ಸುರತ್ಕಲ್ : ಸುರತ್ಕಲ್ ಗೋವಿಂದ ದಾಸ ಕಾಲೇಜು ಗ್ರಂಥಾಲಯ ವಿಭಾಗ, ಭಾಷಾ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ, ಕರಾವಳಿ ವಿಕೀಮೀಡಿಯಾ ಯೂಸರ್ ಗ್ರೂಪ್, ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿ ಬೆಂಗಳೂರು ಇದರ ಸಹಯೋಗದಲ್ಲಿ ಗೋವಿಂದ ದಾಸ ಕಾಲೇಜಿನಲ್ಲಿ ಎರಡು ದಿನಗಳ ರೀ ಲೈಸನ್ಸಿಂಗ್, ಡಿಜಿಟಲೈಸೇಷನ್ ಮತ್ತು ಅಪ್‍ಲೋಡಿಂಗ್ ಆನ್ ವಿಕಿ ಮೀಡಿಯ ಕಾರ್ಯಾಗಾರ ದಿನಾಂಕ 16-09-2023ರಂದು ಉದ್ಘಾಟನೆಗೊಂಡಿತು.
ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಲೇಖಕ ಡಾ.ಎಂ.ಪ್ರಭಾಕರ ಜೋಷಿ “ಓದಿನ ವಿಸ್ತರಣೆಗೆ ಆಧುನಿಕ ತಂತ್ರಜ್ಞಾನದ ಮಾಧ್ಯಮ ಬಳಕೆ ಅನಿವಾರ್ಯವಾಗಿದ್ದು ವಿಕೀಪೀಡಿಯಾ ಈ ನಿಟ್ಟಿನಲ್ಲಿ ಉತ್ತಮಕಾರ್ಯ ನಿರ್ವಹಿಸುತ್ತಿದೆ.” ಎಂದು ನುಡಿದರು. ಈ ಕಾರ್ಯಗಾರದಲ್ಲಿ ಎಂ.ಪ್ರಭಾಕರ ಜೋಷಿಯವರ ಕೇದಗೆ ಪುಸ್ತಕವನ್ನು ಡಿಜಿಟಲೈಸೇಷನ್ ಮಾಡಿ ವಿಕಿ ಕಾಮನ್ಸ್‍ಗೇ ಅಪ್‍ಲೋಡ್ ಮಾಡಲಾಯಿತು. ಮುಂದಿನ ದಿನಗಳಲ್ಲಿ ಅವರ ಹದಿನೆಂಟು ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿ ವಿಕಿ ಕಾಮನ್ಸ್‍ಗೆ ಅಪ್‍ಲೋಡ್ ಮಾಡಲು ಡಾ.ಎಂ ಪ್ರಭಾಕರ ಜೋಷಿ ಅವರು ಅನುಮತಿ ನೀಡಿದರು.
ಪುಸ್ತಕಗಳ ಡಿಜಿಟಲೈಸೇಷನ್ ಮಾಡುವ ತರಬೇತಿಯನ್ನು ಸುಬೋಧ್ ಕುಲಕರ್ಣಿ ಹಾಗೂ ಸಂಜೀವ್ ಬೊಂಡೆಯವರು ನೀಡಿದರು. ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿ ಬೆಂಗಳೂರಿನ ಸೀನಿಯರ್ ಪ್ರೋಗ್ರಾಮ್ ಆಫೀಸರ್ ಸುಬೋಧ್ ಕುಲಕರ್ಣಿ ಮಾತನಾಡಿ “ಗ್ರಂಥಗಳ ಡಿಜಿಟಲೀಕರಣದ ಮಹತ್ವವನ್ನು ತಿಳಿಸಿ ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಯುತ್ತಿದೆ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೃಷ್ಣಮೂರ್ತಿ ಅವರು ವಹಿಸಿದ್ದರು. ಉಪ ಪ್ರಾಶುಂಪಾಲ ಪ್ರೊ.ರಮೇಶ್ ಭಟ್ ಎಸ್.ಜಿ ಹಾಗೂ ನಿವೃತ್ತ ಗ್ರಂಥ ಪಾಲಕ ಬಾಲಕೃಷ್ಣ.ಕೆ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಗ್ರಂಥಪಾಲಕಿ ಡಾ.ಸುಜಾತ.ಬಿ ಸ್ವಾಗತಿಸಿ, ಕರಾವಳಿ ವಿಕಿ ಮೀಡಿಯ ಯೂಸರ್ ಗ್ರೂಪಿನ ಕೋಶಾಧಿಕಾರಿ ಡಾ.ಕಿಶೋರ್ ಕುಮಾರ್ ರೈ ಶೇಣಿ ಪ್ರಸ್ತಾವಿಕ ಭಾಷಣ ಮಾಡಿದರು. ದೀಪ ಹಾಗೂ ರಮೀತಾ ನಿರೂಪಿಸಿ, ಶರ್ಮಿತ ವಂದಿಸಿದರು.
ಕರಾವಳಿ ವಿಕಿ ಮೀಡಿಯ ಯೂಸರ್ ಗ್ರೂಪಿನ ಸದಸ್ಯೆ ಕವಿತಾ ಗಣೇಶ್, ಸದಸ್ಯ ಬೆನೆಟ್ ಅಮ್ಮನ್ನ, ಬೆಸೆಂಟ್ ಸಂಧ್ಯಾ ಕಾಲೇಜಿನ ಗ್ರಂಥಪಾಲಕ ಡಾ.ವಾಸಪ್ಪ ಗೌಡ ಉಪಸ್ಥಿತರಿದ್ದರು.

