ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ‘ಬಿಸು ಪರ್ಬ’ ಸಂಭ್ರಮ ಕಾರ್ಯಕ್ರಮವು ದಿನಾಂಕ 14 ಏಪ್ರಿಲ್ 2025ರಂದು ಮಂಗಳಾದೇವಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ವಿಷುವಿನ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಿದ ಬಿ.ಸಿ. ರೋಡ್ ನಲ್ಲಿರುವ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ (ರಿ.) ಇದರ ನಿರ್ದೇಶಕ ಡಾ. ತುಕಾರಾಂ ಪೂಜಾರಿಯವರು “ತುಳುವರಲ್ಲಿ ವಿಶಿಷ್ಟವಾದ ಆಚರಣೆಗಳಿವೆ. ಅವು ಈ ಮಣ್ಣಿನ ವಿಶೇಷತೆಗಳನ್ನು ಸಾರುತ್ತವೆ. ಕೆಲವೊಂದು ಶಬ್ದಗಳು, ಗಾದೆಗಳು ಇಲ್ಲಿನ ಬದುಕನ್ನು ತೆರೆದಿಡುತ್ತವೆ. ಇದನ್ನು ನಮ್ಮ ಮುಂದಿನ ಪೀಳಿಗೆ ತಿಳಿಯಬೇಕು. ನಮ್ಮ ಹೊಸ ವರ್ಷ, ಹೊಸ ದಿನ, ಹೊಸಾನ್ನ ಈ ಪದ್ಧತಿಗಳೆಲ್ಲ ಅವರಿಗೆ ವರ್ಗಾಯಿಸಲ್ಪಡಬೇಕು. ಆಗ ಮಾತ್ರ ತುಳು ಜೀವನ ಪದ್ಧತಿ ಉಳಿದುಕೊಳ್ಳಲು ಸಾಧ್ಯ” ಎಂದು ಹೇಳಿದರು.
ಇನ್ನೋರ್ವ ಪ್ರಮುಖ ಭಾಷಣಗಾರ, ತುಳು ವಿದ್ವಾಂಸ ಶ್ರೀ ಮುದ್ದು ಮೂಡುಬೆಳ್ಳೆಯವರು ಮಾತನಾಡಿ “ಕುಡ್ಲದ ಈ ತುಳುಕೂಟವು ಅನೇಕ ತುಳು ಸಂಘಟನೆಗಳಿಗೆ ತವರು ಮನೆಯಿದ್ದಂತೆ. ಬಿಸು ಪರ್ಬದಂತಹಾ ತುಳುನಾಡಿನ ಮಹತ್ವದ ಹಬ್ಬವನ್ನು ವಿಸ್ತೃತವಾಗಿ ಆಚರಿಸುವ ಬಗ್ಗೆ ತಿಳಿಹೇಳುತ್ತಾ ಜಾಗೃತಿಯನ್ನುಂಟು ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಅಲ್ಲದೇ, ಅಪ್ರಕಟಿತ ತುಳು ನಾಟಕ ಸ್ಪರ್ಧೆಯನ್ನೂ ನಡೆಸುವುದಲ್ಲದೇ, ಬರಹಗಾರರ ಸಂಖ್ಯೆಯನ್ನೂ ವೃದ್ಧಿಸುತ್ತದೆ. ತುಳುಕೂಟದಿಂದ ಈ ಕಾರ್ಯ ಇನ್ನು ಮುಂದೆಯೂ ನಿರಂತರವಾಗಿ ಸಾಗಲಿ” ಎಂದು ಹೇಳಿದರು.
ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಮಾತನಾಡಿ “ಸುದೀರ್ಘ ಕಾಲದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ’ಯನ್ನು ಕೂಡಾ ನೀಡುತ್ತಾ ಬರುತ್ತಿದೆ. ಇದು ಶ್ಲಾಘನೀಯ ಕಾರ್ಯ” ಎಂದು ಹೇಳಿದರು.
2025ರ ಸಾಲಿನ ವಿಜೇತರಾದ ಶ್ರೀ ಶಶಿರಾಜ್ ರಾವ್ ಕಾವೂರು – ಪ್ರಥಮ, ಅಕ್ಷತಾರಾಜ್ ಪೆರ್ಲ – ದ್ವಿತೀಯ, ಶ್ರೀಮತಿ ಗೀತಾ ನವೀನ್ ಅಂಚನ್ – ತೃತೀಯ ಪ್ರಶಸ್ತಿಗಳನ್ನು ಪಡೆದರು. ಇನ್ನು ಪ್ರೋತ್ಸಾಹಕರ ಪ್ರಶಸ್ತಿಯನ್ನು ಶ್ರೀ ಪ್ರಕಾಶ್ ಕುಮಾರ್ ಬಗಂಬಿಲ ಹಾಗೂ ಶ್ರೀ ವಿಲಾಸ್ ಕುಮಾರ್ ನಿಟ್ಟೆ ಪಡೆದುಕೊಂಡರು. ಶ್ರೀ ರಘುರಾಮ ಉಪಾಧ್ಯಾಯರು ದೀಪ ಪ್ರಜ್ವಲಿಸಿ ಬಿಸು ಪರ್ಬವನ್ನು ಉದ್ಘಾಟಿಸಿದರು. ತುಳು ಕೂಟದ ಉಪಾಧ್ಯಕ್ಷ ಶ್ರೀ ಜೆ.ವಿ. ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಕಾಮಾಕ್ಷಿ ಸುಭಾಸ್, ಶ್ರೀಮತಿ ಚಂದ್ರಪ್ರಭಾ ದಿವಾಕರ್, ನಾರಾಯಣ ಬಿ.ಡಿ., ಭಾಸ್ಕರ ಕುಲಾಲ್ ಬರ್ಕೆ ಹಾಗೂ ಸುಖಾಲಾಕ್ಷಿ ವೈ. ಸುವರ್ಣ ಇವರುಗಳು ವಿಜೇತರನ್ನು ಪರಿಚಯಿಸಿದರು. ನೆರೆದ ಅತಿಥಿ ಗಣ್ಯರಿಂದ ಪ್ರಶಸ್ತಿ ಪ್ರದಾನ ನಡೆಯಿತು. ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿ, ಧನ್ಯವಾದವಿತ್ತರು. ಜೊತೆ ಕಾರ್ಯದರ್ಶಿ ಶ್ರೀ ನಾಗೇಶ್ ದೇವಾಡಿಗರವರ ನೇತೃತ್ವದಲ್ಲಿ ತುಳು ಹಾಡುಗಳು, ನೃತ್ಯ ಇತ್ಯಾದಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಂಡವು.