ಮಂಗಳೂರು : ಚಕ್ರಪಾಣಿ ನೃತ್ಯ ಕಲಾಕೇಂದ್ರ ಅತ್ತಾವರ ಮಂಗಳೂರು ಇವರ ವತಿಯಿಂದ ಅತ್ತಾವರ ಕಟ್ಟೆಯಿಂದ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ತನಕ ಭವ್ಯ ಮೆರವಣಿಗೆಯ ಸ್ವಾಗತದೊಂದಿಗೆ “170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ಮಾಡಿ ಮ್ಯಾರಥಾನ್ ಗೋಲ್ಡನ್ ಬುಕ್ ದಾಖಲೆ ನಿರ್ಮಿಸಿದ” ರೆಮೋನಾ ಎವೆಟ್ ಪಿರೇರಾ ಇವರ ಅಭಿನಂದನಾ ಕಾರ್ಯಕ್ರಮವು ದಿನಾಂಕ 24 ಆಗಸ್ಟ್ 2025ರಂದು ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ವೈಭವದಿಂದ ಜರುಗಿತು.
‘ಶಾಂತಲಾ’ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ದೇವತಾಜ್ಯೋತಿ ಪ್ರಜ್ವಲನಗೈದು, “ರೆಮೋನಾರ ಸಾಧನೆ ಪೋಷಕರು, ಗುರುಗಳು, ವಿದ್ಯಾಕೇಂದ್ರ, ಊರು, ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.
ಸನ್ಮಾನಿತ ನುಡಿಯಲ್ಲಿ ರೆಮೋನಾ ಪಿರೇರಾ ತಮ್ಮ ಭಾವನೆ ಹಂಚಿಕೊಂಡು “ಚಕ್ರಪಾಣಿ ನೃತ್ಯ ಕಲಾಮಂದಿರವೇ ನನ್ನ ಭರತನಾಟ್ಯದ ಮೊದಲ ಹೆಜ್ಜೆ. ಗುರು ಹಾಗೂ ಕಲೆಗೆ ಸಮರ್ಪಣೆಯಿಂದ ಮಾಡಿದ ಸಾಧನೆಯ ಫಲವೇ ಇಂದಿನ ಈ ಗೌರವ. ಭರತನಾಟ್ಯ ಆರಾಧಕರ ಉಸಿರಾಗಲಿ; ಭರತನಾಟ್ಯಕ್ಕೆ ಧರ್ಮ ಎಂದೂ ಅಡ್ಡಿಯಾಗಬಾರದು” ಎಂದು ಧನ್ಯತೆಯಿಂದ ಹೇಳಿದರು.
ರೆಮೋನಾರ ಆರಂಭಿಕ ಗುರು ವಿದ್ವಾನ್ ಸುರೇಶ್ ಅತ್ತಾವರ್ ಅವರು ತಮ್ಮ ಆಶೀರ್ವಚನದಲ್ಲಿ, “ರೆಮೋನಾರ ಶ್ರದ್ಧೆ ಮತ್ತು ಪರಿಶ್ರಮವೇ ಈ ಸಾಧನೆಯ ಮೂಲ” ಎಂದು ಹಾರೈಸಿದರು. ಈ ಕಾರ್ಯಕ್ರಮಕ್ಕೆ ವಿದ್ವಾನ್ ಸುರೇಶ್ ಅತ್ತಾವರ್ ಅವರ ಧರ್ಮಪತ್ನಿ ಶ್ರೀಮತಿ ಮಲ್ಲಿಕಾ ಹಾಗೂ ಪುತ್ರಿ ವಿದುಷಿ ಶ್ರುತಿ ಚಂದ್ರು ಸಂಪೂರ್ಣ ಬೆಂಬಲ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಶ್ರೀ ಪದ್ಮರಾಜ್ ಆರ್. ಪೂಜಾರಿ “ಚಕ್ರಪಾಣಿ ನೃತ್ಯ ಕಲಾಕೇಂದ್ರದ ಸಂಘಟನಾ ಶಕ್ತಿ ಹಾಗೂ ರೆಮೋನಾರ ಸಾಧನೆ ಶ್ಲಾಘನೀಯ” ಎಂದರು. ಅತಿಥಿಗಳಾದ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಧರ್ಮಣ್ಣ ನಾಯ್ಕ್ ತಮ್ಮ ನುಡಿಯಲ್ಲಿ “ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬ ನುಡಿಗಟ್ಟು ರೆಮೋನಾರ ಸಾಧನೆಗೆ ಪೂರಕವಾಗಿದೆ” ಎಂದು ಹೇಳಿದರು.
ಚಕ್ರಪಾಣಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಎಚ್. ರತೀಂದ್ರನಾಥ “ಶ್ರದ್ಧೆ, ಪರಿಶ್ರಮ ಹಾಗೂ ನಾಟ್ಯದ ಭಕ್ತಿಗೆ ದೊರೆತ ಯಶಸ್ಸು” ಎಂದು ಹಾರೈಸಿದರು. ಚಕ್ರಪಾಣಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಕೋಟ್ಯಾನ್ ಹಾಗೂ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಪ್ರಧಾನ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಬಬಿತಾ ನಿರೂಪಿಸಿ, ಶ್ರೀಮತಿ ಕೀರ್ತಿ ಪ್ರಾರ್ಥನೆ ಹಾಗೂ ಅಭಿನಂದನಾ ಪತ್ರ ವಾಚಿಸಿ, ಶ್ರೀಮತಿ ಪುಷ್ಪಲತಾ ಧನ್ಯವಾದಗಳನ್ನು ಸಲ್ಲಿಸಿದರು. ಕೊನೆಯಲ್ಲಿ ಚಕ್ರಪಾಣಿ ಕಲಾಕೇಂದ್ರದ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮ ಭವ್ಯವಾಗಿ ಸಂಪನ್ನವಾಯಿತು.