ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು ಇದರ ಹದಿನೈದನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಎರಡು ದಿನಗಳ ನಾಟಕೋತ್ಸವವು ಜೂನ್ 29 ಮತ್ತು 30ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಉರ್ವದ ಶ್ರೀ ಗುರುಲೀಲಾ ಮೋಟರ್ ಡ್ರೈವಿಂಗ್ ಸ್ಕೂಲ್ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದಿನಾಂಕ 29-06-2023ರಂದು ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹಾಗೂ ಕಲಾಪೋಷಕರಾದ ಡಾ. ಹರಿಕೃಷ್ಣ ಪುನರೂರು, ಹಿರಿಯ ರಂಗ ನಿರ್ದೇಶಕರುಗಳಾದ ಶ್ರೀ ಕಾಸರಗೋಡು ಚಿನ್ನಾ ಮತ್ತು ಶ್ರೀ ಮೋಹನಚಂದ್ರ ಯು., ಹಿರಿಯ ನಾಟಕಕಾರರಾದ ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಚಲನಚಿತ್ರ ನಿರ್ಮಾಪಕರಾದ ಶ್ರೀ ಪ್ರಕಾಶ್ ಪಾಂಡೇಶ್ವರ, ಚಲನಚಿತ್ರ ನಟ ಶ್ರೀ ಅರವಿಂದ ಬೋಳಾರ್, ಉರ್ವದ ಕೊರಗಜ್ಜ ಕ್ಷೇತ್ರದ ಅಧ್ಯಕ್ಷರಾದ ಶ್ರೀ ರಾಜೇಶ್ ಉರ್ವ ಹಾಗೂ ಆರ್.ಟಿ.ಒ. ಉಡುಪಿಯ ಶ್ರೀ ರವಿಶಂಕರ್ ಬಿ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ರಂಗ ಸಾಧಕರಾದ ಕು. ಶಾಂತಾ ಕೆ., ಶ್ರೀ ಜಗನ್ನಾಥ ಕಲ್ಲಾಪು, ಶ್ರೀ ಲೋಕಯ್ಯ ಶೆಟ್ಟಿಗಾರ್ ಇವರಿಗೆ ರಂಗ ಸನ್ಮಾನ ನಡೆಯಲಿರುವುದು. ಸಭಾ ಕಾರ್ಯಕ್ರಮದ ಬಳಿಕ ರಂಗಸಂಗಾತಿ ಮಂಗಳೂರು ಪ್ರಸ್ತುತ ಪಡಿಸುವ ಶಶಿರಾಜ್ ರಾವ್ ಕಾವೂರು ರಚಿಸಿ ನಿರ್ದೇಶಿಸಿರುವ ಕನ್ನಡ ನಾಟಕ ‘ದಾಟ್ಸ್ ಆಲ್ ಯುವರ್ ಆನರ್’ ಪ್ರದರ್ಶನಗೊಳ್ಳಲಿರುವುದು.
ದಿನಾಂಕ 30-06-2023ರಂದು ನಡೆಯುವ ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಳ್ವಾಸ್ ಪ್ರತಿಷ್ಠಾನ, ಮೂಡಬಿದರೆಯ ಡಾ.ಎಂ.ಮೋಹನ ಆಳ್ವ, ಮಂಗಳೂರು ದಕ್ಷಿಣದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಅಗರಿ ಎಂಟರ್‌ಪ್ರೈಸಸ್ ಮಾಲಕರಾದ ಶ್ರೀ ಅಗರಿ ರಾಘವೇಂದ್ರ ರಾವ್, ಲಕುಮಿ, ಲಹರಿ ಮತ್ತು ಶ್ರೀಲಲಿತೆ ತಂಡದ ಮುಖ್ಯಸ್ಥರಾದ ಲಯನ್ ಕಿಶೋರ್ ಡಿ.ಶೆಟ್ಟಿ, ಹಿರಿಯ ವಕೀಲರು ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯ ಖಜಾಂಚಿಯಾದ ಶ್ರೀ ಪದ್ಮರಾಜ್ ರಾಮಯ್ಯ, ಶ್ರೀ ಶಾರದಾ ಸೇವಾ ಸಮಿತಿಯ ಶ್ರೀ ದಯಾನಂದ ರಾವ್ ಕಾವೂರು, ಖ್ಯಾತ ರಂಗಭೂಮಿ, ಚಲನಚಿತ್ರ ನಟ ಶ್ರೀ ನವೀನ್ ಡಿ. ಪಡೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರಾಜೇಶ್ ಬಿ. ಭಾಗವಹಿಸಲಿರುವರು.
ಇದೇ ಸಂದರ್ಭದಲ್ಲಿ ರಂಗಕರ್ಮಿ ದಿ. ಭಾಸ್ಕರ ನೆಲ್ಲಿತೀರ್ಥ ಇವರ ಹೆಸರಿನಲ್ಲಿ ನೀಡಲಾಗುವ ‘ರಂಗ ಭಾಸ್ಕರ 2023’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, 2023ನೇ ಸಾಲಿನ ಈ ಪ್ರಶಸ್ತಿಯನ್ನು ರಂಗನಟ, ನಿರ್ದೇಶಕ ಡಾ. ಎಂ. ಗಣೇಶ ಹೆಗ್ಗೋಡು ಇವರಿಗೆ ಮತ್ತು ದಿವಂಗತ ಪಿ.ಸಿ. ಜನಾರ್ದನ ರಾವ್ ಸ್ಮಾರಕ ರಂಗ ಪ್ರಶಸ್ತಿಯನ್ನು ಶ್ರೀ ಎಂ.ಎಸ್.ರಾವ್ ಇವರಿಗೆ ನೀಡಿ ಗೌರವಿಸಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ಹೆಗ್ಗೋಡಿನ ಸತ್ಯಶೋಧನಾ ರಂಗ ತಂಡ ಪ್ರಸ್ತುತಪಡಿಸುವ ಕನ್ನಡ ನಾಟಕ ‘ರೊಟ್ಟಿಯ ಸಲುವಾಗಿ ಇಷ್ಟೆಲ್ಲ ?!’ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಕಥೆ ಪಿ. ಲಂಕೇಶ್ ಹಾಗೂ ರಂಗ ರೂಪ ಮತ್ತು ನಿರ್ದೇಶನ ಡಾ. ಎಂ. ಗಣೇಶ ಹೆಗ್ಗೋಡು ಇವರದ್ದು.