ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾಸಂಘ (ರಿ.) ಸಾಣೇಹಳ್ಳಿ ಇದರ ವತಿಯಿಂದ ಸಂಸ್ಕೃತಿ ಸಚಿವಾಲಯ ನವದೆಹಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ‘ರಾಷ್ಟ್ರೀಯ ನಾಟಕೋತ್ಸವ’ವನ್ನು ದಿನಾಂಕ 04 ನವೆಂಬರ್ 2024ರಿಂದ 09 ನವೆಂಬರ್ 2024ರವರೆಗೆ ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರ ಹಾಗೂ ಎಸ್.ಎಸ್. ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ, ಚಿಂತನ ಕಾರ್ಯಕ್ರಮ, ವಚನಗೀತೆ, ನೃತ್ಯ ರೂಪಕ, ವಿಚಾರ ಮಾಲಿಕೆ, ವಿಚಾರ ಸಂಕಿರಣ, ಉಪನ್ಯಾಸ, ಕೃತಿಗಳ ಲೋಕಾರ್ಪಣೆ, ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಮತ್ತು ನಾಟಕ ಪ್ರದರ್ಶನಗಳು ನಡೆಯಲಿದೆ.
ದಿನಾಂಕ 04 ನವೆಂಬರ್ 2024ರಂದು ಸಚಿವರಾದ ಶ್ರೀ ಶಿವರಾಜ ತಂಗಡಗಿ ಇವರಿಂದ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ, ಶ್ರೀ. ಡಿ. ಸುಧಾಕರ ಇವರಿಂದ ಶಿವಸಂಚಾರ ನಾಟಕಗಳ ಉದ್ಘಾಟನೆ ಮತ್ತು ಡಾ. ಎಮ್.ಎನ್. ಅಜಯ್ ನಾಗಭೂಷಣ ಇವರಿಂದ ಕನ್ನಡ ರಾಜ್ಯೋತ್ಸವದ ಉದ್ಘಾಟನೆ ನೆರವೇರಲಿದೆ. ಇದೇ ಸಂದರ್ಭದಲ್ಲಿ ಕೃತಿಗಳ ಲೋಕಾರ್ಪಣೆ ಮತ್ತು ನೃತ್ಯ ರೂಪಕ ನಡೆಯಲಿದ್ದು, ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಇವರ ನಿರ್ದೇಶನದಲ್ಲಿ ಡಾ. ಬಿ.ಆರ್. ಪೋಲೀಸ್ ಪಾಟೀಲ ರಚಿಸಿರುವ ‘ತುಲಾಭಾರ’ ಎಂಬ ನಾಟಕವನ್ನು ಶಿವಸಂಚಾರ -24 ಇವರು ಅಭಿನಯಿಸಲಿರುವರು.
ದಿನಾಂಕ 05 ನವೆಂಬರ್ 2024ರಂದು ಧಾರವಾಡದ ಪರಿಸರ ಪ್ರೇಮಿ ಡಾ. ಸಂಜೀವ್ ಕುಲಕರ್ಣಿ ಇವರು ‘ಪರಿಸರ ರಕ್ಷಣೆಯ ಬಿಕ್ಕಟ್ಟು ಮತ್ತು ಪರಿಹಾರ’ ಮತ್ತು ಶಾಸಕರಾದ ಡಾ. ಧನಂಜಯ ಸರ್ಜಿ ಇವರು ‘ಸಾಂಪ್ರದಾಯಕ ಆಚರಣೆಗಳು’ ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕೆ.ಎಸ್.ಡಿ.ಎಲ್. ಚಂದ್ರು ಇವರ ನಿರ್ದೇಶನದಲ್ಲಿ ಬೆಂಗಳೂರಿನ ರೂಪಾಂತರ (ರಿ.) ಇವರಿಂದ ‘ಪರಸಂಗದ ಗೆಂಡೆತಿಮ್ಮ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 06 ನವೆಂಬರ್ 2024ರಂದು ಸಂಪಾದಕಿ ಶ್ರೀಮತಿ ವಿ. ಗಾಯತ್ರಿ ಇವರಿಂದ ‘ಸಾವಯವ ಕೃಷಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ವೈ.ಡಿ. ಬದಾಮಿ ಇವರ ನಿರ್ದೇಶನದಲ್ಲಿ ಶಿವಸಂಚಾರ 24 ತಂಡದವರು ‘ಬಂಗಾರದ ಮನುಷ್ಯ’ ಎಂಬ ನಾಟಕ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 07 ನವೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ‘ಧರ್ಮ ಮತ್ತು ಮಾನವ ಹಕ್ಕುಗಳು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಸಂಜೆ 6-00 ಗಂಟೆಗೆ ಬೆಂಗಳೂರಿನ ಭಾಷಾ ವಿಜ್ಞಾನಿ ಶಿಕ್ಷಣ ತಜ್ಞ ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷ ಇವರು ‘ಶಿಕ್ಷಣದಲ್ಲಿ ಮಾತೃಭಾಷೆಯ ಮಹತ್ವ’ ಎಂಬ ವಿಷಯದ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಹುಲಗಪ್ಪ ಕಟ್ಟಿಮನಿ ಇವರ ನಿರ್ದೇಶನದಲ್ಲಿ ‘ಕಾಲಚಕ್ರ’ ಎಂಬ ನಾಟಕವನ್ನು ಮಂಚಿಕೇರಿ ರಂಗಸಮೂಹ ಇವರು ಅಭಿನಯಿಸಲಿದ್ದಾರೆ.
ದಿನಾಂಕ 08 ನವೆಂಬರ್ 2024ರಂದು ಬೆಂಗಳೂರಿನ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷರಾದ ಡಾ. ರವಿಕೃಷ್ಣರೆಡ್ಡಿ ಇವರು ‘ನೈತಿಕ ರಾಜಕಾರಣ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ವೈ.ಡಿ. ಬದಾಮಿ ಇವರ ನಿರ್ದೇಶನದಲ್ಲಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರಿಂದ ‘ಮಹಾಬೆಳಗು’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 09 ನವೆಂಬರ್ 2024ರಂದು ಶ್ರೀ ಶಿವಕುಮಾರ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದ ಬಳಿಕ ಶ್ರೀ ಮಹಾದೇವ ಹಡಪದ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಕೋಳೂರು ಕೊಡಗೂಸು’ ಎಂಬ ನಾಟಕವನ್ನು ಶಿವಸಂಚಾರ 24 ಇವರು ಅಭಿನಯಿಸಲಿದ್ದಾರೆ.
ದಿನಾಂಕ 05 ನವೆಂಬರ್ 2024ರಿಂದ ದಿನಾಂಕ 09 ನವೆಂಬರ್ 2024ರವರೆಗೆ ಪ್ರತಿದಿನ ಮಧ್ಯಾಹ್ನ 2-30ಕ್ಕೆ ಶರಣಸತಿ ಲಿಂಗಪತಿ, ನಡಪಾವಾಡೈ, ಅಕ್ಕ ನಾಗಲಾಂಬಿಕೆ, ಧಾಂ ಧೂಂ ಸುಂಟರಗಾಳಿ, ಮಾಚಿದೇವ ಎಂಬ ನಾಟಕಗಳ ಪ್ರದರ್ಶನ ನಡೆಯಲಿದೆ.