ಶಿರ್ವ : ಬೆಳ್ಳಿ ಗ್ರಾಮದ ಪಾಂಬೂರು ಪರಿಚಯ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 8 ರಿಂದ 14 ಫೆಬ್ರವರಿ 2026ರವರೆಗೆ 7 ದಿನಗಳ ‘ಪರಿಚಯ ರಂಗೋತ್ಸವ 2026’ ಪಾಂಬೂರು ರಂಗಪರಿಚಯದಲ್ಲಿ ನಡೆಯಲಿದೆ. ಪ್ರತೀ ದಿನ ಸಂಜೆ ಗಂಟೆ 6-30ರಿಂದ ಏಳು ದಿನಗಳ ಪರ್ಯಂತ ಕನ್ನಡ, ತುಳು, ಕೊಂಕಣಿ, ಅರೆಭಾಷೆ ಮತ್ತು ಮಲಯಾಳಂ ಭಾಷೆಗಳ ಏಳು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೊನ್ಹಾ ತಿಳಿಸಿದ್ದಾರೆ.
ದಿನಾಂಕ 08 ಫೆಬ್ರವರಿ 2026ರಂದು ಹಿರಿಯ ರಂಗಕರ್ಮಿ ಹಾಗೂ ಕಲಾವಿದೆ ಗೀತಾ ಸುರತ್ಕಲ್ ರಂಗೋತ್ಸವಕ್ಕೆ ಚಾಲನೆ ನೀಡಲಿದ್ದು, ದಿನಾಂಕ 14 ಫೆಬ್ರವರಿ 2026ರಂದು ಕೊಂಕಣಿಯ ಹಿರಿಯ ಸಾಹಿತಿ, ನಾಟಕಕಾರ ಹಾಗೂ ಶಿಕ್ಷಣ ತಜ್ಞ ಡಾ. ಎವಿನ್ ಡಿಸೋಜಾ ಅವರ ಸಮಾರೋಪ ಸಂದೇಶದೊಂದಿಗೆ ಸಂಪನ್ನಗೊಳ್ಳಲಿದೆ. ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ನಾಟಕಗಳ ಪ್ರಾಯೋಜಕತ್ವ ವಹಿಸಿದ್ದು, ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮತ್ತು ನಿವೃತ್ತ ಕನ್ನಡ ಉಪನ್ಯಾಸಕ ಕೆ.ಎಸ್. ಶ್ರೀಧರಮೂರ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲಾ ದಿನಗಳಲ್ಲಿ ವಿವಿಧ ರಂಗಕರ್ಮಿಗಳು, ಸಾಹಿತಿಗಳು ಸಂದೇಶ ನೀಡಲಿದ್ದಾರೆ.
ದಿನಾಂಕ 08 ಫೆಬ್ರವರಿ 2026ರಂದು ಶಿವಮೊಗ್ಗದ ರಂಗಾಯಣ ಪ್ರಸ್ತುತಪಡಿಸುವ ಕನ್ನಡ ನಾಟಕ ‘ನಮ್ಮೊಳಗೊಬ್ಬ ಗಾಂಧಿ’, ದಿನಾಂಕ 09 ಫೆಬ್ರವರಿ 2026ರಂದು ಕೇರಳದ ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ಪ್ರಸ್ತುತಪಡಿಸುವ ಮಲಯಾಳಂ ನಾಟಕ ‘ಕೂಹೂ…. An ANTHOLOGY ON RAILS’, ದಿನಾಂಕ 10 ಫೆಬ್ರವರಿ 2026ರಂದು ಅಸ್ತಿತ್ವ ಮಂಗಳೂರು ಪ್ರಸ್ತುತಪಡಿಸುವ ಕೊಂಕಣಿ ನಾಟಕ ‘ಭಾಂಗಾರ್ ಮನಿಸ್’, ದಿನಾಂಕ 11 ಫೆಬ್ರವರಿ 2026ರಂದು ಉಡುಪಿಯ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ತಂಡದ ತುಳು ನಾಟಕ ‘ದಿ ಫೈಯರ್’, ದಿನಾಂಕ 12 ಫೆಬ್ರವರಿ 2026ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತಪಡಿಸುವ ಅರೆಭಾಷೆ ನಾಟಕ ‘ಅಪ್ಪ’, ದಿನಾಂಕ 13 ಫೆಬ್ರವರಿ 2026ರಂದು ಆಟಮಾಟ ಸಾಂಸ್ಕೃತಿಕ ಪದ, ಧಾರವಾಡ ಪ್ರಸ್ತುತಪಡಿಸುವ ಕನ್ನಡ ನಾಟಕ ‘ಮತ್ತೊಬ್ಬ ಮಾಯಿ’ ಹಾಗೂ ದಿನಾಂಕ 14 ಫೆಬ್ರವರಿ 2026ರಂದು ಅಸ್ತಿತ್ವ ಮಂಗಳೂರು ಪ್ರಸ್ತುತಪಡಿಸುವ ಕೊಂಕಣಿ ನಾಟಕ ‘ಚಿರಿ…… ತೀಸ್ ನಾಣ್ಯಾಂಚಿ’ ಪ್ರದರ್ಶನಗೊಳ್ಳಲಿವೆ. ಪ್ರತೀ ನಾಟಕಗಳು 90ರಿಂದ 120 ನಿಮಿಷಗಳ ಕಾಲಮಿತಿಯ ನಾಟಕಗಳಾಗಿದ್ದು, ನಿಗದಿತ ಸಮಯದಲ್ಲೇ ಕಾರ್ಯಕ್ರಮಗಳು ಪ್ರಾರಂಭವಾಗಿ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳಲಿದ್ದು, ಕಲಾಸಕ್ತರಿಗೆ ಮುಕ್ತ ಅವಕಾಶವಿದೆ ಎಂದು ಪರಿಚಯ ಪ್ರತಿಷ್ಠಾನ ತಿಳಿಸಿದೆ.

