24 ಫೆಬ್ರವರಿ 2023, ಮಂಗಳೂರು: ಹಳೆಯ ತಳಹದಿಯಲ್ಲಿ ಹೊಸದು ರೂಪುಗೊಳ್ಳುವಲ್ಲಿ ವಸ್ತು ಸಂಗ್ರಹಾಲಯಗಳು ಹಿರಿದಾದ ಪಾತ್ರ ವಹಿಸುತ್ತಿವೆ. ಇದರಿಂದ ಈ ಕಾಲದಲ್ಲಿ ನಿಂತು ಭೂತ ಕಾಲವನ್ನು ನೋಡುವ ಜತೆಗೆ ತುಳುನಾಡಿನ ಬದುಕು ಕೃಷಿ ಪರಂಪರೆ, ಅವಿಭಕ್ತ ಕುಟುಂಬದ ಕಲ್ಪನೆಯನ್ನು ಕಟ್ಟಿಕೊಡುವ ಕಾರ್ಯವನ್ನು ತುಳು ವಸ್ತು ಸಂಗ್ರಹಾಲಯ ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು.
ಅವರು ಬಿ.ಸಿ. ರೋಡ್ ನ ಸಂಚಯ ಗಿರಿಯಲ್ಲಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30ರ ನೆನಪಿನ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ-ಅರಿವು ಯಾನ ಮಾಳಿಕೆಯ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 23, ಫೆಬ್ರವರಿಯಂದು ಉದ್ಘಾಟಿಸಿ ಮಾತನಾಡಿದರು.
ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯವು ಅಬ್ಬಕ್ಕನ ಇತಿಹಾಸ ಪರಿಚಯಿಸುವ ಜತೆಗೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆ, ವಿದ್ವಾಂಸರಿಗೆ ಅಧ್ಯಯನ ಕೇಂದ್ರವಾಗಿದ್ದು, ನಾಡಿನ ತನ್ಮಯತೆ ಕಲಾತ್ಮಕತೆಯನ್ನು ಪರಿಚಯಿಸುತ್ತಿದೆ . ಪ್ರೊ | ತುಕಾರಾಮ ಪೂಜಾರಿ ದಂಪತಿ ರಾಣಿಯ ಜೀವನ ವಿವರಿಸುವ ಜತೆಗೆ ನಾಡಿನ ಬದುಕನ್ನು ವಿವರಿಸುವುದಕ್ಕಾಗಿ ತಮ್ಮ ಸಂಪತ್ತನ್ನೇ ಧಾರೆ ಎರೆದಿದ್ದಾರೆ ಎಂದರು.
ಅನಿವಾಸಿ ಭಾರತೀಯ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಮಾತನಾಡಿ, ತುಳುನಾಡಿನ ಇತಿಹಾಸದ ದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ಕೀರ್ತಿ ಈ ಕೇಂದ್ರಕ್ಕೆ ಸಲ್ಲುತ್ತದೆ ಎಂದರು. ಹಿರಿಯ ವಿದ್ವಾಂಸ ಡಾ| ಪಿ.ಎನ್. ನರಸಿಂಹಮೂರ್ತಿ ಹಾಗೂ ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ. ಶಂಕರ ಭಟ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ಅಧ್ಯಕ್ಷ ಪ್ರೊ| ತುಕಾರಾಮ ಪೂಜಾರಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ| ಆಶಾಲತಾ ಸುವರ್ಣ ಮತ್ತಿತರರಿದ್ದರು.
ಕೃತಿ ಬಿಡುಗಡೆ: ‘ಆಳುಪರು–ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ” ಹಾಗೂ “ಐಗಳ್ ಎಂಬ ದ.ಕ. ಇತಿಹಾಸದ ದಂತಕಥೆ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು ಸುರೇಶ್ ಕಿಣಿ ಉಪ್ಪಿನಂಗಡಿ, ಮಾಧವ ರೈ ಪೆರ್ನೆ ಅವರನ್ನು ಗೌರವಿಸಲಾಯಿತು ಡಾ.| ಸಾಯಿಗೀತಾ, ಗಾಯತ್ರಿ ಲೋಕೇಶ್ ಸನ್ಮಾನ ಪತ್ರ ವಾಚಿಸಿದರು. ನಮಿತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ತುಳುವ ಇತಿಹಾಸ ಒಂದು ಅವಲೋಕನ ಹಾಗೂ ಸ್ಮಾರಕ ಸಂರಕ್ಷಣೆ : ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ವಿಚಾರದ ಕುರಿತು ಗೋಷ್ಟಿಗಳು ನಡೆದವು.