ಬೆಂಗಳೂರು : ಶಂಕರ್ ಗಣೇಶ್ ರಚನೆ ಮತ್ತು ನಿರ್ದೇಶನದ ರಂಗಸೌರಭ ಪರಿಕಲ್ಪನೆಯ ‘ಮಾವಿನಗುಡಿ ಕಾಲೋನಿ’ ನಾಟಕವು ದಿನಾಂಕ 20-06-2023ರ ಸಂಜೆ ಬೆಂಗಳೂರಿನ ಜೆ.ಪಿ. ನಗರದ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.
ನಾಟಕದ ಬಗ್ಗೆ : ಜಾಗತೀಕರಣ ಮತ್ತು ಪ್ರಗತಿಯ ಹೆಸರಿನಲ್ಲಿ ನಾಶವಾಗಿ ಹೋದ ಕಾಡುಗಳೆಷ್ಟು, ಹಳ್ಳಿಗಳೆಷ್ಟೋ, ಅಂತೆಯೇ ಎಷ್ಟೋ ನಗರಗಳೂ ಕೂಡ ಈ ಪ್ರಗತಿಯ ಅಬ್ಬರಕ್ಕೆ ಸಿಲುಕಿ ತಮ್ಮ ಸೊಬಗು, ವೈಭವಗಳನ್ನು ಕಳೆದುಕೊಂಡಿವೆ. ಲಗಾಮಿಲ್ಲದ ಹುಚ್ಚು ಕುದುರೆಯಂತೆ ಉದ್ದಗಲಕ್ಕು ಹರಡುತ್ತಿರುವ ವೃದ್ಧಿಯೆಂಬ ಈ ಕುರುಡುತನ, ಒಂದು ರೀತಿಯ ಸಾಂಕ್ರಮಿಕ ಖಾಯಿಲೆಯಂತೆ ಕಾಣುವುದರಲ್ಲಿ ಅನುಮಾನವೇ ಇಲ್ಲ. ಪ್ರಗತಿಯ ಪತಾಕೆ ಹಿಡಿದು ಓಡಾಡುತ್ತಿರುವ ನಗರವಾಸಿಗಳು ತಿರುಗಿ ನೋಡಿದಾಗ, ಹಿಂದೊಂದು ದಿನ ತಾವಿದ್ದ ಜಾಗ ಬದಲಾಗಿರುವುದನ್ನು ಕಂಡಾಗ, ಆಗುವ ಆಶ್ಚರ್ಯ ಒಂದು ಕಡೆಯಾದರೆ ಮತ್ತೊಂದೆಡೆ ಅಘಾತವೂ ಉಂಟಾಗುತ್ತದೆ. ಬದಲಾವಣೆಯೆಂಬುವುದು ನಮ್ಮನ್ನು ಯಾವ ದಿಕ್ಕಿಗೆ ಕರೆದುಕೊಂಡು ಹೋಗುತ್ತಿದೆ ಎಂಬ ಗೊಂದಲಗಳು ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಹೇಗೆ ಕಾಡುಗಳನ್ನು ಮತ್ತು ಹಳ್ಳಿಗಳನ್ನು ಉಳಿಸುವುದು ಅನಿವಾರ್ಯವೋ ಅಂತೆಯೇ ನಗರಗಳನ್ನು ಬೆಳೆಸದೆ ಉಳಿಸಿಕೊಳ್ಳುವುದು ಅನಿವಾರ್ಯ.
ಹೀಗೆ ಜಾಗತೀಕರಣದ ಅಲೆಯಲ್ಲಿ ವಿವಿಧ ದಿಕ್ಕಿನಲ್ಲಿ ಗೊತ್ತಿರುವ ಸ್ನೇಹಿತರ ಗುಂಪೊಂದು, ತಮ್ಮ ಬಾಲ್ಯದ ದಿನದಲ್ಲಿ, ಒಟ್ಟಿಗೆ ಬೆಳೆದ ಜಾಗದಲ್ಲಿ ಮತ್ತೊಮ್ಮೆ ಸೇರುವ ಸಂದರ್ಭ ಬರುತ್ತದೆ. ಆ ಜಾಗವೇ ‘ಮಾವಿನಗುಡಿ ಕಾಲೋನಿ’. ಹೆಸರೇ ಸೂಚಿಸುವಂತೆ, ಮಾವಿನ ಮರವೆ ಆ ಕಾಲೋನಿಯ ಕೇಂದ್ರ ಬಿಂದು. ಆದರೆ ಇಂದು ಅದೂ ಕೂಡ ಪ್ರಗತಿಯ ಬಲೆಗೆ ಬಲಿಯಾಗುವ ಹಂತದಲ್ಲಿರುತ್ತದೆ. ಮಾವಿನ ಮರ ಧರೆಗುರುಳುವ ಮುನ್ನ ಸ್ನೇಹಿತರು ಒಮ್ಮೆ ಅಲ್ಲಿ ಭೇಟಿಯಾಗಬೇಕೆಂದು ನಿರ್ಧರಿಸಿ ಸೇರುತ್ತಾರೆ, ನೆನಪುಗಳನ್ನು ಮೆಲಕು ಹಾಕುತ್ತಾ ಬದಲಾವಣೆಗಳನ್ನು ಗಮನಿಸುತ್ತಾ ಕೆಲವು ಗಂಟೆಗಳ ಕಾಲ ಆ ಹಳೆಯ ದಿನಗಳನ್ನು ಬಾಳುವ ಪ್ರಯತ್ನ ಮಾಡುತ್ತಾರೆ.
ಮಾವಿನಗುಡಿ ಕಾಲೋನಿ ನಾಟಕ, ಪ್ರೇಕ್ಷಕನಿಗೆ ತನ್ನ ಹಳೆಯ ದಿನಗಳನ್ನು ಮೆಲುಕು ಹಾಕುವಂತೆ ಮಾಡುತ್ತಾ, ಬದಲಾದ ಜೀವನ ಶೈಲಿಯನ್ನು ಬಿಂಬಿಸುವ ಪ್ರಯತ್ನವಷ್ಟೆ.