ಕಾಸರಗೋಡು : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಬಾಲ ಭವನ್ ವಿದ್ಯಾಕೇಂದ್ರ ಅಶ್ವಿನಿ ನಗರ ಹಾಗೂ ಶ್ರೀ ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಯಕ್ಷಗಾನ ಸಂಶೋಧನಾ ತರಬೇತಿ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 27 ಜೂನ್ 2025ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ಗ್ರಂಥಾಲಯ ವಾಚನ ವಾರಾಚರಣೆ ಸಮಾರಂಭವು ಉದ್ಘಾಟನೆಗೊಂಡಿತು.
ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಇವರು ಮಾತನಾಡಿ “ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಹೊಂದುವುದರೊಂದಿಗೆ ಉತ್ತಮ ಸಂಸ್ಕಾರವಂತರಾಗಬೇಕು. ಉತ್ತಮ ಸಂಸ್ಕಾರ ಹೊಂದಬೇಕಾದರೆ ಪಠ್ಯ ಪುಸ್ತಕ ಮಾತ್ರವಲ್ಲದೆ ಇತರ ಉತ್ತಮ ಪುಸ್ತಕಗಳನ್ನು ಓದಬೇಕು. ಆಗ ಭಾಷಾ ಸ್ನೇಹ, ಸಾಹಿತ್ಯ ಸಂಪರ್ಕ, ತನ್ ಮೂಲಕ ಉತ್ತಮ ಸಾಮಾಜಿಕ ಕಳಕಳಿಯ ಸಂಸ್ಕಾರ ಮೈಗೂಡಿ ಸಮಾಜಕ್ಕೆ ಹಿತವಾಗುವ ವ್ಯಕ್ತಿಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
ಕನ್ನಡ ಭವನ ಗ್ರಂಥಾಲದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಗರದ ಬಿ.ಇ.ಎಂ. ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ರಾಜೇಶ್ ಚಂದ್ರ ಕೆ.ಪಿ. ಮತ್ತು ಪತ್ರಕರ್ತ ಜಗನ್ನಾಥ್ ಶೆಟ್ಟಿ ಮಾತನಾಡಿದರು. ಬಾಲ ಭವನ ಮುಖ್ಯೋಪಾಧ್ಯಾಯಿನಿ ಲೀಲಾವತಿ ನಾಯರ್, ಅಧ್ಯಾಪಿಕೆ ಜಯಂತಿ, ಸಂಕೀರ್ತನ ಸಾಮ್ರಾಟ್ ಜಯಾನಂದ ಕುಮಾರ್ ಹೊಸದುರ್ಗ, ಪತ್ರಕರ್ತ ಜಯಮಣಿಯಂಪಾರೆ ಪಾರೆ, ಪತ್ರಕರ್ತ ಪ್ರದೀಪ್ ಬೇಕಲ್ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಜಯಂತಿ ಟೀಚರನ್ನು ಕನ್ನಡ ಭವನದ ವತಿಯಿಂದ ಡಾ. ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ಟೀಚರ್ ಅಭಿನಂದಿಸಿ ಗೌರವಿಸಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕನ್ನಡ ಭವನ ಸಾರ್ವಜನಿಕ ವಾಚನಾಲಯ ಸಂಚಾಲಕಿ ಸಂಧ್ಯಾರಾಣಿ ಟೀಚರ್ ಸ್ವಾಗತಿಸಿ, ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.