Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಮರ್ಶೆ | ‘ಸುಮನೋಲ್ಲಾಸದ ಅಲೆಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮ
    Article

    ವಿಮರ್ಶೆ | ‘ಸುಮನೋಲ್ಲಾಸದ ಅಲೆಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮ

    September 9, 2024No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನಿಮ್ಮ ಕೃತಿಯ ಸಾವಿರ ಪ್ರತಿಗಳು ಪ್ರಕಟವಾದರೆ, ನೂರಾರು ಮಂದಿಯ ಕೈಗಳಿಗೆ ಸಿಕ್ಕಿ ಹತ್ತೋ ಹದಿನೈದೋ ಮಂದಿ ಓದಿ ಮೆಚ್ಚುಗೆ ಸೂಚಿಸಿದರೆ ಒಂದು ವರ್ತುಲ ಪೂರ್ತಿಯಾದಂತೆ. ಅಲ್ಲಿಗೆ ಅಕ್ಷರ ಪ್ರಯಾಣಕ್ಕೆ ವಿರಾಮ. ಕವನ ಸಂಕಲನಗಳಾದರೂ ಅಷ್ಟೆ. ಹಿಂದೆಲ್ಲ ಕವಿಯ ಒಂದೆರಡು ರಚನೆಗಳು ಪಠ್ಯಪುಸ್ತಕದಲ್ಲಿ ಬಂದರೆ, ಆಗಾಗ ಒಂದಿಷ್ಟು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದರೆ, ” ಓ ಮೊನ್ನೆ ಉದಯವಾಣಿಯಲ್ಲಿ ನಿಮ್ಮದೇನೊ ಬಂದಿತಲ್ಲ” ಎನ್ನುವುದೂ ಇತ್ತು. ಗೇಯತೆ ಇದ್ದರೆ ಧ್ವನಿ ಸುರುಳಿಯಾಗಲಿಕ್ಕೂ ಸಾಕು. ಕೆಲವರು ಈ ವಿಷಯದಲ್ಲಿ ಸ್ವಲ್ಪ ಭಿನ್ನ. ಕಾಸರಗೋಡು ಅಂಥ ಕವಿಯೊಬ್ಬನನ್ನು ಪಡೆದಿದೆ. ಸರಳ ವಿಧಾನಗಳಿಂದ ರೋಗ ನಿದಾನ ಮಾಡುತ್ತ ಆರೋಗ್ಯ ಗೀತೆಗಳನ್ನು ಹಾಡುತ್ತಾ ಭೇಟಿಗೆ ಬಂದ ರೋಗಿಗಳನ್ನು ಸಂತೈಸುತ್ತ, ಬಿಡುವಾದಾಗಲೆಲ್ಲ ಯಕ್ಷಗಾನ ಕೂಟಗಳಲ್ಲಿ ಭಾಗವಹಿಸುವ ರಮಾನಂದ ಬನಾರಿಯವರು ಕಾಲಾ ಕಾಲಕ್ಕೆ ಹದಿನೆಂಟರಷ್ಟು ಕವನ ಸಂಕಲನಗಳನ್ನು ಬರೆದಿದ್ದು ಅವುಗಳನ್ನೆಲ್ಲ ಅಧ್ಯಯನ ಮಾಡಿದ ಡಾ. ಪ್ರಮೀಳಾ ಮಾಧವ್ ಒಂದು ಪುಸ್ತಕ ತಯಾರಿಸಿದ್ದಾರೆ. ಅದರ ಹೆಸರು ‘ಸುಮನೋಲ್ಲಾಸದ ಅಲೆಗಳು.’

    ಈ ಕೃತಿಯು ದಿನಾಂಕ 5 ಸೆಪ್ಟೆಂಬರ್ 2024ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಡಾ. ಪಿ. ಶ್ರೀಕೃಷ್ಣ ಭಟ್ಟರಿಂದ ಲೋಕಾರ್ಪಣೆಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯರು “ಶಿಕ್ಷಣ ಸಾಹಿತ್ಯ ಸಂಬಂಧವೀಗ ಹಿಂದಿನಂತಿಲ್ಲ. ಈ ಕೊಂಡಿಯನ್ನು ಮತ್ತೆ ಬಲಪಡಿಸಬೇಕು. ಸಾಹಿತ್ಯಕ್ಕೂ ಸಂಸ್ಕೃತಿಗೂ ಸಂಬಂಧವಿದೆ. ಅದು ಸುಧಾರಿಸದಿದ್ದರೆ ಸಾರ್ವಜನಿಕ ಜೀವನ ಅಸಾಧ್ಯ. ಇದಕ್ಕೆ ಭಾಷೆಯ ಅಗತ್ಯವಿದೆ. ಓದಬೇಕು. ಬರೆಯಬೇಕು. ಓದಿ ಬರೆವ ಆಸಕ್ತರು ಬಹುಭಾಷಾಸಕ್ತರಿದ್ದರಂತೂ ಒಳ್ಳೇದೇ ಆಯಿತು.” ಎಂದರು.

    ಡಾ. ಬನಾರಿ ದಂಪತಿಯನ್ನು ಕಾಲೇಜು ಆಡಳಿತ ಮಂಡಳಿಯ ವತಿಯಿಂದ ಫಲ ಕಾಣಿಕೆ ಸಹಿತ ಗೌರವಿಸಿದರು. ಆರು ದಶಕಗಳ ಹಿಂದೆ ಸ್ಥಾಪನೆಗೊಂಡ ಕಾಲೇಜು ಸ್ವಾಯತ್ತ ಮಹಾವಿದ್ಯಾಲಯದ ಮಟ್ಟಕ್ಕೆ ವೃದ್ಧಿಯಾಗಿ ಎಂಬತ್ತು ಮೀರಿ ಸಂಸ್ಥೆಗಳನ್ನು ನಡೆಸುತ್ತ ವಿದ್ಯಾವಂತರನ್ನು ಸಮಾಜಕ್ಕೆ ಕೊಡುತ್ತಿರುವ ಕಾಯಕದ ಬಗ್ಗೆ ಸಂಚಾಲಕರಾದ ಮುರಳಿಕೃಷ್ಣ ಕೆ. ಎನ್ ನಿವೇದಿಸಿಕೊಂಡರು.

    ಭಾವ ಜಗತ್ತಿನಲ್ಲಿ ಕೊಡು ಕೊಳ್ಳುವ ಸಂಸ್ಕೃತಿ
    ‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು’ ಎಂಬ ಅಡಿಗರ ಕವಿತೆಯನ್ನು ಲಘು ಸಂಗೀತ ಧಾಟಿಯಲ್ಲಿ ಹಾಡಿದ ವಿದ್ಯಾರ್ಥಿಗಳು ಆ ಮೂಲಕ ಎಲ್ಲಿಗೋ ಒಯ್ಯಲು ಹೊರಟ ಕಾಲದ ಬೀಸನ್ನು ಸರಿಯಾದ ದಿಕ್ಕಿನೆಡೆಗೆ ಒಯ್ಯುವ ಅಗತ್ಯವನ್ನು ಸೂಚಿಸುವಂತೆ ಕಂಡರು. ಒಂಬತ್ತು ಮಂದಿ ವಿದ್ಯಾರ್ಥಿಗಳು ಐದು ಭಾಷೆಗಳಲ್ಲಿ ರಚಿಸಿದ ಕವನಗಳನ್ನು ಪ್ರಸ್ತುತಪಡಿಸಿದರು. ಪ್ರಸ್ತುತಗೊಂಡ ಕವಿತೆಗಳಲ್ಲಿನ ಕವಿ ಮನಸ್ಸುಗಳನ್ನು ಆಪ್ತವಾಗಿ ಗಮನಿನಿಸುತ್ತಿದ್ದೆ. ‘ಖಾಮೋಶೀ’ ಎಂಬ ಹಿಂದಿ ಕವಿತೆಯು ಮೌನದೊಳಗಿನ ನಿಗೂಢತೆಯು ಭಯ, ಸಂದೇಹ ಮುಂತಾದ ಭಾವಗಳನ್ನು ಪ್ರತಿನಿಧಿಸುವ ಬಗೆಯನ್ನು ನಾಜೂಕಾಗಿ (ಸ.ನಾ. ಬೇಗಂ) ಕಂಡರಿಸಿತು. ‘ಭ್ರೂಣದ ಕೂಗು’ ಬಹಳಷ್ಟು ಕಾಡಿದ ಕವಿತೆಯಾಗಿತ್ತು. (ಕು.ಚೈತನ್ಯ) ಭೂಮಿಗೆ ಕಾಲಿಡಲು ಭಯ ಪಡುವ ಕೂಸು ಗರ್ಭದೊಳಗಿದ್ದುಕೊಂಡೇ ಆತಂಕಪಡುವ ವರ್ಣನೆ. ತನ್ನದು ಕರಿ ಮೈ ಆಗಿದ್ದರೆ ಹೊರಗಿರುವ ದುರ್ಜನರ ಮನಸ್ಸೆಂಬ ಕಾರ್ಮೋಡವೇ ಭೀಕರವಲ್ಲವೆ ಎಂಬ ಪ್ರಶ್ನೆ ಹೆಣ್ಣಿನ ಒಳಗುದಿಗೆ ಸಾಕ್ಷಿಯಾಗುವುದರೊಂದಿಗೆ ವಿಚಿತ್ರ ಪರಿಣಾಮವನ್ನು ಉಂಟು ಮಾಡಿತು. ನಮಗೆ ತಿಳಿದಿರುವಂತೆ ಕವಿತೆಗಳಿಗೆ ವಸ್ತು ವಿಷಯಗಳು ಇವೆಯಾದರೂ ಕಿರಿಯರ ಕವಿ ಮನಸ್ಸು ಒಂಟಿತನ, ಆತಂಕ, ನೋವು, ಹತಾಶೆಗಳನ್ನೇ ಪ್ರತಿನಿಧಿಸುತ್ತಿರುವುದು ಗಮನಾರ್ಹ. ದೌರ್ಜನ್ಯವೇ ತುಂಬಿದ ಪರಿಸರದಲ್ಲಿ ನನಸಾಗದ ಕನಸುಗಳ ಬಗ್ಗೆ ವ್ಯಥೆಪಡುವ ‘ಮಾಸದ ನೆನಪು’ (ಅವನಿ ಕೆ.) ಬದುಕೇ ನಾಟಕವೆನಿಸುವಂತಾಗಿ ತಾನು ನಾಟಕದ ಪಾತ್ರವಾಗುವ ಭಯವನ್ನು ವ್ಯಕ್ತಪಡಿಸುವ ‘ಅವರ ಕವಿತೆ’ ಮೂಲಕ ಕಾಲಚಕ್ರ ಒಡ್ಡುವ ಸಾಮಾಜಿಕ ಕ್ರೌರ್ಯವನ್ನು ಪ್ರಶ್ನಿಸುವ ಶ್ರೀರಕ್ಷರ ಕವಿತೆ, ಪ್ರಕೃತಿ ಸಂದರ್ಯದ ಬಗೆಗೆ ಕುತೂಹಲದ ನೋಟ ಬೀರುವ ಪ್ರಿಯಾ ಎಂಬ ಕವಯಿತ್ರಿ, ಗೆಳೆತನ ನೆನಪಾಗಿ ಕಾಡಿದ್ದರ ಭಾವ ವಿಲಾಸ ಆಗುವ ಕವಯತ್ರಿ ಅನನ್ಯ ‘ಭೂಮಿ ಯಾಕೆ ಅಳುತ್ತಿದೆ’ ಎಂಬುದನ್ನು ನಿರೂಪಿಸಿದ ಮನ್ವಿತ ಮತ್ತು ಮಾತು ಹೇಗಿರಬೇಕು, ಅದೆಂತು ವ್ಯಕ್ತಿತ್ವದ ಪ್ರತಿನಿಧಿಯಾಗುತ್ತದೆಂಬುದನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಿದ ಕವಿತೆಗಳು ಆಕರ್ಷಿಸಿದುವು.

    ಕಾರ್ಯಕ್ರಮದ ಹುರುಳೆನಿಸಿದ ಈ ಸನ್ನಿವೇಶಕ್ಕೆ ಪರೀಕ್ಷಾಂಗ ನಿರ್ದೇಶಕರಾದ ಡಾ. ಶ್ರೀಧರ ಹೆಚ್. ಜಿ ಅಧ್ಯಕ್ಷರ ಮಾತುಗಳ ಮೂಲಕ ಶುಭವನ್ನು ಹಾರೈಸಿದರು. ಕಲ್ಪನೆ ಮತ್ತು ಭಾವನೆಗಳ ಜಗತ್ತಿನಲ್ಲಿ ವಿಹಾರ ನಡೆಸುವ ನಾವು ಕೆಲವೊಮ್ಮೆ ನಮ್ಮನ್ನೇ ಮರೆಯುತ್ತಿದ್ದೆವೇನೊ. “ಈ ಕವಿತೆ ನಿನಗೆ ಅನ್ನ ಕೊಡುತ್ತದೆಯ?” ಎಂದು ಎಚ್ಚರಿಸುತ್ತಿದ್ದ ಹಿರಿಯರೊಬ್ಬರ ಪ್ರಶ್ನೆ ನನ್ನೊಳಗೆ ಈಗಲೂ ಅನುರಣಿಸುತ್ತದೆ. ಕವಿತೆಗಳನ್ನು ಓದುವಾಗ ಕೇಳುಗರು ಸ್ಪಂದಿಸದಿದ್ದರೆ ಏನಾಗುತ್ತದೆ? ಓದು ಮತ್ತು ಆಸ್ವಾದನೆಗೆ ಅನುವು ಮಾಡಿಕೊಡುವುದು ಇಂಥ ಗೋಷ್ಠಿಗಳ ಧರ್ಮ.

    ಡಾ ಬನಾರಿಯವರ ಕಾವ್ಯಧಾರೆ
    ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಡಾ. ಶ್ರೀಕೃಷ್ಣ ಭಟ್ ಡಾ. ಪ್ರಮೀಳಾ ಮಾಧವರ ಅವಲೋಕನ ಕ್ರಮದ ಬಗ್ಗೆ ಮಾತನಾಡಿದರು. ಈ ಮಟ್ಟಿಗೆ ಅವರು ಬರೆದ ಮುನ್ನುಡಿಯೇ ಸಾಕ್ಷ್ಯಾಧಾರ. ಕವನಗಳ ರಾಶಿಗೆ ಸಹೃದಯರ ವಿಮರ್ಶೆ ಅಥವಾ ದರ್ಶನ ವಿಮರ್ಶೆಯನ್ನು ಮುಂದೊಡ್ಡದ ಡಾ. ಪ್ರಮೀಳಾ ಅವರ ಸುದೀರ್ಘ ಬರೆಹ ಎಂಥವರನ್ನೂ ಓದಿಸಿಕೊಂಡು ಹೋಗುತ್ತದೆ. ಹೀಗೊಂದು ಕೃತಿಯನ್ನು ನಿಮ್ಮ ಕಾವ್ಯ ಸೃಷ್ಟಿಯ ಮೇಲೆ ಬರೆದೆ ಎಂದು ಅವರೊಂದು ದಿನ ಬನಾರಿ ಅವರಿಗೆ ಹೇಳಿ ಅದನ್ನು ನಾನೇ ಮುದ್ರಿಸಿ ಅರ್ಪಿಸುತ್ತೇನೆ ಎಂದೂ ಸೇರಿಸಿದ್ದರು. ಒಂದೆರಡು ವಾರದೊಳಗೆ ಇಷ್ಟೆಲ್ಲ ಬರೆಯುವುದೇ? ಇದರ ಅಗತ್ಯ ಇದೆಯೇ? ಎಂಬುದು ಅಪ್ರಸ್ತುತ. ಯಾಕೆಂದರೆ ಇದು ಕವಿಗಳಿಗೆ ಸಲ್ಲಿಸಬೇಕಾದ ನ್ಯಾಯ. ಕವಿ ತನ್ನ ಬೇರೆ ಬೇರೆ ವಯಸ್ಸಿನಲ್ಲಿ ಅನೇಕ ಸಂಕಲನಗಳನ್ನು ಹೊರತಂದರೆ ಆ ಒಟ್ಟು ಕೊಡುಗೆಯ ಮೇಲೆ ಅವಲೋಕನ ನಡೆಸುವುದೂ ಸ್ವಾಗತಾರ್ಹವೇ. ಅನಿರುದ್ಧ ಪ್ರಕಾಶನ ಕೆಲವೇ ದಿನಗಳೊಳಗೆ ಇದನ್ನು ಅಚ್ಚುಕಟ್ಟಾಗಿ ಮುದ್ರಿಸಿ ಕೆಲವು ಪ್ರತಿಗಳನ್ನು ಕೊಟ್ಟಿದೆ.

    ಅಲ್ಲಲ್ಲಿ ಕವಿತೆಗಳ ಸಾಲುಗಳನ್ನು ಉದಾಹರಿಸುತ್ತ ಡಾ. ಪ್ರಮೀಳ ಅವರು ಅಚ್ಚರಿ ಹುಟ್ಟಿಸಿದ್ದಾರೆ. ತನ್ನ ಕೆಲಸದ ಬಗ್ಗೆ ತೃಪ್ತಿಯ ನುಡಿಗಳನ್ನಾಡಿ ಆಕೆ, “ಈ ಕವಿಯ ಭಾವ, ಸ್ವಭಾವಗಳು ಬಹಳ ಕುತೂಹಲಕಾರಿ ಎನ್ನಬೇಕು. ಒಮ್ಮೊಮ್ಮೆ ಓದಿದಾಗಲೂ ಹೊಸ ಅರ್ಥಗಳು ಹೊಮ್ಮುತ್ತವೆ. ಇದು ಮೌಲ್ಯಾಧಾರಿತ ಬದುಕಿನಲ್ಲಿ ನಂಬಿಕೆಯುಳ್ಳ, ಆರೋಗ್ಯಪೂರ್ಣ ಸಮಾಜದ ಕಾಳಜಿಯುಳ್ಳ ಸಾಹಿತಿಗಳ ಜೀವನ ಧ್ಯೇಯವೇ ಆಗಿದೆ” ಎಂದರು.

    ಬನಾರಿಯವರ ಇಂಥ ರಚನೆಗಳನ್ನು ಓದಿ ಸವಿದಾಗ ಲೇಖಕಿಯ ಮಾತಿನ ತಥ್ಯ ವೇದ್ಯವಾಗುತ್ತದೆ.

    ಕವಿತೆ : ಇರುವೆ
    ಉಟ್ಟ ಬಟ್ಟೆಯ ಮೇಲೆ / ಹರಿದಾಡುತ್ತಿತ್ತು
    ಪುಟ್ಟ ಇರುವೆಯೊಂದು/
    ದೇವರ ಕೋಣೆಯಲ್ಲಿ ಮಣೆಯ ಮೇಲೆ/
    ಕುಳಿತುಕೊಳ್ಳುವುದಕ್ಕೆ ಹೊರಟಾಗ / ಕಂಡುಬಂದಿತ್ತು /
    ದೃಷ್ಟಿಗೆ ದೃಷ್ಟಿ ಇಟ್ಟು/ ಇರುವೆಯನ್ನು ನೋಡಿದಾಗ /
    ಇರುವೆಯೂ ನನ್ನನ್ನೇ ನೋಡಿದಂತೆ / ಭಾಸವಾಯಿತು/
    ಒಂದು ಕ್ಷಣ ಇರವೆ ಮಾಯವಾಯಿತು /
    ಕೈಯಿಂದ ಮುಟ್ಟಿ ದೂರ ಮಾಡೋಣ ಎಂದರೆ /ಧೈರ್ಯ ಬರಲಿಲ್ಲ/ ಕೈ ಆಯುಧವಾಗಿ ಹೋದರೆ ಎಂದು ಹೆದರಿ/ ಮೃದುವಾಗಿ ಸಣ್ಣಗೆ / ಬಾಯಿಯಿಂದ ಗಾಳಿ ಹಾಕುತ್ತಾ ಹೋದೆ/
    ಇರುವೆ ಮೆಲ್ಲನೆ ಮೆಲ್ಲನೆ/
    ಪುಟಪುಟನೆ ನಡೆದು
    ಸಂಸಾರ ಸಾಗರದಲ್ಲಿ / ಮುನ್ನಡೆಯುವ ಹಾಗೆ
    ಲೀಲಾಜಾಲವಾಗಿ ಬಟ್ಟೆಯನ್ನು ಬಿಟ್ಟು
    ಹೊರಗಿಳಿದು ಇದ್ದಕ್ಕೆ ಇದ್ದಂತೆ ಮಾಯವಾಯಿತು
    ದೇವರ ಹಾಗೆ .

    ಹೊರಗೆ ತಿಳಿಹಾಸ್ಯ, ಒಳಗೆ ಅಧ್ಯಾತ್ಮ. ವಯೋವೃದ್ಧ, ಪ್ರಬುದ್ಧ ಕವಿಯಿಂದ ಮಾತ್ರ ಹೀಗೆ ಲೀಲಾಜಾಲವಾಗಿ, ಸರಳವಾಗಿ ಸಹಜವಾಗಿ ಬರೆಯುವುದಕ್ಕೆ ಸಾಧ್ಯ. ಇದಕ್ಕೆ ತ್ರಿಕಾಲ ಜ್ಞಾನ, ಒಂದು ಬಗೆಯ ಅಂತರ್ ಶಿಸ್ತಿನ ಅಧ್ಯಯನ ಬೇಕು. ಇರುವೆ ದುರ್ಬಲವಾಗಿ ಕಂಡರೂ ಸ್ವತಂತ್ರ, ನಿರ್ಭೀತ ಜೀವಿ. ಮನುಷ್ಯನಿಗೆ ಮರೆವು, ನಿರ್ಲಕ್ಷ್ಯ ರೂಢಿ. ಹಾಗಾಗಿ ಅವನು ಇರುವೆಯಿಂದ ಪಾಠ ಕಲಿಯುವ ಪ್ರಸಂಗ ಬರುತ್ತದೆ. ಸೂಕ್ಷ್ಮವಾಗಿ ಕಾಣಲಾಗುವಂತೆ ದೃಷ್ಟಿ ವಿಕ್ಷೇಪ ನಡೆಸ ಬೇಕಾದ ಜವಾಬ್ದಾರಿ ಅಗತ್ಯವಾಗುತ್ತದೆ. ಸೂಕ್ಷ್ಮಾತಿ ಸೂಕ್ಷ್ಮ ಜೀವಿಯೊಂದಿಗೆ ದೃಷ್ಟಿ ಮಿಲನ ಕಷ್ಟ. ಇರುವೆಯನ್ನು ಮುಟ್ಟಿ ದೂರ ಸರಿಸಲು ಹೊರಡುವುದು ಆಕ್ರಮಣಕಾರಿ ಧೋರಣೆಯೆಂದು ಭಾವಿಸಿ ತನ್ನನ್ನು ತಿದ್ದಿಕೊಳ್ಳುವ ಕವಿ ಬಾಯಿಯಿಂದ ಲಘುವಾಗಿ ಊದಿ ಅದನ್ನು ಅಪಾಯದ ನೆಲೆಯಿಂದ ರಕ್ಷಿಸುವ ರೀತಿ ಸ್ವಾರಸ್ಯಕರ ಘಟನೆ. ವಾಸ್ತವವಾಗಿ ಇರುವೆಗೆಯಾರ ನೆರವೂ ಬೇಡ. ಆದರೆ ಸಂಕಲ್ಪ ಹಿಂಸೆಗೂ ಮನಸ್ಸು ಮಾಡಬಾರದ ನಡತೆಯನ್ನು ಇಲ್ಲಿ ಕವಿ ಇರುವೆಯಿಂದ ಕಲಿಯುತ್ತಾನೆ.

    ಇಲ್ಲಿ ಬಟ್ಟೆಗೆ ಎರಡು ಅರ್ಥ ಇದೆ. ಸಂಸಾರ ಸಾಗರದಲ್ಲಿ ಈಜುವ ಇರುವೆಯ ಶಕ್ತಿಯನ್ನು ಗೌರವಿಸುವ ರೀತಿ ಮಾರ್ಮಿಕವಾಗಿದೆ. ಬಟ್ಟೆಯನ್ನು ಬಿಟ್ಡು ಮಾಯವಾಗುವ ಮಾನವನ ಅರ್ಪಣಾ ಭಾವದಲ್ಲಿ ಭಗವದ್ಗೀತೆಯ ತತ್ವ ಪ್ರಣಾಳಿ ಇದೆ. ದೇವರ ಹಾಗೆ ತನ್ನಷ್ಟಕ್ಕೆ ಮಾಯವಾದ ಆ ಜೀವಿ ಕೊಡುವ ಸಂದೇಶ ಗಹನವಿದೆ.

    ಹೀಗೆ ಸಾರ್ಥಕವೆನಿಸುವ ನೂರಾರು ನೋಟಗಳು ಬನಾರಿ ಅವರ ಕವಿತೆಗಳ ರಾಶಿಯಿಂದ ಸಿಗುತ್ತವೆ. ಭರವಸೆ ಹುಟ್ಟಿಸುವ, ಸಂತೋಷವನ್ನು ಹಂಚುವ, ತತ್ವನಿಷ್ಠವೂ ಆದ ಅಧ್ಯಯನ, ಆಲೋಚನೆಗಳುಳ್ಳ ಕವಿತೆಗಳನ್ನು ರಚಿಸುವ ಅಗತ್ಯ ಇದೆ ಎಂದು ನಾವಿಲ್ಲಿ ತಿಳಿಯಬೇಕು. ತನ್ನ ಭಾಷಣದಲ್ಲಿ ಬನಾರಿಯವರು ಕವಿತಾಶಕ್ತಿಯ ಬಗ್ಗೆ ದಿಕ್ಸೂಚಿಯಾಗುವ ಕೆಲವು ಮಾತುಗಳನ್ನು ಹೇಳಿದರು.

    ಕನ್ನಡ ವಿಭಾಗದ ಮುಖ್ಯಸ್ಥರಾದ ಮನಮೋಹನ ಮತ್ತಿತರರೊಂದಿಗೆ ನಮ್ಮವರೇ ಆದ ಡಾ. ಕಿಶೋರ್ ಕುಮಾರ್ ರೈ ಶೇಣಿ, ಡಾ. ವರದರಾಜ ಚಂದ್ರಗಿರಿ, ಕೊಳ್ಚಪ್ಪೆ ಗೋವಿಂದ ಭಟ್, ಚಂದ್ರಶೇಖರ ಯೇತಡ್ಕ ದಂಪತಿ, ಡಾ. ಸುಭಾಷ್ ಪಟ್ಟಾಜೆ, ಬನಾರಿ ಸಹೋದರರೇ ಮುಂತಾದವರ ಮಿಲನವೂ ಮರೆಯಲಾಗದ ನೆನಪಾಗಿ ಉಳಿದಿದೆ.

    ಪಿ.ಎನ್. ಮೂಡಿತ್ತಾಯ, ಜಿಲ್ಲಾ ಕನ್ನಡ ಲೇಖಕರ ಸಂಘ,
    ಕಾಸರಗೋಡು

    Share. Facebook Twitter Pinterest LinkedIn Tumblr WhatsApp Email
    Previous Articleಡಾ. ಸುರೇಶ ನೆಗಳಗುಳಿ ಇವರಿಗೆ ‘ಜೀವಮಾನದ ಸಾಧನೆ ರಾಷ್ಟ್ರೀಯ ಪ್ರಶಸ್ತಿ’
    Next Article ತುಳುಕೂಟ (ರಿ) ಕುಡ್ಲ ವತಿಯಿಂದ ಮರೋಳಿ ಬಿ. ದಾಮೋದರ ನಿಸರ್ಗ ಇವರಿಗೆ ನುಡಿನಮನ
    roovari

    Comments are closed.

    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.