ಉಡುಪಿ : ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹಿರಿಯರ ನೆನಪಲಿ ರಂಗೋತ್ಸವ ‘ರಂಗನಮನ’ ಕಾರ್ಯಕ್ರಮವು ದಿನಾಂಕ 13-10-2023ರಿಂದ 15-10-2023ರವರೆಗೆ ನಡೆಯಿತು.
ದಿನಾಂಕ 13-10-2023ರಂದು ನಡೆದ ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ಸಹಕುಲಾಧಿಪತಿ ಹಾಗೂ ರಂಗಭೂಮಿ ಉಡುಪಿ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಎಚ್.ಎಸ್. ಬಲ್ಲಾಳ್ ಇವರು ಮಾತನಾಡುತ್ತಾ “ಸಂಸ್ಥೆಯ ಏಳ್ಗೆಗೆ ಜೀವನವನ್ನು ಮುಡಿಪಿಟ್ಟ ಹಿರಿಯ ಚೇತನಗಳನ್ನು ಸ್ಮರಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಅಗಲಿದ ಪದಾಧಿಕಾರಿಗಳ ಸ್ಮರಣೆ ಹಾಗೂ ಸಾಧಕ ಕಲಾವಿದರಿಗೆ ಗೌರವಾರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಮಾಹೆಯಿಂದ ರಂಗಭೂಮಿ ಉಡುಪಿ ಸಂಸ್ಥೆಯ ಚಟುವಟಿಕೆಗಳಿಗೆ ಆಶ್ರಯ ಹಾಗೂ ಪ್ರೋತ್ಸಾಹವನ್ನು ನಿರಂತರವಾಗಿ ನೀಡುತ್ತಾ ಬರಲಾಗಿದೆ. ರಂಗಭೂಮಿ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿವೆ. ರಂಗಭೂಮಿಯತ್ತ ಯುವ ಜನತೆಯನ್ನು ಸೆಳೆಯುವ ಅಗತ್ಯವಿದ್ದು ರಂಗಾಸಕ್ತಿ ಬೆಳೆಸಬೇಕಿದೆ” ಎಂದರು.
ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, “ರಂಗಭೂಮಿಗೆ ಅವಿರತವಾಗಿ ದುಡಿದು ಅಗಲಿದ ಪಿ.ವಾಸುದೇವ ರಾವ್, ಯು.ಉಪೇಂದ್ರ, ಶ್ರೀನಿವಾಸ ಶೆಟ್ಟಿಗಾರ್, ಎಂ. ನಂದ ಕುಮಾರ್, ಯು.ದುಗ್ಗಪ್ಪ ಹಾಗೂ ಮೇಟಿ ಮುದಿಯಪ್ಪ ಅವರ ಸ್ಮರಣಾರ್ಥ ಮೂರು ದಿನ ನಡೆಯುವ ರಂಗ ನಮನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಆರು ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು” ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, “ಉಡುಪಿ ಜಿಲ್ಲೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ರಾಜ್ಯದಲ್ಲಿ ಮುಂಚೂಣಿಯಲ್ಲಿರಲು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಶ್ರೀಮಂತಿಕೆ ಕಾರಣವಾಗಿದೆ” ಎಂದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ ಕಾಲೇಜಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ರಂಗಭೂಮಿ ಉಡುಪಿಯ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭ ಹಿರಿಯ ರಂಗಕರ್ಮಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರಿಗೆ ‘ಪಿ.ವಾಸುದೇವ ರಾವ್ ಸಂಸ್ಮರಣ ರಂಗಭೂಮಿ ಸನ್ಮಾನ’, ಬೈಂದೂರಿನ ‘ಲಾವಣ್ಯ ಬೈಂದೂರು’ ಸಂಸ್ಥೆಯ ಗಣೇಶ್ ಕಾರಂತ್ ಅವರಿಗೆ ‘ಯು.ಉಪೇಂದ್ರ ರಂಗಭೂಮಿ ಸನ್ಮಾನ’ ಮಾಡಲಾಯಿತು. ಬೆಂಗಳೂರಿನಲ್ಲಿ ನಡೆದ ಮಿಸ್ ಟೀನ್ ಕರ್ನಾಟಕ 2023ರಲ್ಲಿ ಬೆಸ್ಟ್ ರಾಂಪ್ ವಾಕ್ ಪ್ರಶಸ್ತಿ ಸಹಿತ ಮಿಸ್ ಟೀನ್ ಕರ್ನಾಟಕ 2023 ಪ್ರಶಸ್ತಿ ಮುಡಿಗೇರಿಸಿಕೊಂಡ ಎಂ.ಜಿ.ಎಂ. ಕಾಲೇಜಿನ ಹಳೆಯ ವಿದ್ಯಾರ್ಥಿನಿ ಸಿಂಚನಾ ಪ್ರಕಾಶ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ಶ್ಯಾಮಲಾ ಉಪೇಂದ್ರ, ಡಾ.ಗಣಪತಿ ಉಪಸ್ಥಿತರಿದ್ದರು. ಲೇಖಕಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು, ರಂಗಭೂಮಿ ಉಡುಪಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ವಂದಿಸಿದರು. ಎಂ.ವಿವೇಕಾನಂದ ಅತಿಥಿಗಳನ್ನು ಪರಿಚಯಿಸಿದರು. ಹೊಂಗಿರಣ ಶಿವಮೊಗ್ಗ ಸಂಸ್ಥೆಯ ಶೃತಿ ಆದರ್ಶ ಅವರಿಂದ ಏಕವ್ಯಕ್ತಿ ರಂಗ ಪ್ರಸ್ತುತಿ ‘ನಿರಾಕರಣೆ’ ಪ್ರದರ್ಶನವಾಯಿತು.
ದಿನಾಂಕ 14-10-2023ರಂದು ನಡೆದ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರಂಗಭೂಮಿ ಉಡುಪಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಆಶಾ ಜ್ಯುವೆಲ್ಲರ್ ಉಡುಪಿಯ ಶ್ರೀ ರವಿಶಂಕರ್ ಶೇಟ್, ಮಲ್ಪೆಯ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮತ್ತು ಬಿಲ್ಲವರ ಸೇವಾ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀ ಗೋಪಾಲ ಸಿ. ಬಂಗೇರ, ರಥಬೀದಿ ಗೆಳೆಯರು (ರಿ.) ಉಡುಪಿ ಇದರ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಸುಬ್ರಹ್ಮಣ್ಯ ಜೋಷಿ ಮತ್ತು ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾದ ಶ್ರೀಮತಿ ಅಹಲ್ಯಾ ನಂದಕುಮಾರ್ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಕೋಶಿಕಾ ರಂಗತಂಡ ಚೇರ್ಕಾಡಿಯ ಹಿರಿಯ ರಂಗಕರ್ಮಿ ಶ್ರೀಮತಿ ಭಗವತಿ ಆನಗಳ್ಳಿ ಇವರಿಗೆ ‘ದಿ. ಶ್ರೀನಿವಾಸ್ ಎಸ್. ಶೆಟ್ಟಿಗಾರ್ ಸಂಸ್ಮರಣ ರಂಗಭೂಮಿ ಸಂಮಾನ’ ಹಾಗೂ ಉಡುಪಿಯ ತುಳುಕೂಟ (ರಿ.) ಇದರ ಪ್ರಧಾನ ಕಾರ್ಯದರ್ಶಿ ಹಾಗೂ ನಾಟಕಕಾರರಾದ ಶ್ರೀ ಗಂಗಾಧರ ಕಿದಿಯೂರು ಇವರಿಗೆ ‘ದಿ. ಎಂ. ನಂದಕುಮಾರ್ ಸಂಸ್ಮರಣ ರಂಗಭೂಮಿ ಸಂಮಾನ’ ಮಾಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸುರಭಿ (ರಿ.) ಬೈಂದೂರು ಪ್ರಸ್ತುತಪಡಿಸುವ ಡಾ.ಕೋಟ ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಚೋಮನ ದುಡಿ’ ನಾಟಕ ಪ್ರದರ್ಶನಗೊಂಡಿತು.
ದಿನಾಂಕ 15-10-2023 ಭಾನುವಾರದಂದು ನಡೆದ ಮೂರನೇ ದಿನದ ಕಾರ್ಯಕ್ರಮದಲ್ಲಿ ಬ್ರಹ್ಮಾವರದ ಯಕ್ಷೋನ್ನತಿ ಕಲಾ ತಂಡ ಪ್ರಸ್ತುತಪಡಿಸುವ ಯಕ್ಷಗುರು ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ರಚನೆ, ನಿರ್ದೇಶನ ಮತ್ತು ಭಾಗವತಿಕೆಯ ಯಕ್ಷಗಾನ ರೂಪಕ ‘ಚಿತ್ರ ಪಲ್ಗುಣ’ ಪ್ರದರ್ಶನವನ್ನು ಕಲಾವಿದರಾದ ಶ್ರೀ ಶಶಾಂಕ್ ಪಟೇಲ್ ಕೆಳಮನೆ ಹಾಗೂ ಶ್ರೀಮತಿ ಶೃತಿ ಕಾಶಿ ಇವರು ಪ್ರಸ್ತುತ ಪಡಿಸಿದರು. ಸಭಾ ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿ ಇದರ ಅಧ್ಯಕ್ಷರಾದ ಡಾ.ತಾಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿಯ ಹಿರಿಯ ವೈದ್ಯರಾದ ಡಾ.ಆರ್.ಎನ್. ಭಟ್, ಸಂಚುರಿ ಫಾರ್ಮ್ಸ್ ಉಡುಪಿಯ ಶ್ರೀ ರಾಜರಾಮ್ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಹಾಗೂ ಶ್ರೀ ಆದಿತ್ಯ ದುಗ್ಗಪ್ಪ ಮಲ್ಪೆ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಉಡುಪಿಯ ಹಿರಿಯ ಗಾಯಕರಾದ ಶ್ರೀ ಕೃಷ್ಣ ಕಾರಂತ್ ಇವರಿಗೆ ‘ದಿ.ಯು. ದುಗ್ಗಪ್ಪ ಸಂಸ್ಮರಣ ರಂಗಭೂಮಿ ಸಂಮಾನ’ ಹಾಗೂ ಬಾಷಾ ಆರ್ಟ್ಸ್ ಉಡುಪಿಯ ಶ್ರೀ ಸುಹಿಲ್ ಇವರಿಗೆ ‘ದಿ. ಮೇಟಿ ಮುದಿಯಪ್ಪ ಸಂಸ್ಮರಣೆ ರಂಗಭೂಮಿ ಸಂಮಾನ’ ಮಾಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆ ಪ್ರಸ್ತುತಪಡಿಸುವ ಡಾ. ಶ್ರೀಪಾದ್ ಭಟ್ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದ ಕಾವ್ಯಾ ಹಂದೆ ಎಚ್. ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯ ಪ್ರದರ್ಶನಗೊಂಡಿತು. ಬೆಳಕಿನ ನಿರ್ವಹಣೆಯಲ್ಲಿ ರಾಜು ಮಣಿಪಾಲ್, ಅನುಷ್ ಶೆಟ್ಟಿ, ಮುನ್ನಾ ಮೈಸೂರು ಅವರ ಸಂಗೀತ ನಿರ್ವಹಣೆಯಲ್ಲಿ ಕಾವ್ಯ ಪ್ರಭು, ರಂಗಸಜ್ಜಿಕೆಯಲ್ಲಿ ವಿನಿತ ಸುಜಯೀಂದ್ರ ಹಂದೆ ಸಹಕರಿಸಿದರು.
ಪಿ. ವಾಸುದೇವ ರಾವ್ : ಉಡುಪಿ ರಂಗಭೂಮಿಯ ಚಟುವಟಿಕೆಗಳಲ್ಲಿ ಎಂಬತ್ತರ ದಶಕದಿಂದ ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದ ವಾಸುದೇವರಾಯರು ಖ್ಯಾತ ಶಿಕ್ಷಣತಜ್ಞ, ಸಾಹಿತಿ, ಅಂಕಣಕಾರ, ಸಂಘಟಕ ಮತ್ತು ರಂಗ ನಿರ್ದೇಶಕರಾಗಿಯೂ ಗುರುತಿಸಲ್ಪಟ್ಟವರು. ಆದರ್ಶ ಪ್ರಾಂಶುಪಾಲರಾಗಿ ಅದೆಷ್ಟೋ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಿ ಬದುಕನ್ನು ರೂಪಿಸಿದವರು. ರಂಗಭೂಮಿಯ ಆಡಳಿತ ಮಂಡಳಿಯ ಸದಸ್ಯರಾಗಿ ಜವಾಬ್ದಾರಿಯ ಹೊಣೆ ಹೊತ್ತ ವಾಸುದೇವರಾಯರು, ವಿವಿಧ ಕಾಲಾವಧಿಗಳಲ್ಲಿ ರಂಗಭೂಮಿಯ ಜೊತೆ ಕಾರ್ಯದರ್ಶಿ, ಕೋಶಾಧಿಕಾರಿ, ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಮಾತ್ರವಲ್ಲ, ರಂಗಭೂಮಿಗೆ ಶಾಶ್ವತ ನೆಲೆ ಕಲ್ಪಿಸಲು ಸ್ಥಳದಾನ ಮಾಡಿ ರಂಗಭೂಮಿಯ ಇತಿಹಾಸದಲ್ಲಿ ಚಿರಂತನ ಕೀರ್ತಿಭಾಜನರಾಗಿದ್ದಾರೆ.
ಯು. ಉಪೇಂದ್ರ : ಕುತ್ಪಾಡಿ ಆನಂದ ಗಾಣಿಗರ ಎಲ್‌ಐಸಿ ಸಹೋದ್ಯೋಗಿಯಾಗಿದ್ದು, ರಂಗಭೂಮಿಗೆ ಎಪ್ಪತ್ತರ ದಶಕದಿಂದ ಕುತ್ಪಾಡಿಯವರಿಗೆ ನೆರವಾಗುತ್ತಾ ಸಂಸ್ಥೆಯ ಬೆಳವಣಿಗೆಯಲ್ಲಿ ಜೊತೆಗಾರರಾಗಿ ಬಂದವರು, ರಂಗಭೂಮಿಯ ಕಾರ್ಯಕ್ರಮಗಳಿಗೆ ಇವರು ನೀಡುತ್ತಿದ್ದ ಪೂರ್ವಭಾವಿ ಮಾರ್ಗದರ್ಶನ ಮತ್ತು ಸಂಸ್ಥೆಯ ಆರ್ಥಿಕ ಶಿಸ್ತಿಗೆ ಇವರ ಕಾಲೋಚಿತ ಸಲಹೆಗಳ ಮೌಲ್ಯವನ್ನು ಬಲ್ಲ ಸದಸ್ಯರಿಗೆ ಉಪೇಂದ್ರರು ‘ಅಂಕಲ್’ ಎಂದೇ ಆಪ್ತರಾಗಿದ್ದರು, ರಂಗಭೂಮಿಯ ಆಮಂತ್ರಣ ಪತ್ರಿಕೆಗಳಿಗೆ ಸುಂದರವಾಗಿ ವಿಳಾಸ ಬರೆಯುತ್ತಿದ್ದ ಉಪೇಂದ್ರರ ಹಸ್ತಾಕ್ಷರದ ಸೊಗಸು ಉಡುಪಿಯ ರಂಗಾಸಕ್ತರಿಗೆ ಚಿರಪರಿಚಿತ, ಮಾಸದ ನೆನಪು.
ಶ್ರೀನಿವಾಸ ಎಸ್ ಶೆಟ್ಟಿಗಾರ್ : ಉಡುಪಿ ರಂಗಭೂಮಿಯ ಆರಂಭದ ದಿನಗಳಿಂದ ಸುದೀರ್ಘಕಾಲ ಸಂಸ್ಥೆಯ ನಾಟಕಗಳಲ್ಲಿ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದು, ಅದಕ್ಕೊಂದು ಸ್ಟಾರ್ ವ್ಯಾಲ್ಯೂ ತಂದುಕೊಟ್ಟವರು ಶ್ರೀನಿವಾಸ ಶೆಟ್ಟಿಗಾರರು. ಒಂದು ಕಾಲದಲ್ಲಿ ಕರಾವಳಿಯ ಅತ್ಯುತ್ತಮ ಸ್ತ್ರೀಪಾತ್ರಧಾರಿಯೆಂದು ಹೆಸರಾಗಿದ್ದ ಇವರು, ಆ ದಿನಗಳಲ್ಲಿ ರಂಗಭೂಮಿ ತಂಡವು ಭಾಗವಹಿಸುತ್ತಿದ್ದ ಸ್ಪರ್ಧೆಗಳಲ್ಲಿ ತಂಡಕ್ಕೆ ಪ್ರಶಸ್ತಿ ಹಾಗೂ ತನ್ನ ಸ್ತ್ರೀಪಾತ್ರಕ್ಕೆ ಪ್ರಥಮ ಬಹುಮಾನ ಪಡೆಯುತ್ತಿದ್ದರು. ಸತತ ಎಂಟು ಸ್ಪರ್ಧೆಗಳಲ್ಲಿ ತಮ್ಮ ಸ್ತ್ರೀಪಾತ್ರಕ್ಕೆ ಪ್ರಥಮ ಬಹುಮಾನ ಪಡೆದು, ಬಂಗಾರದ ಪದಕದಿಂದ ಸಮ್ಮಾನಿತರಾದ ಶ್ರೀನಿವಾಸ ಶೆಟ್ಟಿಗಾರರು ರಂಗಭೂಮಿಯು ವಿದೇಶದಲ್ಲಿ ಪ್ರದರ್ಶನ ನೀಡಲು ಕಾರಣಕರ್ತರಾಗಿದ್ದರು.
ಎಂ. ನಂದಕುಮಾರ್ : ವಿದ್ಯಾರ್ಥಿ ದಿನಗಳಿಂದ ಸಂಘಟಕರಾಗಿ ಹೆಸರು ಮಾಡಿದ್ದ ನಂದಕುಮಾರ್ ರಂಗಭೂಮಿಯೊಂದಿಗೆ, ಲಯನ್ಸ್, ಜೇಸಿಸ್, ಜಯಂಟ್ ಇಂಟರ್ ನ್ಯಾಶನಲ್ ಮೊದಲಾದ ಹಲವು ಸಂಘಟನೆಗಳಲ್ಲಿ ತೊಡಗಿ, ಅವುಗಳನ್ನು ಬೆಳಗಿಸಿ ತಾವೂ ಬೆಳೆದರು. ರಂಗಭೂಮಿ (ರಿ.) ಉಡುಪಿ ಮತ್ತು ತುಳುಕೂಟಗಳ ಆಡಳಿತ ಮಂಡಳಿಯಲ್ಲಿದ್ದು ಅವುಗಳ ಸಾಂಸ್ಕೃತಿಕ ಚಟುವಟಿಕೆಗಳ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಉಡುಪಿ ರಂಗಭೂಮಿಯ ಪದಾಧಿಕಾರಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿ, ತಮ್ಮ ಕೊನೆಯ ದಿನಗಳಲ್ಲಿ ರಂಗಭೂಮಿಯ ಉಪಾಧ್ಯಕ್ಷರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದರು. ಪ್ರತಿಭಾನ್ವಿತ ನಿರ್ದೇಶಕರ ಕನ್ನಡ ಮತ್ತು ತುಳು ನಾಟಕಗಳಲ್ಲಿ, ಚಲನಚಿತ್ರಗಳಲ್ಲಿ, ಟಿ.ವಿ ಧಾರಾವಾಹಿಗಳಲ್ಲಿ, ಸಿಂಡಿಕೇಟ್ ಬ್ಯಾಂಕಿನ ಯಕ್ಷಗಾನ ತಂಡದಲ್ಲಿ ಪಾತ್ರನಿರ್ವಹಿಸಿದ್ದ ನಂದಕುಮಾರ್ ಒಬ್ಬ ಅಭಿಜಾತ ಕಲಾವಿದೆ.
ಯು ದುಗ್ಗಪ್ಪ : ವ್ಯಕ್ತಿತ್ವ ವಿಕಸನ, ಯಕ್ಷಗಾನ, ಬ್ಯಾಂಕಿಂಗ್ ಮೊದಲಾದ ಹಲವು ವೇದಿಕೆಗಳಲ್ಲಿ ಮಿಂಚಿದ್ದ ಯು. ದುಗ್ಗಪ್ಪನವರು 90ರ ದಶಕದಿಂದ ಉಡುಪಿ ರಂಗಭೂಮಿಯ ಮುಂಚೂಣಿಯಲ್ಲಿ ಕಾಣಿಸಿಕೊಂಡವರು. ಜೇಸೀಸ್ ಸಂಸ್ಥೆಯಲ್ಲಿ ತರಬೇತುದಾರರೂ, ವಲಯಾಧ್ಯಕ್ಷರೂ ಆಗಿದ್ದ ಇವರು ಸಾಹಿತಿಯೂ ಪತ್ರಕರ್ತರೂ ಆಗಿ ಹೆಸರು ಗಳಿಸಿದ್ದರು. ರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸಿದ್ದ. ದುಗ್ಗಪ್ಪನವರು, ಸಂಸ್ಥೆಯ ವಿವಿಧ ಪದಾಧಿಕಾರಗಳನ್ನು ನಿರ್ವಹಿಸಿ, ತಮ್ಮ ಕೊನೆಯ ದಿನಗಳಲ್ಲಿ ಕೋಶಾಧಿಕಾರಿಯಾಗಿ ರಂಗಭೂಮಿಯ ಆರ್ಥಿಕ ಶಿಸ್ತಿಗೆ ಕಾರಣಕರ್ತರಲ್ಲಿ ಒಬ್ಬರಾಗಿದ್ದರು.
ಮೇಟಿ ಮುದಿಯಪ್ಪ : ಕವಿಯಾಗಿ, ಬಂಡಾಯ ಸಾಹಿತಿಯಾಗಿ, ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಬಡ ವಿದ್ಯಾರ್ಥಿಗಳಿಗೆ ಆಶ್ರಯದಾತರಾಗಿ ಹೆಸರಾದ ಮೇಟಿ ಮುದಿಯಪ್ಪನವರು ತೊಂಬತ್ತರ ದಶಕದಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ರಂಗಕಲಾವಿದರಾಗಿ, ರಂಗಭೂಮಿಯ ಪದಾಧಿಕಾರಿಗಳಾಗಿ, ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾದವರು. ಚಲನಚಿತ್ರ ಹಾಗೂ ಟಿವಿ ನಟನೆಯಲ್ಲೂ ತೊಡಗಿಸಿಕೊಂಡಿದ್ದ ಇವರು, ಕನಕದಾಸರ ಸಾಹಿತ್ಯದ ಕುರಿತು ವಿದ್ವತ್ ಪೂರ್ಣವಾಗಿ ಮಾತನಾಡ ಬಲ್ಲವರಾಗಿದ್ದ ಮೇಟಿ ಮುದಿಯಪ್ಪನವರು ಉಡುಪಿಯ ಕನಕದಾಸ ಪೀಠ, ಲಯನ್ಸ್ ಮೊದಲಾದ ಸಂಘಟನೆಗಳಲ್ಲಿ ಗುರುತರವಾದ ಪಾತ್ರವನ್ನು ನಿರ್ವಹಿಸಿದ್ದರು.