ ತಿಂಗಳ ಮೇಲೆ ಬೆಂಗಳೂರು ತಂಡಗಳಲ್ಲಿ ಗುರುತಿಸಿಕೊಂಡಿದ್ದ ದೊಡ್ಡಬನಹಳ್ಳಿ ಸಿದ್ದೇಶ್ವರ ಬಂದರು. ನೋಂದಣಿ ಮಾಡಿ ಕಲಾವಿದರನ್ನ ಸಿದ್ದಗೊಳಿಸಿ ತಾವೂ ನಟಿಸಿ ಪ್ರಧಾನ ಕಾರ್ಯದರ್ಶಿ ಆಗಿ ಮುನ್ನಡೆಸಿದರು. ತಿರುಕರಾಜ, ನಾಯಿ ತಿಪ್ಪ, ಸಾಂಬಶಿವ ಪ್ರಹಸನ, ದುರ್ಗಾಸ್ತಮಾನ, ಕಿಂದರಜೋಗಿ, ಅಗ್ನಿದಿವ್ಯ, ತಾಜಮಹಲ್ ಟೆ೦ಡರ್, ಸೂಳೆ ಸಂಕವ್ವ ಈ ನಾಟಕಗಳನ್ನು ರಾಮಕೃಷ್ಣ ಬೆಳ್ತೂರು ಹಾಗೂ ಕನ್ನಡ ಅಲೆಮಾರಿ ಬುಡಕಟ್ಟು ಕುರಿತ ಮೊದಲ ನಾಟಕ ಬುಡ್ಗನಾದ, ಉರುಳು, ಸಿರಿಗೆ ಸೆರೆ, ಶ್ರೀ ಕೃಷ್ಣ ಸಂಧಾನ, ಮಾಮಾಮೂಶಿಗಳನ್ನು ಎಂ. ಸುರೇಶ್ ಇವರು ತ೦ಡಕ್ಕಾಗಿ ನಿರ್ದೇಶನ ಮಾಡಿದ್ದಾರೆ. ಅಲ್ಲದೆ ಸಿದ್ದೇಶ್ವರ ನನಸುಮನೆ ರಚನೆ ಮತ್ತು ನಿರ್ದೇಶನದ Some ಸಾರ, ಮಾತೆ ಮಹತ್ವ ಹಾಗೂ ಸಾಯೋಆಟ ಈ ನಾಟಕಗಳನ್ನು ಸಾಗರ ದೀಕ್ಷಿತ್, ಏಕಲವ್ಯವನ್ನು ನಾಗೇಶ ಬೋಧನ ಹೊಸಹಳ್ಳಿ ನಿರ್ದೇಶನ ಮಾಡಿ ದೆಹಲಿ, ಅಹಮದಾಬಾದ್, ಹೈದರಾಬಾದ್ ಮತ್ತು ಬೆಂಗಳೂರು ಸೇರಿ ನಾಡಿನ ಮೂಲೆ ಮೂಲೆಗಳಲ್ಲಿ ಪ್ರದರ್ಶನ ಮಾಡಿ ಪ್ರೇಕ್ಷಕರ ಹಾಗೂ ವಿಮರ್ಶಕರ ಮನ ಗೆದ್ದಿದ್ದಾರೆ.
ಮೊದಲು ಹೊಸಕೋಟೆ – ಕಾಟಂ ನಲ್ಲೂರು ನಾಟಕದ ಕೇಂದ್ರ ಸ್ಥಾನವಾಗಿತ್ತು 2016ರ ಮಾರ್ಚ್ 27 ವಿಶ್ವ ರಂಗಭೂಮಿ ದಿನದಿಂದ ಪ್ರತಿ ತಿಂಗಳು 2ನೇ ಶನಿವಾರ ಸಂಜೆ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ‘ರಂಗಮಾಲೆ’ ಹೆಸರಿನ ಕಾರ್ಯಕ್ರಮದಲ್ಲಿ ‘ಜನಪದರು ತಂಡ’ದ ಜೊತೆ ನಾಡಿನ ಖ್ಯಾತ ತಂಡಗಳನ್ನು ಕರೆಯಿಸಿ ಉಚಿತ ನಾಟಕ ಪ್ರದರ್ಶನವನ್ನು ದಾನಿಗಳ ಸಹಕಾರದಿಂದಲೇ ಆರಂಭಿಸಿ ಇಂದಿಗೆ 600ಕ್ಕೂ ಹೆಚ್ಚು ಪ್ರಬುದ್ಧ ರಂಗಾಸಕ್ತರು ತಪ್ಪದೆ ಬರುವಂತೆ ರಂಗಾಸಕ್ತಿಯನ್ನು ಬೆಳೆಸಿದೆ. ಕರೋನಾ ಸಂಕಷ್ಟದ ಸಮಯದಲ್ಲಿ ನಿರ್ಭಂಧ ಕಾಲ ಹೊರತು ಪಡಿಸಿ ಈ ಅಕ್ಟೋಬರ್ 14ಕ್ಕೆ 75 ತಿಂಗಳು ತಲುಪಿ ಅಮೃತ ಮಹೋತ್ಸವಕ್ಕಾಗಿ ಮೂರು ದಿನ 14, 15 ಮತ್ತು 16ರಂದು ರಂಗ ಸಂಭ್ರಮ ಆಚರಿಸುತ್ತಿದೆ. ಮೂರು ದಿನಗಳೂ ತಂಡದ ಸಿದ್ದೇಶ್ವರ ನನಸುಮನೆಯವರ ಕೃತಿ ಬಿಡುಗಡೆಯೊಂದಿಗೆ ‘ಮಾತೆ ಮಹತ್ವ’, 15ರಂದು ಸಿದ್ಧಲಿಂಗಯ್ಯನವರ ‘ಏಕಲವ್ಯ’ ನಿರ್ದೇಶಕ ನಾಗೇಶ ಬೋಧನ ಹೊಸಹಳ್ಳಿ ಮತ್ತು 16ರಂದು ಮುದೇನೂರು ಸಂಗಣ್ಣನವರ ‘ಸೂಳೆ ಸಂಕವ್ವ’ ನಿರ್ದೇಶಕ ರಾಮಕೃಷ್ಣ ಬೆಳ್ತೂರು ಉಪಸ್ಥಿತರಿದ್ದು ನಾಡಿನ ಸಾಂಸ್ಕೃತಿಕ ರಾಯಭಾರಿ ಎನಿಸಿಕೊಂಡ ಸಾಣಿಹಳ್ಳಿಯ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವರು ಅವರೊಂದಿಗೆ ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ, ಶ್ರೀ ಅರವಿಂದ ಲಿಂಬಾವಳಿ ಮಾಜಿ ಸಚಿವರು, ಸಾಂಸ್ಕೃತಿಕ ಚಿಂತಕ, ನಾಟಕಕಾರ ಮತ್ತು ಹಿರಿಯ ಕಂದಾಯ ಸೇವೆ ಅಧಿಕಾರಿ ಶ್ರೀ ಜಯರಾಮ್ ರಾಯಪುರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಲಾವಿದರು ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಕರೋನಾ ಕಾಲದಲ್ಲಿ ಉದ್ಧಾಟನೆಗೊಂಡ ಕೇವಲ ಜನರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಾಯದಿಂದ ಭಾರತದ ಆಧುನಿಕ ತಂತ್ರಜ್ಞಾನದ ರಿವಾಲ್ವಿಂಗ್ ರಂಗಮಂಚ ಹೊಂದಿದ ‘ಜನಪದರು’ ರಂಗ ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಗಣ್ಯರಿಗೆ, ಕಲಾವಿದರಿಗೆ ಸನ್ಮಾನ ಗೌರವ ಏರ್ಪಡಿಸಿದೆ ಎಂದು ವೇದಿಕೆ ಅಧ್ಯಕ್ಷ ಪಾಪಣ್ಣ ಕಾಟ0 ನಲ್ಲೂರು ತಿಳಸಿದ್ದಾರೆ.