17 ಮಾರ್ಚ್ 2023, ಮಂಗಳೂರು: ವಿಶ್ವಬ್ರಾಹ್ಮಣ ಸಮಾಜದ ಮಂದಿಯಲ್ಲಿ ಕಲಾವಿದರಿಗೇನೂ ಕೊರತೆಯಿಲ್ಲ. ಕಲೆಯೆಂಬುದು ಅವರಿಗೆ ರಕ್ತಗತವಾಗಿ ಬಂದಿರುವ ಬಳುವಳಿ. ಪಂಚ ಶಿಲ್ಪಕಲೆಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡವರು ಅನೇಕರಿದ್ದಾರೆ, ಹಾಗಂತ ಸಂಗೀತ ಕಲಾ ಕ್ಷೇತ್ರದಲ್ಲೂ ಹೆಸರು ಗಳಿಸಿದವರು ಇಲ್ಲವೆಂದಲ್ಲ, ಆದರೆ ಅನೇಕ ಕಲಾವಿದರು ಪ್ರತಿಭಾವಂತರಾಗಿದ್ದರೂ ಕೂಡ ಸೂಕ್ತವಾದ ಅವಕಾಶಗಳಿಂದ ವಂಚಿತರಾಗಿ, ಕಲಾಭಿಮಾನಿಗಳ ಪ್ರೋತ್ಸಾಹವೂ ಲಭಿಸದೆ ಎಲೆ ಮರೆಯ ಕಾಯಿಯಂತೆಯೇ ಉಳಿದಿರುವರು. ಇಂತಹ ಅನೇಕರ ಸಾಲಿನಲ್ಲಿ ಕಂಡುಬರುವ ಹೆಸರೇ ಕೆ.ರವಿಶಂಕರ್..!
ಹಿಂದುಸ್ತಾನಿ ಸಂಗೀತ ಕಲಿತಿರುವ ಈತ ಹಾರ್ಮೋನಿಯಂ, ಮೃದಂಗ, ತಬ್ಲಾ, ನುಡಿಸುವ ಪರಿಣತರು ಮಾತ್ರವಲ್ಲ, ಹಾಡುಗಳಿಗೆ ರಾಗ ಸಂಯೋಜನೆ ಮಾಡಬಲ್ಲ ಪ್ರತಿಭಾನ್ವಿತ, ಅಂತೆಯೇ ದೇವರ ನಾಮ, ದಾಸರ ಪದಗಳು, ಭಾವ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲ ನಿಪುಣ. ಎಳವೆಯಲ್ಲೇ ಸಂಗೀತಾಸಕ್ತಿ ಹೊಂದಿದ್ದ ಕಾರಣ ಸಂಗೀತ ಕ್ಷೇತ್ರದ ಹಿರಿಯ ಸಾಧಕ ದಿ.ಎನ್.ಕೆ.ಸುಂದರ ಆಚಾರ್ಯರಲ್ಲಿ ಮೃದಂಗ ಹಾಗೂ ತಬ್ಲಾ ವಾದನವನ್ನು ಕಲಿತರು. ಅದೇ ರೀತಿ ಭಾರತೀಯ ವಿದ್ಯಾಭವನದ ಹಿಂದುಸ್ತಾನಿ ಸಂಗೀತ ಗುರು ಕೆ.ಎಮ್.ದಾಸ್ ಅವರಿಂದ ಹಿಂದುಸ್ತಾನಿ ಗಾಯನದ ಪಾಠವನ್ನು ಕಲಿತರು. 1991ರಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸಿದ “ಹಿಂದುಸ್ತಾನಿ ಗಾಯನ” ಪರೀಕ್ಷೆಯಲ್ಲಿ ರಾೄಂಕನ್ನು ಗಳಿಸಿಕೊಂಡರು.
ತನ್ನ ತಂದೆ ಹಿರಿಯ ವೈದಿಕ ದಿ. ಪುರೋಹಿತ ಕೆ. ದಾಮೋದರ ಆಚಾರ್ಯ ಹಾಗೂ ತಾಯಿ ಲೀಲಾವತಿಯವರ ಜೇಷ್ಠ ಪುತ್ರನಾಗಿ ಜನಿಸಿ, ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲೇ ತನ್ನ ಬಾಲ್ಯಾವಸ್ಥೆಯನ್ನು ಕಳೆದುದರ ಪರಿಣಾಮವಾಗಿ ದೇವಳದ ಗುರುಮಠದಲ್ಲಿ ನಡೆಯುತ್ತಿದ್ದ “ಭಜನಾ ಕಾರ್ಯಕ್ರಮ”ವು ರವಿಯವರ ಮೇಲೆ ಅತ್ಯಂತ ಪ್ರಭಾವವನ್ನು ಬೀರಿದೆ. ಈ ಕಾರಣದಿಂದಾಗಿಯೇ ತನ್ನಲ್ಲಿ ಹುದುಗಿಕೊಂಡಿದ್ದ ಸಂಗೀತದ ದಾಹ ಅವರನ್ನು ಹಂತ ಹಂತವಾಗಿ ಬೆಳೆಸಿತೆನ್ನಬಹುದು. ಮೂರು ದಶಕಗಳ ಹಿಂದೆ ಮಂಗಳೂರು ಆಕಾಶವಾಣಿಯಲ್ಲಿ ಶಂಕರ್ ರವರು ಬಿ. ಹೈಗ್ರೇಡ್ ಕಲಾವಿದರಾಗಿ ಗುರುತಿಸಿಕೊಳ್ಳುವ ಮೂಲಕ ಅನೇಕ ಬಾರಿ ಇವರು ಹಾಡಿದ ಹಾಡುಗಳು ಪ್ರಸಾರವಾಗುವಂತಾಯಿತು.
ಸಮಾನ ಮನಸ್ಕರಾಗಿರುವ ಸಂಗೀತ ಕಲಾವಿದ ಸ್ನೇಹಿತರನೇಕರ ಬಳಗವನ್ನು ಹೊಂದಿರುವ ರವಿಶಂಕರ್ ತನ್ನದೇ ಆದ ” ಗಾನ ಸುಧಾ ” ಸಂಗೀತ ರಸಮಂಜರಿ ತಂಡವನ್ನು ಹುಟ್ಟು ಹಾಕಿ ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಾ ಕಲಾಭಿಮಾನಿಗಳ ಮನಸೂರೆಗೊಂಡಿರುವರು. ಈ ನಡುವೆಯೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಉರ್ವದ ಕೊರಗಜ್ಜ ಕ್ಷೇತ್ರ ಮೊದಲಾದ ಪ್ರಸಿದ್ದ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ಭಕ್ತಿಗೀತೆಗಳಿಗೆ ರಾಗ ಸಂಯೋಜನೆಗೊಳಿಸಿ, ತನ್ನ ಕಲಾ ಪ್ರೌಢಿಮೆಯನ್ನು ಮೆರೆದಿರುವರು.
ಕಳೆದ ಒಂದು ದಶಕದಿಂದೀಚೆಗೆ ಆಸಕ್ತರನೇಕರಿಗೆ ಭಜನಾ ತರಬೇತಿಯನ್ನು ನೀಡುತ್ತಿರುವ ಇವರು ಪ್ರಸ್ತುತ ಮಂಗಳೂರಿನ ಕದ್ರಿಯ ಶಿವಪ್ರಿಯಾ ಭಜನಾ ಮಂಡಳಿ, ಹಾಗೂ ಬಸವನಗುಡಿ ಮಠದಲ್ಲಿ ತನ್ನ ಶಿಷ್ಯ ವರ್ಗಕ್ಕೆ ಭಜನೆ ಹಾಗೂ ಭಾವಗೀತೆಗಳನ್ನು ಕಲಿಸುತ್ತಿದ್ದಾರೆ. ಹಲವಾರು ಸಂಘ-ಸಂಸ್ಥೆಗಳು ಕೆ.ಶಂಕರ್ ರವರ ಪ್ರತಿಭೆಯನ್ನು ಮೆಚ್ಚಿಕೊಂಡು ಸನ್ಮಾನಿಸಿ ಗೌರವಿಸಿವೆ. 2021ರಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ಉಡುಪಿಯಲ್ಲಿ ಮಲಬಾರ್ ಗೋಲ್ಡ್, ದಿಶಾ ಕ್ರಿಯೇಷನ್ಸ್ ಹಾಗೂ ಸೃಷ್ಟಿ ಮ್ಯೂಸಿಕ್ ಅಕಾಡಮಿ ಎಂಬ ಮೂರು ಸಂಸ್ಥೆಗಳು ಜತೆಯಾಗಿ ಖ್ಯಾತ ಹಿನ್ನಲೆ ಗಾಯಕ ದಿ.ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೆಸರಲ್ಲಿ ಪುರಸ್ಕರಿಸಿ ಗೌರವಿಸಿರುವುದು ಶಂಕರ್ ರವರಿಗೆ ತುಂಬಾ ಖುಷಿಯನ್ನುಂಟುಮಾಡಿದೆ.
ಪ್ರತಿಯೊಬ್ಬನ ಬದುಕಿನಲ್ಲಿ ಏರಿಳಿತಗಳು ಸಹಜ. ಕಲೆಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಕಲಾವಿದರೂ ಇದಕ್ಕೆ ಹೊರತಲ್ಲ. ಶಂಕರ್ ಕೂಡಾ ತನ್ನ ಇದುವರೆಗಿನ “ಸಂಗೀತ ಪಯಣ”ದಲ್ಲಿ ಸಾಕಷ್ಟು ನೋವು-ನಲಿವುಗಳನ್ನು ಅನುಭವಿಸಿದ್ದಾರೆ. ತನ್ನನ್ನು ಈ ಹಂತದವರೆಗೂ ಬೆಳೆಯುವಲ್ಲಿ ಪ್ರೋತ್ಸಾಹಿಸಿದ ಅನೇಕ ಸಂಘ ಸಂಸ್ಥೆಗಳನ್ನು ಹಾಗೂ ಕಲಾ ಪೋಷಕರನ್ನು ಅವರು ಯಾವತ್ತೂ ಕೃತಜ್ಞತೆಯಿಂದ ಸ್ಮರಿಸುತ್ತಿರುತ್ತಾರೆ. ವಿಶ್ವಕರ್ಮ ಸಮಾಜದ ಓರ್ವ ಪ್ರತಿಭಾವಂತ ಸಂಗೀತ ಕಲಾವಿದ ಕೆ.ಶಂಕರ್ ಅವರ ಭವಿಷ್ಯದ ಕಲಾಜೀವನಕ್ಕೆ ನಾವೆಲ್ಲರೂ ಶುಭವನ್ನು ಹಾರೈಸೋಣ .
ಬರಹ : ಪಶುಪತಿ ಉಳ್ಳಾಲ