ಕೋಣಾಜೆ : ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ದೇರಳಕಟ್ಟೆ ಗ್ರೀನ್ ಗೌಂಡ್ ನ ಡಾ. ವಾಮನ ನಂದಾವರ ಸಭಾಂಗಣದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ವೇದಿಕೆಯಲ್ಲಿ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಕರಾವಳಿ ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ‘ರತ್ನೋತ್ಸವ 2025’ ದಿನಾಂಕ 20 ಡಿಸೆಂಬರ್ 2025ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನಪದ ವಿದ್ವಾಂಸ, ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ “ಸಾಂಸ್ಕೃತಿಕ ನೀತಿ ಶಾಲೆಗಳಿಗೆ ಬೇಕು. ಶಾಲೆಗಳು ವಿದ್ಯಾರ್ಥಿಗಳಲ್ಲಿ ಸಂವೇದನೆಯನ್ನುಂಟು ಮಾಡಬೇಕು. ಮಕ್ಕಳು ಮಾತನಾಡುವ ಪ್ರತಿಯೊಂದು ಮಾತೂ ಕೇವಲ ಪದಗಳಲ್ಲ, ಆ ಮಾತಿನ ಹಿಂದೆ ಅವರ ಆಂತರಿಕ ಸಂವೇದನೆ, ಅನುಭವ ಮತ್ತು ಮನಸ್ಥಿತಿ ಅಡಗಿರುತ್ತದೆ. ಮಕ್ಕಳಲ್ಲಿ ಸೂಕ್ಷ್ಮ ಪ್ರವೃತ್ತಿಯನ್ನು ಬೆಳೆಸುವ ಮಹತ್ವದ ಕಾರ್ಯಕ್ರಮವೇ ಸಾಹಿತ್ಯೋತ್ಸವ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷರು ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ “ರತ್ನೋತ್ಸವದಂತಹ ನಿರಂತರವಾಗಿ ಸಾಹಿತ್ಯಕ ಕೊಡುಗೆಯನ್ನು ನೀಡುವ ಕಾರ್ಯಕ್ರಮಗಳನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ಇಂತಹ ಸಾರ್ಥಕ ಮತ್ತು ಸಮಾಜಮುಖಿ ಪ್ರಯತ್ನಗಳ ಹಿಂದೆ ಸಂಘಟಕರ ಅಚಲ ನಿಷ್ಠೆ ಪರಿಶ್ರಮ ಹಾಗೂ ಸಾಹಿತ್ಯದ ಮೇಲಿನ ಪ್ರೀತಿ ಅಡಗಿದೆ” ಎಂದರು.

ಉಳ್ಳಾಲ ತಾಲೂಕು ಕ.ಸಾ.ಪ. ಅಧ್ಯಕ್ಷ ಧನಂಜಯ ಕುಂಬ್ಳೆ ಅವರು ಮಾತನಾಡಿ, ಇಂಗ್ಲೀಷ್ ಶಾಲೆಗಳಿಗೆ ಕನ್ನಡದ ದೀಕ್ಷೆ ಕೊಡಬೇಕು. ಇಂಗ್ಲೀಷ್ ಭಾಷೆ ಕಲಿಸಿ, ಕನ್ನಡ ಸಂಸ್ಕೃತಿ ಬೆಳೆಸಿ, ಸೌಹಾರ್ದದ ಸಮಾಜವನ್ನು ಕಟ್ಟಬೇಕು. ಕರಾವಳಿ ಎಂದೂ ವಿಘಟನೆಯ ಬೆಂಕಿ ಕೊಟ್ಟನಾಡಲ್ಲ, ಸೌಹಾರ್ದದ ದೀಪ ಬೆಳಗಿದ ನಾಡು” ಎಂದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಸದಾಶಿವ ಉಳ್ಳಾಲ್ ಮಾತನಾಡಿ, “ಶಾಲೆಗಳು ಕೇವಲ ಪಠ್ಯಬೋಧನೆಗೆ ಮಾತ್ರ ಸೀಮಿತವಾಗದೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡಬೇಕಿದೆ” ಎಂದರು.
ಸಮ್ಮೇಳನಾಧ್ಯಕ್ಷ ಲೇಖಕ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಗೋಡೆಶಾಲೆಯ ಶಿಕ್ಷಣ ಪಡೆಯುವವರಿಗೆ ಲೋಕಶಾಲೆಯ ಶಿಕ್ಷಣ ದೊರಕುವಂತಾಗಲಿ ಆಕಾರ ಕೇಂದ್ರಿತ ಅಂಕಕೆಂದ್ರಿತ, ಯಂತ್ರಕೇಂದ್ರಿತ ಶಿಕ್ಷಣ ಇಂದು ಸಂವೇದನಾ ಶೂನ್ಯ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ನಮ್ಮ ನಾಡು, ನುಡಿ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುವ ಮನದ ಮಾಲಿನ್ಯವನ್ನು ನೀಗುವ ಶಿಕ್ಷಣ ಮಕ್ಕಳಿಗೆ ದೊರಕಲಿ” ಎಂದರು.

“ದೇರಳಕಟ್ಟೆಯ ವಿದ್ಯಾರತ್ನ ಅಂಗ್ಲ ಮಾಧ್ಯಮ ಶಾಲೆಯ ಮೂಲಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಕನ್ನಡ ಭಾಷೆ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಾತ್ರೆಯನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಎಳವೆಯಲ್ಲೇ ಸಾಹಿತ್ಯ ಆಸಕ್ತಿಯನ್ನು ಮೂಡಿಸುವ ಈ ಕಾರ್ಯಕ್ರಮ ಶ್ಲಾಘನೀಯ” ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಅಭಿಪ್ರಾಯಪಟ್ಟರು.
ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ ರೈ ಕಲ್ಲಿಮಾರು ಮೆರವಣಿಗೆಗೆ ಚಾಲನೆ ನೀಡಿದರು. ದೇರಳಕಟ್ಟೆ ರತ್ನ ಎಜ್ಯುಕೇಶನ್ ಟ್ರಸ್ಟಿನ ಕೋಶಾಧಿಕಾರಿ ರತ್ನಾವತಿ ಕೆ. ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಸೂಡಿ ಸುರೇಶ್ ಬೆಂಗಳೂರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ದೇರಳಕಟ್ಟೆ ಬೆಳ್ಮ ಪಂಚಾಯತ್ ವಠಾರ, ಶ್ರೀ ಅಯ್ಯಪ್ಪ ದೇವಸ್ಥಾನದಿಂದ ಪೂರ್ಣ ಕುಂಭ ಕಲಶ, ಚೆಂಡೆವಾದನ, ಕೊಂಬುಕಹಳೆ, ಕಂಸಾಲೆ, ಹಾಲಕ್ಕಿ. ವೀರಗಾಸೆ, ಹುಲಿವೇಷ, ಪೂಜಾ ಕುಣಿತ, ಬಣ್ಣದ ಕೊಡೆಗಳು ಹಾಗೂ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳ ಜೊತೆಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಜರಗಿತು. ರತ್ನ ಎಜ್ಯುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ಸೌಮ್ಮ ಆರ್. ಶೆಟ್ಟಿ. ಮುಖ್ಯೋಪಾಧ್ಯಾಯಿನಿ ನಯೀಮಾ ಹಮೀದ್, ಶಾಲಾ ವಿದ್ಯಾರ್ಥಿ ನಾಯಕ ಭವಿತ್ ಸುವರ್ಣ ಉಪಸ್ಥಿತರಿದ್ದರು. ರತ್ನ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ರವೀಂದ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನವನೀತ್ ಶೆಟ್ಟಿ ಕದ್ದಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ಇವರು ವಹಿಸಿದ್ದರು. ಕನ್ನಡ ಮನಸ್ಸು, ಜಾಗೃತಿ ಗೋಷ್ಠಿಯಲ್ಲಿ ಕನ್ನಡ ನಾಡಿನ ಪರಂಪರೆ ಬಗ್ಗೆ ಸಾಯಿಸುಮ ನಾವಡ, ಕನ್ನಡ ಭಾಷೆಯ ಭವಿಷ್ಯದ ಬಗ್ಗೆ ಪ್ರಶಾಂತಿ ಶೆಟ್ಟಿ ಇರುವೈಲು, ಕನ್ನಡ ಸಂಸ್ಕೃತಿಯ ಆದರ್ಶದ ಬಗ್ಗೆ ಪ್ರಭಾತ್ ನಲ್ನಾಡ್ ವಿಷಯ ಮಂಡನೆ ಮಾಡಿದರು. ರತ್ನೋತ್ಸವದ ಅಂಗವಾಗಿ ಹೃದಯ ಕವಿ ಮನ್ಸೂರ್ ಮುಲ್ಕಿ ಇವರ ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿ ಗೋಷ್ಠಿಯಲ್ಲಿ ಕವಿಗಳಾದ ಬಾಲಕೃಷ್ಣ ಬೆರಿಕೆ, ವಾಣಿ ಲೋಕಯ್ಯ, ಲಕ್ಷ್ಮೀ ವಿ. ಭಟ್ ಮಂಜೇಶ್ವರ, ಸಲೀಂ ಸುಳ್ಯ ಉಪಸ್ಥಿತರಿದ್ದರು. ರತ್ನ ಎಜ್ಯುಕೇಶನ್ ಟ್ರಸ್ಟಿನ ಸ್ಥಾಪಕರು ಹಾಗೂ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿ, ಪ್ರಸ್ತಾವನೆಗೈದರು.

ವಿಚಾರಗೋಷ್ಠಿಯನ್ನು ಶಿಕ್ಷಕ ನವೀನ್ ರಾವ್ ನಡೆಸಿಕೊಟ್ಟರು. ಬಹುಭಾಷಾ ಕವಿಗೋಷ್ಠಿಯನ್ನು ಶಾಲಾ ಉಪ ಪ್ರಾಂಶುಪಾಲ ರವಿ ಕೋಡಿ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರತ್ನ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಶ್ವತ್ ಮಂಜನಾಡಿ ನಿರ್ದೇಶನದಲ್ಲಿ ‘ಶರಣ ರತ್ನ’ ಯಕ್ಷಗಾನ, ಜಾನಪದ ನಲಿಕೆ, ದಫ್ ಪ್ರದರ್ಶನ ನಡೆಸಿಕೊಟ್ಟರು.

