ಮೈಸೂರು : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಕನ್ನಡ ಸಾಹಿತ್ಯ ಕಲಾಕೂಟ ಮೈಸೂರು ಇದರ ಸಹಯೋಗದಲ್ಲಿ ಶ್ರೀಮತಿ ಟಿ. ವಿಮಲಾ ವಿ. ಪೈ ಪ್ರಾಯೋಜಿತ ‘ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ದಿನಾಂಕ 14 ಆಗಸ್ಟ್ 2024ರಂದು ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಜಿಲ್ಲಾಪತ್ರಕರ್ತರ ಭವನದಲ್ಲಿ ನಡೆಯಲಿದೆ.
2023ನೇ ಸಾಲಿನ ‘ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ’ಯನ್ನು ಪುರಾತತ್ತ್ವ ಶಾಸ್ತ್ರಜ್ಞ ಪ್ರೊ. ಎ.ವಿ. ನರಸಿಂಹಮೂರ್ತಿ ಇವರಿಗೆ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ವಹಿಸಲಿದ್ದು, ಹಿರಿಯ ಲೇಖಕರು ಹಾಗೂ ವಿಮರ್ಶಕರಾದ ಶ್ರೀ ಬೆಳಗೋಡು ರಮೇಶ್ ಭಟ್ ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಭಾಷಣ ಮಾಡಲಿರುವರು. ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡೀಕೆರೆ ಗೋಪಾಲ್ ಮತ್ತು ಮೈಸೂರಿನ ಕನ್ನಡ ಸಾಹಿತ್ಯ ಕಲಾಕೂಟ ಇದರ ಅಧ್ಯಕ್ಷರಾದ ಶ್ರೀ ಎಂ. ಚಂದ್ರಶೇಖರ್ ಉಪಸ್ಥಿತರಿರುವರು.