ಬದಿಯಡ್ಕ : ನೀರ್ಚಾಲು ಎಂಎಸ್‌ಸಿ ಎಎಲ್‌ಪಿ ಶಾಲೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆ ಇವುಗಳ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ದಿನಾಂಕ :11-06-2023 ಭಾನುವಾರ ನಡೆದ ಗ್ರಾಮ ಪರ್ಯಟನೆಯ 4ನೇ ಸರಣಿ ಕಾರ್ಯಕ್ರಮದಲ್ಲಿ ‘ಸಾಮಾಜಿಕ ನೆಲೆಯಲ್ಲಿ ಕನ್ನಡ’ ಎಂಬ ವಿಚಾರದಲ್ಲಿ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಉಪನ್ಯಾಸ ನೀಡಿದರು. ಅವರು ಮಾತನಾಡುತ್ತಾ “ಕನ್ನಡವನ್ನು ಬೆಳೆಸಬೇಕಾದ ಈ ಪ್ರದೇಶದಲ್ಲಿ ಉಳಿಸಬೇಕಾದ ಪರಿಸ್ಥಿತಿಯಿದೆ. ನಮ್ಮ ಭಾಷೆಯ ಮೇಲೆ ಅನ್ಯ ಭಾಷೆ ಪ್ರಭಾವ ಬಹಳವಾಗಿ ಬೀರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರಿಗೆ ಕೂಡಾ ಕನ್ನಡದ ಭಾಷಾ ಶುದ್ಧತೆ ಉಳಿಸಬೇಕಾದ ಅನಿವಾರ್ಯತೆಯಿದೆ. ಕನ್ನಡ ಮಾಧ್ಯಮದಲ್ಲಿ 1ರಿಂದ 10ನೇ ತರಗತಿಯ ತನಕ ಕಲಿತ ಮಕ್ಕಳಿಗೆ ಕೇರಳ ಹಾಗೂ ಕರ್ನಾಟಕದಲ್ಲಿ ಗರಿಷ್ಠ ಸೌಲಭ್ಯ ದೊರೆಯುತ್ತದೆ. ಭಾಷೆ ಉಳಿದಾಗ ನಮ್ಮ ಸಂಸ್ಕೃತಿಯೂ ಉಳಿಯುತ್ತದೆ. ಕನ್ನಡ ಭಾಷಾ ರಕ್ಷಣೆಯು ಕನ್ನಡಿಗರ ಕರ್ತವ್ಯ, ಭಾಷೆಯ ಕಡಿಮೆ ಬಳಕೆಯಿಂದ ಸಂಸ್ಕೃತಿಯೂ ನಾಶವಾಗುತ್ತದೆ” ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ರಂಗುಲ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಮಾತನಾಡಿದರು. ಈ ಸಂದರ್ಭ ಅಂಬೇಡ್ಕರ್ ವಿಚಾರ ವೇದಿಕೆಯ ಕಾರ್ಯದರ್ಶಿ, ಸಾಹಿತಿ ಸುಂದರ ಬಾರಡ್ಕ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಡಾ. ಶ್ರೀಶಕುಮಾರ ಪಂಜಿತ್ತಡ್ಕ ಉಪಸ್ಥಿತರಿದ್ದರು. ನೈತಿಕ್ ರೈ ಪೆರಡಾಲ ಪ್ರಾರ್ಥಿಸಿದರು. ಭಾಗ್ಯಶ್ರೀ ಕುಂಚಿನಡ್ಕ ಸ್ವಾಗತಿಸಿದರು. ನಾರಾಯಣ ಭಟ್ ಅನ್ನಡ್ಕ ವಂದಿಸಿದರು. ಅನಿತಾ ತಲ್ಪನಾಜೆ ಕಾರ್ಯಕ್ರಮ ನಿರೂಪಿಸಿದರು.