ಮಂಗಳೂರು : ಮಹಾಲಸಾ ಕಾಲೇಜ್ ಆಫ್ ವಿಶುವಲ್ ಆರ್ಟ್ಸ್ ಇದರ ಅಪ್ಲೈಡ್ ಆರ್ಟ್ಸ್ ವಿಭಾಗದ ಮುಖ್ಯಸ್ಥ ಹಾಗೂ ಪ್ರಸಿದ್ದ ಚಿತ್ರಕಲಾವಿದ ಸಯ್ಯದ್ ಆಸಿಫ್ ಅಲಿ (53) ಹೃದಯಾಘಾತದಿಂದ ದಿನಾಂಕ 05 ಜನವರಿ 2026ರಂದು ನಿಧನ ಹೊಂದಿದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿತ್ರಕಲಾ ಕಾಲೇಜಿನಲ್ಲಿದ್ದ ಅವರಿಗೆ ತೀವ್ರ ಹೃದಯಾಘಾತವಾಗಿದ್ದು ತತ್‌ಕ್ಷಣ ಸಹೋದ್ಯೋಗಿಗಳು ಕರಂಗಲಪಾಡಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರು ಆದರೆ ದಾರಿಮಧ್ಯೆ ಅವರು ಕೊನೆಯುಸಿರೆಳೆದರು. ಅವರ ಪತ್ನಿ 10 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಮಗಳು ದುಬೈಯಲ್ಲಿ ಉದ್ಯೋಗದಲ್ಲಿದ್ದು ಹಾಗೂ ಮಗ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಲೂರಿನವರಾದ ಅವರು, ಮಂಗಳೂರಿನ ಭಗವತಿ ನಗರದ ನಿವಾಸಿಯಾಗಿದ್ದರು. ತುಮಕೂರಿನ ಆರ್.ಕೆ.ಎನ್. ಚಿತ್ರಕಲಾ ವಿದ್ಯಾಲಯದಲ್ಲಿ ಜಿಡಿ ಆರ್ಟ್ ಪದವಿ ಮತ್ತು ಹಂಪಿ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಇನ್ ವಿಷುವಲ್ ಆರ್ಟ್ ಸ್ನಾತಕೋತ್ತರ ಪದವಿ ಪಡೆದಿದ್ದರು. 30 ವರ್ಷಗಳಿಂದ ಮಂಗಳೂರು ಮಹಾಲಸಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಜಲವರ್ಣ, ಫೋರ್ಟ್ ರೈಟ್ ಚಿತ್ರಕಲಾ ತಜ್ಞರಾಗಿದ್ದರು. ಅಖಿಲ ಭಾರತ ರಾಷ್ಟ್ರಮಟ್ಟದ ಚಿತ್ರಕಲಾ ಪ್ರದರ್ಶನ ಪ್ರಶಸ್ತಿ- ಅಂಬಾಲ, ಮೈಸೂರು ದಸರಾ ವಾರ್ಷಿಕ ಚಿತ್ರಕಲಾ ಪ್ರದರ್ಶನದ ಒಂಭತ್ತು ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಕ್ಯಾಮ್ಲಿನ್ ರಾಷ್ಟ್ರೀಯ ಪ್ರಶಸ್ತಿ, ವರ್ಣಶ್ರೀ ಪ್ರಶಸ್ತಿಗಳು ಪ್ರಾಪ್ತವಾಗಿದ್ದವು.
