ಬದಿಯಡ್ಕ : ನೀರ್ಜಾಲು ಸಮೀಪದ ಕುಂಟಿಕಾನ ಎ.ಎಸ್.ಬಿ. ಶಾಲೆಯಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪರ್ಯಟನೆಯ 6ನೇ ಸರಣಿ ಕಾರ್ಯಕ್ರಮ ದಿನಾಂಕ 30-07-2023ರಂದು ನಡೆಯಿತು.
ಈ ಸರಣಿ ಕಾರ್ಯಕ್ರಮದಲ್ಲಿ ಶಿಕ್ಷಕ ರಾಜೇಶ್ ಎಸ್. ಉಬ್ರಂಗಳ ಇವರು ‘ಕನ್ನಡ ಭಾಷಾ ಪ್ರಜ್ಞೆ ಬೆಳೆಸುವುದು ಹೇಗೆ?” ಎಂಬ ಕುರಿತು ತಮ್ಮ ವಿಚಾರವನ್ನು ಮಂಡಿಸುತ್ತಾ “ಜಿಲ್ಲೆಯ ಮಕ್ಕಳಲ್ಲಿ ಕನ್ನಡ ಪ್ರಜ್ಞೆ ಅರಳಬೇಕಾದರೆ, ಮೊದಲು ಅದು ಮಕ್ಕಳ ಹಿರಿಯರಲ್ಲಿ ಅರಳಬೇಕು. ಕಾಸರಗೋಡಿನ ಕನ್ನಡಿಗರಿಗೆ ಕೇರಳದಲ್ಲಿ ಅನೇಕ ಸವಲತ್ತುಗಳಿವೆ. ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲೂ ಕೂಡಾ ವಿಶೇಷವಾಗಿ ಗಡಿನಾಡ ಕನ್ನಡಿಗರ ಮೀಸಲಾತಿ ಇದೆ. ಅದನ್ನು ಪಡೆದು ಗಳಿಸಿಕೊಳ್ಳಬೇಕು. ಕನ್ನಡದ ಸಂಸ್ಕೃತಿಯನ್ನು ಯಾವತ್ತೂ ಬಿಡಬಾರದು. ಕನ್ನಡಿಗರನ್ನು ಪರಸ್ಪರ ಆಧರಿಸಿಕೊಂಡು ಕನ್ನಡಿಗರೇ ರಕ್ಷಿಸಿಕೊಳ್ಳಬೇಕು. ಕನ್ನಡ ಭಾಷೆಯಲ್ಲಿ, ಬಹುಮುಖಿ ಸಾಹಿತ್ಯ ಹಾಗೂ ಸಂಸ್ಕೃತಿ ಇದೆ. ಆಧುನಿಕ ಸಾಹಿತ್ಯ ಕ್ಷೇತ್ರದಲ್ಲಿ ಡಿಜಿಟಲ್ ಸಾಹಿತ್ಯ ಇನ್ನಷ್ಟೂ ವಿಸ್ತಾರವಾಗಬೇಕು. ಕಾಸರಗೋಡಿನ ಮೂಲದಲ್ಲಿ ಕನ್ನಡದ ಶಕ್ತಿ ಇನ್ನೂ ಕೂಡಾ ಗಟ್ಟಿಯಾಗಿಯೇ ಇದೆ. ಹಿರಿಯರು ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹಾಗೂ ಪ್ರೀತಿ ಮೂಡಿಸಬೇಕು” ಎಂದು ಹೇಳಿದರು.
ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆಯಾದ ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮವನ್ನು ಕುಂಟಿಕಾನ ಶಾಲಾ ಪ್ರಬಂಧಕ ಶಂಕರನಾರಾಯಣ ಶರ್ಮ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಂಘಟಕರಾದ ಕುಂಟಿಕಾನ ವೆಂಕಟೇಶ್ವರ ಭಟ್ಟ ಹಾಗೂ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯು ಏರ್ಪಡಿಸಿದ್ದ ಅಡೂರು ಕೊರತಿಮೂಲೆ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥ ಕನ್ನಡ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಿ. ಸತ್ಯವತಿ ಭಟ್ ಕೊಳಚಪ್ಪು ಅವರನ್ನು ಗೌರವಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ವೆಂಕಟರಾಜ ವಿ, ನಿವೃತ್ತ ಶಿಕ್ಷಕ ದಿನೇಶ್ ಬೊಳುಂಬು, ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ. ಅಬ್ಬಾಸ್ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಟಿ ತಿಂಗಳ ವಿಶೇಷ ದೈವವಾದ ಆಟಿ ಕಳೆಂಜನ ಪಾಡ್ದನ ಸಹಿತ ಪ್ರಾತ್ಯಕ್ಷಿಕೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿದ್ದ ನಿವೃತ್ತ ಶಿಕ್ಷಕ, ಹಿರಿಯ ಸಾಹಿತಿ ಭಾಸ್ಕರ ಅಡ್ವಳ ಅವರು ಆಟ ಆಚರಣೆಯ ಕುರಿತು ವಿಶೇಷ ಕಾರ್ಯಾಗಾರ ನಿರ್ವಹಿಸಿದರು. ಮಕ್ಕಳಿಂದ ವಿವಿಧ ಬೌದ್ಧಿಕ ಚಟುವಟಿಕೆಗಳನ್ನು ನಡೆಸಲಾಯಿತು. ಮಕ್ಕಳ ಜೀವನ ಶೈಲಿಯ ರೂಪೀಕರಣ, ವ್ಯಕ್ತಿತ್ವ ವಿಕಸನವಾಗುವಂತಹ ಅನೇಕ ವಿಚಾರಗಳನ್ನು ಮಕ್ಕಳಿಗೆ ತಿಳಿಸಿದರು.
ಕನ್ನಡದ ಪದಗಳನ್ನು ಬಳಕೆ ಮಾಡಿ ವಾಕ್ಯಗಳ ರಚನೆ, ಪರಸ್ಪರ ಸಂಬಂಧಿಸಿದಂತಹ ಎರಡು ಅಥವಾ ಮೂರು ವಾಕ್ಯಗಳಲ್ಲಿ ಸೂಕ್ತ ಶಬ್ಧಗಳನ್ನು ಸೇರಿಸಿ, ಜೋಡಿಸಿ ಅರ್ಥವತ್ತಾದ ಟಿಪ್ಪಣಿ ಬರೆಯುವ ರೀತಿ, ಮಕ್ಕಳಿಂದಲೇ ಹಾಡುಗಳನ್ನು ರಚಿಸಿ ಗಾಯನ ಹಾಗೂ ನೃತ್ಯ, ಸ್ಥಳದಲ್ಲೇ ಆಶು ಕವನಗಳನ್ನು ರಚಿಸಿ, ಅದನ್ನು ಹಾಡುವ ಬಗ್ಗೆ ಹೇಳಿಕೊಟ್ಟರು. ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಮಕ್ಕಳು, ಶಿಕ್ಷಕರು, ಪೋಷಕರು ಭಾಗವಹಿಸಿದ್ದರು. ಡಾ. ಶ್ರೀಶ ಕುಮಾರ ಪಿ. ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿರಾಜ್ ಅಡೂರು ವಂದಿಸಿದರು.