ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ವತಿಯಿಂದ ಅಭಿನಂದನಾ ಸಮಾರಂಭ ಮತ್ತು ತೆಕ್ಕಟ್ಟೆ ಯಶಸ್ವಿ ಕಲಾಕೇಂದ್ರದ ವಾರ್ಷಿಕೋತ್ಸವದ ಪ್ರಯುಕ್ತ ‘ರಂಗಾರ್ಪಣ’ ಕಾರ್ಯಕ್ರಮವು ದಿನಾಂಕ 07 ಡಿಸೆಂಬರ್ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಪ್ರಾಚಾರ್ಯ ಕೆ.ಪಿ. ಹೆಗಡೆ, ಕೋಟ ಸುರೇಶ್ ಬಂಗೇರ, ಐರ್ಬೈಲ್ ಆನಂದ ಶೆಟ್ಟಿ, ಲಕ್ಷ್ಮೀ ಮಚ್ಚಿನ, ಸತೀಶ್ ಪೂಜಾರಿ, ಸುದೀಪ್ ಮಲ್ಯಾಡಿ ಹಾಗೂ ಶಿವರಾಮ ಕಾರಂತ ಬಾಲ ಪುರಸ್ಕೃತ ಹರ್ಷಿತಾ ಅಮೀನ್ ಇವರನ್ನು ಅಭಿನಂದಿಸಿಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಲ್ಲೂರು ಶಿವರಾಮ ಶೆಟ್ಟಿ “ವಿಶಿಷ್ಟ ಪರಿಕಲ್ಪನೆಯಿಂದಲೇ ಕಾರ್ಯಕ್ರಮವನ್ನು ಗೆಲ್ಲುವ ಸಂಸ್ಥೆ ಯಶಸ್ವೀ ಕಲಾವೃಂದ. ರಾಜ್ಯೋತ್ಸವ ಪುರಸ್ಕಾರ ಯಶಸ್ವೀ ಕಲಾವೃಂದದ ಗುರುವಿಗೂ ಬಂದಿರುವುದು ನನಗೂ ಸಂತೋಷ ತಂದಿದೆ. ಸಾಧನಾ ಕ್ಷೇತ್ರದಲ್ಲಿ ಬಹಳ ದೂರ ಸಾಗಿ ಬಂದ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ ದೊರೆತಾಗ ಪ್ರತೀ ವರ್ಷವು ಸಂಭ್ರಮಿಸುವುದು ಯಶಸ್ವಿ ಕಲಾವೃಂದ. ಅನೇಕರನ್ನು ಈ ವೇದಿಕೆಯಲ್ಲಿ ಅಭಿನಂದಿಸಿ ಸಂತೋಷ ಕಂಡಿದ್ದನ್ನು ಗಮನಿಸಿದ್ದೇನೆ” ಎಂದು ಸಾಧಕರನ್ನು ಅಭಿನಂದಿಸಿ ಮಾತನಾಡಿದರು.
ಉಡುಪಿ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, “ಎಲ್ಲಾ ಕಲೆಗಳನ್ನು ಒಪ್ಪಿಕೊಂಡು, ಅಪ್ಪಿಕೊಂಡು ಕಲಿಸುತ್ತಿರುವ ಸಂಸ್ಥೆ ಯಶಸ್ವೀ ಕಲಾವೃಂದ. ಇತ್ತೀಚೆಗೆ ಯಕ್ಷಗಾನಕ್ಕೆ ಕೊಡುವ ಪ್ರೋತ್ಸಾಹ ಬೇರಾವ ಕಲೆಗೂ ಇಲ್ಲ. ಯಕ್ಷಗಾನಕ್ಕೆ ಅಳಿವಿಲ್ಲ. ಸಮಾಜದಲ್ಲಿ ಯಕ್ಷಗಾನ ಮಾನ್ಯತೆ ಹೊಂದಿದೆ. ಈ ಭಾಗದಲ್ಲಿ ಬಹಳ ದೊಡ್ಡ ಕೆಲಸ ಈ ಸಂಸ್ಥೆ ಮಾಡಿದೆ” ಎಂದರು. ಅಭಿನಂದನೆ ಸಲ್ಲಿಸಿಕೊಂಡ ಲಕ್ಷ್ಮೀ ಮಚ್ಚಿನ ಮಾತಾಡಿ, “ವೃತ್ತಿಯ ಒತ್ತಡದಲ್ಲಿರುವ ಡಾಕ್ಟರ್ ವೃತ್ತಿಯವರನ್ನೂ ಯಕ್ಷಗಾನ ಎನ್ನುವ ಒಂದು ಸರಪಳಿಯಲ್ಲಿ ಈ ಸಂಸ್ಥೆ ಕಟ್ಟಿ ಹಾಕಿ ಕಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.

ಆನಂದ ಸಿ. ಕುಂದರ್ ಮಾತನಾಡಿ, ಎಲ್ಲಾ ಕಲೆಯನ್ನು ನಿರಂತರವಾಗಿ ಕರಗತ ಮಾಡಿಕೊಂಡು ಉತ್ತುಂಗಕ್ಕೇರಿದ ಸಂಸ್ಥೆಗೆ ಸಾಮಾಜಿಕವಾಗಿ ಮಾನ್ಯತೆ ದೊರೆಯಬೇಕು” ಎಂದರು. ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಸುಜಯ್ ಶೆಟ್ಟಿ, ಕೃಷ್ಣಯ್ಯ ಆಚಾರ್ ಬಿದ್ಕಲ್‌ಕಟ್ಟೆ, ದೇವದಾಸ್ ರಾವ್ ಕೂಡ್ಲಿ, ಗೋಪಾಲ ಪೂಜಾರಿ, ಲಂಬೋದರ ಹೆಗಡೆ, ವೆಂಕಟೇಶ ವೈದ್ಯ ಹಾಗೂ ವಿದ್ಯಾರ್ಥಿಗಳ ತಂಡ ಉಪಸ್ಥಿತರಿದ್ದರು. ಯಶಸ್ವಿ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಪೂಜ ಆಚಾರ್, ಪಂಚಮಿ ವೈದ್ಯ, ಪವನ್ ಆಚಾರ್, ಕಿಶನ್ ಪೂಜಾರಿ, ಹರ್ಷಿತಾ ಅಮೀನ್ ಸ್ವಾಗತ ಗಾಯನ, ಅಭಿನಂದನಾ ಗಾಯನ, ಧನ್ಯವಾದ ಗಾಯನ ಮಾಡಿದರು.
