“ಮಾತಾ” ಇದು ಕೇವಲ ನಾಟಕವಲ್ಲ ಸಮಾಜದ ಅವಮಾನಕ್ಕೆ ಬೆಂದು ಬಳಲಿದ ಆಂತರಾತ್ಮದ ಕಿಡಿ ಜಗತ್ತನ್ನೇ ತನ್ನ ಸಾಧನೆಯ ಮೂಲಕ ಬೆಳಗಿದ ಪ್ರಜ್ವಲತೆಯ ಛಲದ ದಿವ್ಯ ಬೆಳಕಿನ ಸತ್ಯ ಕಥೆ…
“ಮಾತಾ” ಇಡೀ ನಾಟಕದ ಅವಧಿ 1 ಗಂಟೆ 20 ನಿಮಿಷಗಳು. ನಾಟಕ ಪ್ರಾರಂಭದಿಂದ ಕೊನೆಯವರೆಗೂ ನಿಮ್ಮತನ ಮರೆತು ಮಾತೆಯ ಸಾಧನೆಯ ಹೆಜ್ಜೆ ಗುರುತುಗಳ ನಡೆಯಲ್ಲಿ ನೀವು ನಿಂತು ನೋಡುತ್ತಿರುವಿರಿ ಎಂಬ ಅನುಭವ ಮೂಡುತ್ತೆ… ಪಾತ್ರ ಪರಕಾಯ ಪ್ರವೇಶ ಆದ ಗಳಿಗೆಯಿಂದ ಅದೆಷ್ಟು ಬಾರಿ ನಗುತ್ತೇವೆ ಅದಕ್ಕಿಂತ ಹೆಚ್ಚು ಬಾರಿ ನಮ್ಮ ಕಣ್ಣುಗಳು ತೇವಗೊಳ್ಳುತ್ತವೆ. ಅಷ್ಟೊಂದು ವಾಸ್ತವ ಸತ್ಯ ಚಿತ್ರ ನಮ್ಮನ್ನು ಇಡೀ ನಾಟಕದಲ್ಲಿ ಹಿಡಿದಿಟ್ಟುಕೊಳ್ಳುತ್ತೆ.
ಒಬ್ಬ ಪದ್ಮಶ್ರೀ ಪುರಸ್ಕೃತೆಯ ಜೀವನ ಚರಿತ್ರೆಯನ್ನು ಒಂದಿಡೀ ನಾಟಕದಲ್ಲಿ ಎಲ್ಲಿಯೂ ಮೂಲ ಆಶಯ ಮತ್ತು ಸತ್ಯಕ್ಕೆ ಚ್ಯುತಿ ಬಾರದಂತೆ ಕಟ್ಟಿಕೊಡುವುದು ಸುಲಭದ ಮಾತಲ್ಲ. ಅದರಲ್ಲೂ ಇಡೀ ಸಮಾಜವೇ ಗೇಲಿಯಲ್ಲಿ ನೋಡುವ ಪರಶಿವಪಾರ್ವತಿಯ ಪರಮ ಅವತಾರಿ ಅರ್ಧನಾರೇಶ್ವರಿಯ ಸ್ವರೂಪಿ ತೃತೀಯ ಲಿಂಗಿ ಮಾತೆಯ ಬಗ್ಗೆ ಒಂದು ನಾಟಕ ಅಥವಾ ಸಿನಿಮಾ ಮಾಡುವುದು ಸವಾಲೇ ಸರಿ.. ಕೇವಲ ವ್ಯಕ್ತಿಯ ಅವಮಾನ ಅಷ್ಟೇ ಅಲ್ಲ ಹೊಟ್ಟೆಯ ಅವಮಾನವನ್ನು ಸಹಿಸಿಕೊಂಡ ಜೀವದ ಅಂತರಂಗಕ್ಕೆ ಕರುಣೇ ತೋರದ ಇಡೀ ಸಮಾಜವೇ ತಪ್ಪಿತಸ್ಥ ಸ್ಥಾನದಲ್ಲಿ ನಿಂತರೂ ಕರುಣೆ ಇಲ್ಲದ ಕಟ್ಟುಪಾಡುಗಳ ದಾಟಿ ಕೆಲವರು ಮಾನವೀಯತೆ ತೋರುತ್ತಾರೆ, ಹಲವರು ಬದುಕಿನ ದಾರಿ ತೋರಿಸುತ್ತಾರೆ ಇಂತಹ ಸಹೃದಯಿಗಳು ಮಾತ್ರ ಬೆರಳೆಣಿಕೆಯಷ್ಟು…
ಅನ್ನಕಿಲ್ಲದ ಜಾತಿ ನಮ್ಮಲ್ಲಿ ತೋರಿಕೆಯ ತಟ್ಟೆಗಿದೆ. ಮನುಷತ್ವದ ಧರ್ಮ ಆಚರಣೆಯಲ್ಲಿ ಉಳಿದಿದೆ. ಇಂತಹ ನೂರಾರು ನೈಜ ಬದುಕಿನ ಭಾವನೆಗಳ ಸಂಭಾಷಣೆ ಇಡೀ ನಾಟಕದಲ್ಲಿದೆ. ಮುಖ್ಯವಾಗಿ ಇದು ನಾಟಕವೇ ಆದರೂ ಅದನ್ನು ದಾಟಿ ನಮ್ಮಲ್ಲಿ ಬಹುದೊಡ್ಡ ಜೀವಂತ ರೂಪಕವಾಗಿ ಕೊನೆಗೊಳ್ಳುತ್ತೆ. ಇಡೀ ನಾಟಕವನ್ನು ಸೊಗಸಾಗಿ ಇದ್ದುದಿದ್ದಂಗೆ ಸಮಾಜ ಪರಿವರ್ತನೆ ಆಗಲಿ ಎಂಬ ಧೇಯವಾಕ್ಯ ಹೊತ್ತು ನಿರ್ದೇಶನ ಮಾಡಿರುವ ಬೇಲೂರು ರಘುನಂದನ್ ರವರ ದೃಶ್ಯ ಸಂಯೋಜನೆ ಒಂದಿಡೀ ಆತ್ಮಚರಿತ್ರೆಯನ್ನು ಒಬ್ಬೇ ಒಬ್ಬ ಮುಖ್ಯ ಪಾತ್ರಧಾರಿಯ ಮುಖೇನ ಪ್ರಕಟಗೊಳಿಸುತ್ತ ಹೋಗುವುದು ಸುಲಭದ ಮಾತಲ್ಲ. ಇದರಲ್ಲಿ ಬೇಲೂರು ರಘುನಂದನ್ ಗೆದ್ದಿದ್ದಾರೆ
ನಾಟಕದ ಪ್ರಾರಂಭದಿಂದ ಸುಖಾಂತ್ಯದವರೆಗೂ ಇಡೀ ನಾಟಕಕ್ಕೆ ಮಾತಾ ಪಾತ್ರಕ್ಕೆ ಜೀವತುಂಬಿ, ಅಲ್ಲ ಆ ಪಾತ್ರವೇ ಇವರಲ್ಲಿ ಅನಾವರಣಗೊಂಡಿದೆಯೋ ಗೊತ್ತಿಲ್ಲ, ಅಷ್ಟೊಂದು ಮನೋಜ್ಞವಾಗಿ ಇಡೀ ನಾಟಕದಲ್ಲಿ ಬರುವ ಮೂವತ್ತಕ್ಕೂ ಹೆಚ್ಚು ಪಾತ್ರಗಳ ಪರಿಚಯ ಮಾಡಿಕೊಡುತ್ತ, ಒಬ್ಬ ನಿಂದಕಿಯ ನೊಂದ ಜೀವದ ಭಾವ ಲಹರಿಯ ಧ್ವನಿ ಏರಿಳಿತದಲ್ಲಿ ಸ್ವಲ್ಪವೂ ಲೋಪ ಇಲ್ಲದಂತೆ ಶ್ರೇಷ್ಠ ಸಾಧನ ಮಾತೆಯ ಪಾತ್ರದಲ್ಲಿ ನಟಿಸಿರುವ ಅರುಣ್ ಕುಮಾರ್ ನಿಜಕ್ಕೂ ಬಹುದೊಡ್ಡ ಅದ್ಬುತ ಕಲಾವಿದನಾಗುವ ಎಲ್ಲಾ ಲಕ್ಷಣಗಳಿವೆ…
ಮಾತಾ ನಾಟಕ ನೋಡುತ್ತ ನೋಡುತ್ತ ಇವರೇ ಸಾಕ್ಷಾತ್ ಮಾತೆ ಜೋಗತಿ ಮಂಜಮ್ಮ ಎಂಬ ಅಂತರಂಗ ಪ್ರತಿಯೊಬ್ಬ ನೋಡುಗ ಪ್ರಭುಗಳಲ್ಲಿ ಮೂಡುತ್ತೆ. ಕೊನೆಯಲ್ಲಿ ಅ ತಾಯಿಯ ಪಾದ ಮುಟ್ಟಿ ನಮಸ್ಕರಿಬೇಕು ಅನ್ನುವ ಭಾವನೆ ಕಂಡಿತಾ ನಾಟಕ ನೋಡಿದ ಪ್ರತಿಯೊಬ್ಬರಲ್ಲೂ ಮೂಡುತ್ತೆ. ಅಷ್ಟೊಂದು ಸೊಗಸಾಗಿ ನೈಜತೆಯಲ್ಲಿ ಮಾತಾ ನಾಟಕ ಮೂಡಿ ಬಂದಿದೆ.. ಇದಕ್ಕೆ ಹಿನ್ನೆಲೆ ಸಂಗೀತ ಮತ್ತು ಹಾಡುಗಳನ್ನು ಹಾಡಿರುವ ಶ್ರೀಮತಿ ಸವಿತಕ್ಕ ಮತ್ತು ರಾಮವ್ವ ಜೋಗತಿ ಹಾಗೂ ನಾಟಕಕ್ಕೆ ಬಳಸಿಕೊಂಡ ಸಾಹಿತ್ಯ ಸಾಲುಗಳು ಅದ್ಬುತ. ಬೆಳಕು ಮತ್ತು ಪ್ರಸಾದನ ಮಾಡಿರುವ ರವಿಶಂಕರ್ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಂಗ ಸಜ್ಜಿಕೆ ಕಟ್ಟಿದ ಪ್ರತಿ ಕಲಾವಿದರನ್ನು ಇಲ್ಲಿ ನೆನೆಯದಿದ್ದರೆ ತಪ್ಪಾದಿತು….
ತಮ್ಮ ಜೀವನ ಚರಿತ್ರೆಯನ್ನು ಏಕವ್ಯಕ್ತಿ ಪಾತ್ರಧಾರಿ ಮುಖೇನ ಮಾಡಲು ಅನುಮತಿಕೊಟ್ಟು ಅದಕ್ಕೆ ಬೇಕಾದ ಕಟೋರ ಸತ್ಯತೆಯನ್ನು ಇದ್ದುದಿದ್ದಂಗೆ ದೃಶ್ಯರೂಪಕಕ್ಕೆ ತರಲು ಅನುವು ಮಾಡಿಕೊಟ್ಟು ಮಾತಾ ನಾಟಕ ನೋಡಿದ ಪ್ರತಿಯೊಬ್ಬರಿಗೂ ಜೀವನದಲ್ಲಿ ಗೆಲ್ಲಬೇಕು, ಭೂಮಿ ಮೇಲೆ ಇದ್ದು ಈ ಜೀವನವನ್ನು ಜಯಿಸಬೇಕು ಎಂಬ ಛಲ ತುಂಬುವ ಸಾವಿರಾರು ನೋವನ್ನು ದಾಟಿ, ಜಗ ಮಗಳಾದ ಮಾತೆ ಮಂಜಮ್ಮ ಜೋಗತಿ ನಿಜಕ್ಕೂ ನಮ್ಮ ನಡುವಿನ ಶ್ರೇಷ್ಠ ಆದರ್ಶ ಸಾಧಕಿ…. ಅಮ್ಮನವರ ಈ ಆತ್ಮಚರಿತ್ರೆ ನಾಟಕ ಸಾವಿರಾರು ಯುವ ಸಮೂಹಕ್ಕೆ ಸ್ಪೂರ್ತಿ. ಸಮಾನತೆ ಜಾತ್ಯತೀತ ಸಾಮಾಜಿಕ ಬದುಕಿಗೆ ಮುಂದೋಕ್ತಿ ಮಾನವೀಯತೆ ಮಹಾ ಜ್ಯೋತಿಯಂತೆ ಈ ನಾಟಕ ನಮ್ಮನ್ನು ಆವರಿಸಿಕೊಳ್ಳುತ್ತೆ
ನಿನ್ನೆ ಮಾತೆ ಮಂಜಮ್ಮ ಜೋಗತಿಯ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಪ್ರಜಾವಾಣಿ ಪತ್ರಿಕೆಯ 75ನೇ ವರ್ಷಾಚರಣೆಯ ಸಂಭ್ರಮಾಚರಣೆಯ ಸಾಕ್ಷಿಯಾಗಿ ಬೇಲೂರು ರಘುನಂದನ್ ನಿರ್ದೇಶನದ “ಮಾತಾ” ನಾಟಕ ಮರಿಯಮ್ಮನಹಳ್ಳಿಯ ದುರ್ಗಾದಾಸ್ ಕಲಾ ಮಂದಿರದಲ್ಲಿ ನೋಡುವ ಭಾಗ್ಯ ನಮಗೆ ಸಿಕ್ಕಿತು..
ಈ ನಾಟಕದ ಇನ್ನೂ ಹೆಚ್ಚಿನ ಪ್ರದರ್ಶನ ನಮ್ಮ ಭಾಗದಲ್ಲಿ ಆಗಬೇಕಿದೆ. ಯಾವ ಸೂಪರ್ ಹಿಟ್ ಸಿನಿಮಾಕ್ಕೂ ಕಡಿಮೆ ಇಲ್ಲ ಮಾತಾ ನಾಟಕ. ಈ ನಾಟಕವನ್ನು ವಾರ್ತಾ ಇಲಾಖೆ ಪ್ರತಿ ತಾಲೂಕಿನಲ್ಲೂ ಪ್ರದರ್ಶನಗೊಳ್ಳಲು ವ್ಯವಸ್ಥೆ ಮಾಡಬೇಕು.. ‘ಯಾರೂ ಕೀಳಲ್ಲ ಕೇಳ ಈ ಜಗದೊಳಗೆ’ ಎಂಬ ಸಂದೇಶ ಇಡೀ ರಾಜ್ಯ ದೇಶಕ್ಕೆ ಗೊತ್ತಾಗಬೇಕು. ಸೋತ ಕೈಗಳಿಗೆ ಗೆಲುವಿನ ಛಲ ಮೂಡಬೇಕು. ಒಟ್ಟಾರೆ ಮಾತಾ ನಾಟಕವು ವ್ಯವಸ್ಥೆಯ ಕನ್ನಡಿ ದಾಟಿ ಸಾಧನೆಯ ಮುನ್ನುಡಿ ಎಂದರೆ ತಪ್ಪಾಗಲಾರದು…
– ಕೆ. ನಾಗರಾಜ ಉಲವತ್ತಿ
ಶ್ರೀ ಕೆ. ನಾಗರಾಜ ಉಲವತ್ತಿ ಹಗರಿಬೊಮ್ಮನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ. ವೃತ್ತಿಯಲ್ಲಿ ಕೆ.ಕೆ.ಆರ್.ಟಿ.ಸಿ. ನಿಗಮದ ಸಂಡೂರು ಘಟಕದಲ್ಲಿ ತಾಂತ್ರಿಕ ಸಹಾಯಕನಾಗಿ ಕರ್ತವ್ಯ. ಹವ್ಯಾಸ ಬರವಣಿಗೆ.