ಪುತ್ತೂರು : ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಾಹಿತಿ ಡಾ. ವಿಷ್ಣು ಕೆ. ಇವರು ರಚಿಸಿರುವ ಮೂರು ಕೃತಿಗಳ ಲೋಕಾರ್ಪಣಾ ಸಮಾರಂಭವು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಸಹಕಾರದೊಂದಿಗೆ ದಿನಾಂಕ 27 ಡಿಸೆಂಬರ್ 2025ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.
‘ಮೋದಿಜೀ ನಮ್ಮ ಮನೆಗೆ ಬಂದರು – ಅಂತರಾತ್ಮದ ಭೇಟಿ’ ಎಂಬ ವಿಶಿಷ್ಟ ಕೃತಿಯನ್ನು ನಿವೃತ್ತ ಪ್ರಾಂಶುಪಾಲರಾದ ಡಾ. ಎನ್. ಪರಮೇಶ್ವರ ಭಟ್ ಇವರು, ಮನೋವೈಜ್ಞಾನಿಕ ಕಥಾಸಂಕಲನ ‘ಅಂತರ್ಯುದ್ಧ’ ಕೃತಿಯನ್ನು ಪ್ರಾಧ್ಯಾಪಕರಾದ ಪ್ರೊ. ಹರಿನಾರಾಯಣ ಮಾಡಾವು ಇವರು, ಕನ್ನಡಕ್ಕೆ ಭಾಷಾಂತರಿಸಿದ ‘ಐತರೇಯೋಪನಿಷದ್’ ಕೃತಿಯನ್ನು ಬೆಟ್ಟಂಪಾಡಿ ಸರ್ಕಾರಿ ಪ್ರೌಢಶಾಲೆಯ ಸಹಾಯಕ ಶಿಕ್ಷಕಿ ಕುಮಾರಿ ಉಮಾ ಇವರು ಲೋಕಾರ್ಪಣೆ ಮಾಡಿದರು. ವಿವೇಕಾನಂದ ಸ್ವಾಯತ್ತೆ ಕಾಲೇಜಿನ ಪರೀಕ್ಷಾಂಗ ಕುಲ ಸಚಿವರಾದ ಡಾ ಶ್ರೀಧರ್ ಎಚ್.ಜೀ. ಇವರು ಮಾತೃದೇವೋಭವ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ದೀಪ ಪ್ರಜ್ವಲನ, ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸುವುದು ಹಾಗೂ ಸ್ಮರಣಿಕೆಗಳನ್ನು ನೀಡುವ ಕಾರ್ಯವನ್ನು ಡಾ. ವಿಷ್ಣು ಕೆ. ಇವರ ಮೊಮ್ಮಕ್ಕಳು ನಿರ್ವಹಿಸಿದರು. ಜೊತೆಗೆ ಕೃತಿ ಬಿಡುಗಡೆ ಸಂದರ್ಭದಲ್ಲಿ ವೇದಿಕೆಗೆ ಬಂದು ಅಪಾರ ಸಂತೋಷದಿಂದ ಅನುಭವಿಸಿದರು. ವೇದಿಕೆಯ ಮೇಲಿನ ಅವರ ಉತ್ಸಾಹಭರಿತ ಹಾಜರಾತಿ ಸಮಾರಂಭಕ್ಕೆ ವಿಶೇಷ ಸೌಂದರ್ಯ ಮತ್ತು ಆತ್ಮೀಯತೆಯನ್ನು ಹೆಚ್ಚಿಸಿತು. ಹೀಗೆ ಕನ್ನಡ ಸಾಹಿತ್ಯ ಪರಿಷತ್ ಮಕ್ಕಳ ಮನ ತಲುಪಿತು !
