ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾಸಂಘ ಸಾಣೇಹಳ್ಳಿ, ದೆಹಲಿಯ ಸಂಸ್ಕೃತಿ ಸಚಿವಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ತರಳಬಾಳು ಶಾಖಾಮಠ ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ‘ರಾಷ್ಟ್ರೀಯ ನಾಟಕೋತ್ಸವ’ವನ್ನು ದಿನಾಂಕ 02ರಿಂದ 07 ನವೆಂಬರ್ 2025ರವರೆಗೆ ಆಯೋಜಿಸಲಾಗಿದೆ. ಕನ್ನಡ ರಾಜ್ಯೋತ್ಸವ, ವಿಚಾರ ಮಾಲಿಕೆ, ವಿಚಾರ ಸಂಕಿರಣ, ವಚನಗೀತೆ, ನೃತ್ಯ ರೂಪಕ, ಕೃತಿಗಳ ಲೋಕಾರ್ಪಣೆ, ಉಪನ್ಯಾಸ, ಆಶೀರ್ವಚನ, ನಾಟಕ ಪ್ರದರ್ಶನ, ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 02 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ರಾಜ್ಯ ಸಚಿವರಾದ ವಿ. ಸೋಮಣ್ಣ ಇವರಿಂದ ರಾಷ್ಟ್ರೀಯ ನಾಟಕೋತ್ಸವ, ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಇವರಿಂದ ಶಿವಸಂಚಾರ ನಾಟಕ ಮತ್ತು ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಇವರಿಂದ ಕನ್ನಡ ರಾಜ್ಯೋತ್ಸವದ ಉದ್ಘಾಟನೆ ನಡೆಯಲಿದೆ. ‘ಶಿವಸಂಚಾರ -25ರ ಕೈಪಿಡಿ’, ‘ಕಾಯಕ ಕಲೆಯಾದಾಗ’, ‘ಅಂತರಂಗದ ಬೆಳಕು’ ಕೃತಿಗಳ ಲೋಕಾರ್ಪಣೆ, ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ಮತ್ತು ಜಗದೀಶ್ ಆರ್. ಇವರ ಸಂಗೀತ ಮತ್ತು ನಿರ್ದೇಶನದಲ್ಲಿ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 03 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಹೊನ್ನಾವರದ ಡಾ. ಎಚ್.ಎಸ್. ಅನುಪಮಾ ಇವರಿಂದ ‘ಆರೋಗ್ಯವೇ ಭಾಗ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಶ್ರೀ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ರೂಪಕ, ದಿನೇಶ್ ಚಮ್ಮಾಳಿಗೆ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ನಾಲ್ವಡಿ ಸೋಶಿಯಲ್ ಕಲ್ಚರಲ್ ಅಂಡ್ ಎಜ್ಯುಕೇಷನಲ್ ಟ್ರಸ್ಟ್ ಇವರಿಂದ ‘ಆಳಿದ ಮಾಸ್ವಾಮಿಗಳು’ ನಾಟಕ ಪ್ರಸ್ತುತಗೊಳ್ಳಲಿದೆ.
ದಿನಾಂಕ 04 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ತರಬೇತುದಾರರಾದ ಡಾ. ಗುರುರಾಜ ಪಾಟೀಲ ಇವರಿಂದ ‘ಮೌಲ್ಯಾಧಾರಿತ ಶಿಕ್ಷಣ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಯಶಸ್ವಿನಿ ಯೋಗ ಸಂಸ್ಥೆಯವರಿಂದ ವಚನ ಯೋಗ ನೃತ್ಯ ರೂಪಕ, ಕೃಷ್ಣಮೂರ್ತಿ ಮೂಡಬಾಗಿಲು ಇವರ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಕಳ್ಳರ ಸಂತೆ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 05 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಸಾಣೇಹಳ್ಳಿ ಎಸ್.ಎಸ್. ಒಳಾಂಗಣ ರಂಗ ಮಂದಿರದಲ್ಲಿ ‘ಸಾವಯವ ಕೃಷಿ’ ವಿಚಾರ ಸಂಕಿರಣದಲ್ಲಿ ನವೀನ್ ಕುಮಾರ್ ದೇಸಿರಿ ಇವರು ‘ಕೃಷಿ ಮತ್ತು ಉದ್ಯಮ’, ಬಡಗಲಾಪುರ ನಾಗೇಂದ್ರ ಇವರು ‘ಕೃಷಿ ಮತ್ತು ಸರ್ಕಾರದ ನೀತಿಗಳು’, ಬಿಸಿರೊಟ್ಟಿ ಮಲ್ಲೇಶಪ್ಪ ಇವರು ‘ಸಹಜ ಕೃಷಿಯಲ್ಲಿ ಸಗಣಿ ಮಹತ್ವ’ ಮತ್ತು ಅರಿವು ಪ್ರಭಾಕರ್ ಇವರು ‘ಆರ್ಥಿಕ ಮತ್ತು ಪೌಷ್ಠಿಕ ಭದ್ರತೆಗೆ ಅಕ್ಕಡಿ ಬೆಳೆ’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಚಿತ್ರದುರ್ಗ, ಇತರೆ ಜಿಲ್ಲೆಯ ಕೃಷಿಕರು ಹಾಗೂ ಸಾರ್ವಜನಿಕರಿಂದ ಸಂವಾದ, ಶೃತಿ ಶರಣ್ ಕುಮಾರ ಇವರ ರಚನೆ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶ್ರೀ ಗುರುಪಾದೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಭೂತಾಯಿ’ ನಾಟಕ ಪ್ರದರ್ಶನ ನಡೆಯಲಿದೆ. ಸಂಜೆ 6-00 ಗಂಟೆಗೆ ಶರಣತತ್ವ ಚಿಂತಕರಾದ ಡಾ. ಜೆ.ಎಸ್. ಪಾಟೀಲ ಇವರಿಂದ ‘ಲಿಂಗಾಯತ ಧರ್ಮ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಹೊಸದುರ್ಗ ಸುದೀಪ್ತ ಮತ್ತು ತಂಡದವರಿಂದ ವಚನ ನೃತ್ಯರೂಪಕ, ಡಾ. ಜೀವನ್ ರಾಂ ಸುಳ್ಯ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೂಡಬಿದರಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದವರಿಂದ ‘ಚಾರುವಸಂತ’ ನಾಟಕ ಪ್ರಸ್ತುತಗೊಳ್ಳಲಿದೆ.
ದಿನಾಂಕ 06 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಸಿದ್ಧು ಯಾಪಲಪರವಿ ಇವರಿಂದ ‘ಧರ್ಮ-ಸಂಸ್ಕೃತಿ-ಸಂಸ್ಕಾರ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಮೈಕೋ ಶಿವಣ್ಣ ಇವರ ನಿರ್ದೇಶನದಲ್ಲಿ ಬೆಂಗಳೂರಿನ ರೂಪಾಂತರ ಅಭಿನಯಿಸುವ ‘ಗಾಂಧಿ ಜಯಂತಿ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 07 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಖ್ಯಾತ ರಂಗ ಕಲಾವಿದೆ ಮತ್ತು ಚಲನಚಿತ್ರ ನಟಿ ಶ್ರೀಮತಿ ಉಮಾಶ್ರೀ ಇವರಿಗೆ ‘ಶ್ರೀ ಶಿವಕುಮಾರ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ರೂಪಕ, ವೈ.ಡಿ. ಬದಾಮಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಶಿವಯೋಗಿ ಸಿದ್ಧರಾಮೇಶ್ವರ’ ನಾಟಕ ಪ್ರಸ್ತುತಗೊಳ್ಳಲಿದೆ.

