Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಮರ್ಶೆ | ಡಾ. ಶ್ರೀಪಾದ ಶೆಟ್ಟರ ಆಲೋಚನಾ ವೇದಿಕೆಯ ‘ಸುಮನಶ್ರೀ ಪ್ರಶಸ್ತಿ’
    Article

    ವಿಮರ್ಶೆ | ಡಾ. ಶ್ರೀಪಾದ ಶೆಟ್ಟರ ಆಲೋಚನಾ ವೇದಿಕೆಯ ‘ಸುಮನಶ್ರೀ ಪ್ರಶಸ್ತಿ’

    July 18, 2024No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪ್ರಶಸ್ತಿ-ಪುರಸ್ಕಾರ-ಸಮ್ಮಾನ- ಈ ಮೂರರಲ್ಲಿ ವ್ಯತ್ಯಾಸವಿರುವುದು ಗೊತ್ತಿದ್ದವರಿಗಷ್ಟೇ ಗೊತ್ತು. ಇತ್ತೀಚಿನ ದಿನಗಳಲ್ಲಿ ಅವುಗಳೆಲ್ಲ ಒಂದೇ ಎಂದುಕೊಂಡವರೇ ಹೆಚ್ಚು. ಅವುಗಳಿಗೆ ಮಾನದಂಡದ ಮಾನವೇ ದಂಡವಾಗಿ ಪ್ರಶಸ್ತವಲ್ಲದವರು ಪ್ರಶಸ್ತರೆನಿಸುತಿದ್ದ ಬರ್ಬರವಾದ ಕಾಲಘಟ್ಟದಲ್ಲಿ ಡಾ. ಶ್ರೀಪಾದ ಶೆಟ್ಟರ ಆಲೋಚನಾ ವೇದಿಕೆಯ “ಸುಮನಶ್ರೀ ಪ್ರಶಸ್ತಿ”ಯು ಪ್ರತ್ಯೇಕವಾಗಿ -ವಿಶೇಷವಾಗಿ- ಅನನ್ಯವಾಗಿರುವ ಕುರಿತಂತೆ ತೆರೆದಿಡುವುದು ಸಕಾಲಿಕವೇ ಹೌದು. ಪ್ರಶಸ್ತಿಯ ಕುರಿತಂತೆ ಪರಾಮರ್ಶಿಸುವಾಗ ಮುಖ್ಯವಾಗಿ ಮೂರು ಸಂಗತಿಗಳನ್ನು ಗಮನಿಸಲೇಬೇಕು ಎಂಬುದು ನನ್ನ ಅಭಿಪ್ರಾಯ. ಒಂದು – ಪ್ರಶಸ್ತಿಯನ್ನು ಕೊಡುವವರು ಯಾರು ? ಇನ್ನೊಂದು ಪ್ರಶಸ್ತಿಯನ್ನು ಪಡೆಯುವವರು ಯಾರು ? ಮತ್ತೊಂದು – ಪ್ರಶಸ್ತಿಯನ್ನು ಕೊಡುವಾಗ ಇರುವವರು ಯಾರು?- ಈ ಅಂಶಗಳನ್ನು ಗಮನಿಸಿದಲ್ಲಿ ಆ ಪ್ರಶಸ್ತಿಯ ಘನತೆ ಏನು ಎಂಬುದು ಸ್ವಯಂವೇದ್ಯವಾಗುತ್ತದೆ.

    ಉತ್ತರ ಕನ್ನಡ ಜಿಲ್ಲೆಯ ಬಹುಮುಖಿ ಅಭಿಜಾತ ಪ್ರತಿಭೆಯಾದ ಡಾ. ಶ್ರೀಪಾದ ಶೆಟ್ಟಿಯವರು ಜಿಲ್ಲೆಯನ್ನು ಮೀರಿ ಬೆಳೆದು ನಾಡಿನ ಆಸ್ತಿಯಾಗಿದ್ದವರು. ಔಪಚಾರಿಕವಾಗಿ ಹಾಗೂ ಅನೌಪಚಾರಿಕವಾಗಿ ಅವರ ವಿದ್ಯಾರ್ಥಿಯಾದವರೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ದೇಶ-ವಿದೇಶಗಳಲ್ಲಿ ಉನ್ನತವಾದ ಸ್ಥಾನಮಾನಗಳಲ್ಲಿದ್ದಾರೆ. ಮಾತು, ಬರವಣಿಗೆ ಹಾಗೂ ಸಂಘಟನೆಯೊಂದಿಗಿನ ಅವರ ಬದುಕು ಅನನ್ಯವಾದದು. ಯಾವ ಹಪಹಪಿಕೆಯೂ ಇಲ್ಲದೆ ವ್ಯಕ್ತಿ-ವ್ಯಕ್ತಿತ್ವವಾಗಿ ಪ್ರವರ್ಧಮಾನಗೊಂಡ ಅವರ ಚಾರಿತ್ರಿಕ ನಡೆಯು ಅಪ್ಯಾಯಮಾನವಾದುದು. ಭಗವಾನ್ ಶ್ರೀಧರರ ವರಪ್ರಸಾದವಾದ ಅವರು ಜನ್ಮಜಾತವಾದ ಪ್ರತಿಭೆಯಾಗಿದ್ದು, ಮತ್ತೊಬ್ಬರಲ್ಲಿಯ ಪ್ರತಿಭೆಯನ್ನು ಅಂತರಂಗದಿಂದ ಕಾಣುವ – ಆರಾಧಿಸುವ – ಆದರಿಸುವ ಸಂಸ್ಕಾರವುಳ್ಳವರು. ದೀರ್ಘಕಾಲಿಕವಾದ ಅಧ್ಯಾಪಕ ವೃತ್ತಿಯಲ್ಲಿ ಧನ್ಯತೆಯನ್ನು ಕಂಡುಕೊಂಡು ವಿಶ್ರಾಂತರಾದರೂ, ಸಮಾಜಮುಖಿಯಾದ ಕಾಯಕದಲ್ಲಿ ಅವಿಶ್ರಾಂತವಾಗಿ ಮುಂದುವರಿದವರು. ತನಗೆ ಸಮಾಜವೇನು ಕೊಟ್ಟಿದೆ ಎಂದುಕೊಳ್ಳುವ ಬದಲು, ತಾನು ಸಮಾಜದ ಸ್ವತ್ತೆಂಬ ಪ್ರಜ್ಞೆಯಿಂದ ತನ್ನೊಂದಿಷ್ಟನ್ನು ಸಮಾಜಕ್ಕಾಗಿ ಮೀಸಲಿಟ್ಟವರು. ತಾನೆಷ್ಟೇ ಎತ್ತರದಲ್ಲಿದ್ದರೂ, ಅತ್ತರಿನ ಸಂಸ್ಕೃತಿಗಿಂತಲೂ – ಬೆವರಿನ ಸಂಸ್ಕೃತಿಯಲ್ಲಿ ಅಪರಿಮಿತವಾದ ಒಲವನ್ನು ಹೊಂದಿ, ಶ್ರೀಸಾಮಾನ್ಯನಿಗೆ ಹತ್ತಿರವಾಗಿ ಬಹುಮಾನ್ಯವಾದವರು. ಹೀಗೆ ಬದುಕನ್ನೇ ಬರೆಯುತ್ತಿರುವ ಶ್ರೀಪಾದರು ತನ್ನೊಳಗಿನ ಮನುಷ್ಯನಿಂದ ವಿಶೇಷವೆನಿಸಿದ್ದಾರೆ! ಅವರ ಅಪೂರ್ವವಾದ ಆಲೋಚನಾ ಸಾಮರ್ಥ್ಯದ ಫಲಿತವೇ ‘ಆಲೋಚನಾ ವೇದಿಕೆ’. ಅವರು ಅದರ ಮಡಿಲಿನಲ್ಲಿ ಮೂರ್ತೀಕರಿಸಿರುವುದೇ ‘ಸುಮನಶ್ರೀ ಪ್ರಶಸ್ತಿ’. ಇದು ಅವರ ಸುಮನಸಿನ ಸಂಕೇತವೇ ಹೌದು. ಹಾಗೊಂದು ಪ್ರಶಸ್ತಿಯನ್ನು ಹುಟ್ಟು ಹಾಕುವುದರ ಮೂಲಕ ಸರ್ ತಮ್ಮ ಸಾಂಸ್ಕೃತಿಕ ಬದ್ಧತೆಯನ್ನು ಮೆರೆಯುತ್ತಿದ್ದಾರೆ. ಹೀಗಾಗಿ ಅವರು ಅನುಸರಣೀಯರೆನಿಸಿದ್ದಾರೆ.

    ಆಲೋಚನಾ ವೇದಿಕೆಯ ಆಚೆ-ಈಚೆ
    ಜೀವ ಜಗತ್ತಿನ ಪ್ರತಿಯೊಬ್ಬ ಜೀವಿಯು ಜೀವವಿರುವತನಕ ಜೀವಿಸುವುದು ಹೌದಾದರೂ, ಜೀವವನ್ನು ಬದುಕನ್ನಾಗಿಸುವ ಸಾಮರ್ಥ್ಯವುಳ್ಳವನು ಮನುಷ್ಯ ಮಾತ್ರವೆಂಬುದು ಗೊತ್ತಿಲ್ಲದವರಿಲ್ಲ. ಇದಕ್ಕೆ ಮನುಷ್ಯನಲ್ಲಿಯ ಆಲೋಚನಾ ಸಾಮರ್ಥ್ಯವೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಭೂತದ ಅರಿವಿನಿಂದ ಭವಿಷ್ಯವನ್ನು ಪರಿಣಾಮಕಾರಿಯನ್ನಾಗಿಸಲು ವರ್ತಮಾನದ ಆಲೋಚನೆಗೆ ಮಹತ್ವವಿದೆ. ‘ಚಿಂತೆ’ ಎಂಬುದು ದುಃಖಕ್ಕೆ ಸಂಬಂಧಿಸಿದ್ದು, ಚಿಂತನ ಎಂಬುದು ಆಲೋಚನೆಗೆ ಸಂಬಂಧಿಸಿದ್ದು. ಮೊದಲೇ “ಚಿಂತನ”ವನ್ನು ಕೈಗೊಂಡಲ್ಲಿ ‘ಚಿಂತೆ’ ಉಂಟಾಗದು. ‘ಚಿಂತೆ’ ಉಂಟಾದ ಬಳಿಕ “ಚಿಂತನ”ಕ್ಕೆ ತೊಡಗಿದಲ್ಲಿ ಪ್ರಯೋಜನವಿಲ್ಲ. ತಪ್ಪು-ಒಪ್ಪುಗಳ ಅರಿವಿಲ್ಲದ, ಯೋಚನೆ-ಯೋಜನೆಗಳಿಲ್ಲದ ದಾರಿಯು ಯಶೋಮುಖಿಯಾಗಿಸದೆ, ಬಹುತೇಕವಾಗಿ ಪ್ರಪಾತಕ್ಕೆ ತಳ್ಳುತ್ತದೆ. ಹೀಗಾಗಿ ಆಲೋಚನೆಯಂತೂ ಬೇಕೇ ಬೇಕು. ಅದು ಅಭಿವ್ಯಕ್ತವಾಗಲು ವೇದಿಕೆಯು ಪ್ರಾಪ್ತವಾದಾಗ ಸಮಾಲೋಚನೆಗೆ ಎಡೆಯಾಗಿ ಸಕಾರಾತ್ಮಕವಾದ ಫಲಿತಕ್ಕೆ ನಾಂದಿಯಾಗಲು ಸಾಧ್ಯ. ಹೀಗಾಗಿ ಅದೇ ಹೆಸರಿನಲ್ಲಿ ಡಾ.ಶ್ರೀಪಾದ ಶೆಟ್ಟಿಯವರು ವೇದಿಕೆಯನ್ನು ಹುಟ್ಟು ಹಾಕಿದ್ದು ಕಣ್ಣೆದುರುಗಿನ ಜೀವಂತವಾದ ಇತಿಹಾಸ. ಇದು ಸಮಾನ ಮನಸ್ಕರ ಕೂಟ. ಕಳೆದ ಹತ್ತಾರು ವರ್ಷಗಳಿಂದ ತನ್ನ ಇತಿ – ಮಿತಿಯಲ್ಲಿ ರಚನಾತ್ಮಕವಾದ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಇದು ಯಾರ ಆರ್ಥಿಕ ಬೆಂಬಲವನ್ನು ಆಧರಿಸಿದ್ದಲ್ಲ. ಸರ್ವತಂತ್ರ ಸ್ವತಂತ್ರವಾದ ಸಂಸ್ಥೆ. ಇದರ ಕಾರ್ಯ ಚಟುವಟಿಕೆಗಳಿಗೆ ಬೇಕಾದ ಸಂಪನ್ಮೂಲವನ್ನೆಲ್ಲ ಒಂಟಿ ಸಲಗವಾಗಿ ಡಾ. ಶ್ರೀಪಾದ ಶೆಟ್ವರೇ ಒದಗಿಸುತ್ತ ಬಂದಿದ್ದಾರೆ. ಯಾವುದೇ ರಾಜಕೀಯ ಮತ್ತು ಆರ್ಥಿಕ ಆಪೇಕ್ಷೆಯನ್ನು ಹೊಂದಿರದ, ಕೇವಲ ಸಾಮಾಜಿಕ ಮತ್ತು ಸಾಂಸ್ಕೃತಿಕವಾದ ಬದ್ಧತೆಯಿಂದಷ್ಟೇ ಹುಟ್ಟುಗೊಂಡ ಈ ಸಂಸ್ಥೆಗೆ ಬಲವಾದ ನೈತಿಕ ನೆಲಗಟ್ಟಿದೆ. ಇದಕ್ಕೆ ಅದು ಸಾಗಿ ಬಂದ ಹತ್ತಾರು ವರ್ಷಗಳ ಹೆಜ್ಜೆ ಗುರುತುಗಳೆ ಸಾಕ್ಷಿ. ಶ್ರೀಪಾದರ ಕಾಯಕಕ್ಷೇತ್ರವಾಗಿದ್ದ ಅಂಕವಲ್ಲಿಯಲ್ಲಿ ಮೈದಳೆದ ಆಲೋಚನಾ ವೇದಿಕೆಯು ನಂತರದಲ್ಲಿ ಅವರೊಂದಿಗೆ ಅವರ ತವರು ನೆಲವಾದ ವರನದಿ ಶರಾವತಿಯ ತಟಾಕದ ಹೊನ್ನಾವರದಲ್ಲಿ ತನ್ನ ನೆಲೆಯನ್ನು ಕಂಡುಕೊಂಡು,ಸವ್ಯಸಾಚಿಗಳ ಚಿಂತನ – ಮಂಥನಕ್ಕೆ ಆಡಂಬಲವಾಗಿದೆ. ಪ್ರಚಾರ – ಪ್ರದರ್ಶನಗಳ ಹಂಗು – ಗುಂಗುಗಳಿಲ್ಲದೆ, ಇತಿ – ಮಿತಿಯಲ್ಲಿ ಆಲೋಚನಾ ವೇದಿಕೆಯನ್ನು ಸಶಕ್ತವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಡಾ. ಶ್ರೀಪಾದ ಶೆಟ್ಟಿಯವರ ನೇತೃತ್ವದ ತಂಡಕ್ಕೆ ‘ಭೇಷ್’ ಎನ್ನಲೇಬೇಕು. ಇದು ಜನ್ಮತಳೆದು ಒಂದುವರೆ ದಶಕಗಳೇ ಸಮೀಪಿಸುತ್ತಿದ್ದರೂ, ಆರಂಭದ ಹುಮ್ಮಸ್ಸನ್ನು ಕಳೆದುಕೊಳ್ಳದೆ ಬಾಳಿಸಿಕೊಳ್ಳುವಲ್ಲಿ ಸ್ಥಾಯಿಯಾಗಿರುವ ಕಲ್ಮಶವಿಲ್ಲದ ಆಲೋಚನೆಗೆ ಶರಣೆನ್ನಲೇಬೇಕು.

    ಆಲೋಚನೆಯ ‘ಸುಮನಶ್ರೀ ಪ್ರಶಸ್ತಿ’
    ಆಲೋಚನಾ ವೇದಿಕೆಯ ‘ಸುಮನಶ್ರೀ ಪ್ರಶಸ್ತಿ’ಯಲ್ಲಿ ಗಹನವಾದ ಆಲೋಚನೆಯೇ ಹುದುಗಿದೆ. ಅರ್ಜಿ ಹಾಕಿ ಪಡೆಯುವ ಪ್ರಶಸ್ತಿಯು ಪ್ರಶಸ್ತಿಯೇ ಅಲ್ಲ ಎಂಬ ನಿಲುವಿನಿಂದ, ಅರ್ಹತೆಯು ಆದರಿಸಲ್ಪಡದ ಕೊರಗಿನಿಂದ, ಯಾವ ಶಿಫಾರಸ್ಸು – ಪ್ರಭಾವವಿಲ್ಲದೆ, ಅಲಕ್ಷಿತ ಪ್ರಶಸ್ತ ವ್ಯಕ್ತಿತ್ವವನ್ನು ಅನ್ವೇಷಿಸಿ ನೀಡಲಾಗುತ್ತಿರುವುದೇ “ಸುಮನಶ್ರೀ ಪ್ರಶಸ್ತಿ”ಯಾಗಿದೆ. ಶ್ರೀಪಾದರು ತಮ್ಮ ಹಿರಿಯಪ್ಪ ಸುಬ್ರಾಯ, ದೊಡ್ಡಪ್ಪ ಮಂಜಯ್ಯ ಹಾಗೂ ತಂದೆ ನಾರಾಯಣರೊಂದಿಗೆ ತಮ್ಮ ಹೆಸರಿನ ಮೊದಲನೇ ಅಕ್ಷರಗಳನ್ನು ಸಮೀಕರಿಸಿ ಸುಮನಶ್ರೀ ಎಂಬ ಮುದ್ದಾದ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವುದು ಆಪ್ತವೆನಿಸಿದೆ. ಇದು ಸುಮನದ ಸಂಪದ್ಭರಿತವಾದ ಆಲೋಚನೆಯನ್ನು ಸಂಕೇತಿಸುವುದರಿಂದ ಔಚಿತ್ಯಪೂರ್ಣವಾಗಿದೆ. ವರ್ಷಕ್ಕೊಬ್ಬರಿಗೆ 5000 ರೂಪಾಯಿಗಳ ನಗದಿನೊಂದಿಗೆ, ಶಾಲು, ಹಾರ, ಪೇಟ, ಫಲಕ ಸಹಿತವಾಗಿ ಈ ಪ್ರಶಸ್ತಿಯನ್ನು 2010ರಿಂದ ನೀಡಲಾಗುತ್ತಿದೆ. ಪ್ರಶಸ್ತಿಯ ಮೊತ್ತವು ಮೇಲ್ನೋಟಕ್ಕೆ ಅತ್ಯಲ್ಪವಾಗಿ ಕಂಡರೂ, ಅದರಲ್ಲಿ ಹುದುಗಿದ ಭಾವವು ಮಾತ್ರ ಅತ್ಯುನ್ನತವಾದದು, ಅಷ್ಟೇ ಪವಿತ್ರವಾದುದು. ಇದು ಶ್ರೀಪಾದರ ಬೆವರ ಬೆಳೆ, ಧರ್ಮದ ದಾರಿಯ ಹಣ. ಧರ್ಮವಂತರಿಗೆ ನೀಡುವ ಧನ. ಈ ಮೊತ್ತವು ಅಕ್ಷಯವಾಗಲಿ ಎಂಬ ಸದಾಶಯದಿಂದಲೇ ನೀಡುತ್ತಿರುವುದರಿಂದ ಇದಕ್ಕೆ ಬೆಲೆ ಕಟ್ಟಲಾಗದು. ಸುಮನಶ್ರೀ ಪ್ರಶಸ್ತಿಗೆ ಇದೇ ಕ್ಷೇತ್ರವೆಂದು ಆಲೋಚನೆಯು ನಿರ್ಬಂಧಿಸಿಕೊಂಡಿದ್ದಿಲ್ಲ. ಆಲೋಚನೆಗೆ ಯಾವ ಕ್ಷೇತ್ರವೂ ಅಲ್ಲವೆಂದಲ್ಲ. ಆಲೋಚನೆಗೆ ಮಡಿವಂತಿಕೆಯು ಇಲ್ಲ ಎಂಬುದನ್ನು ಮುಡಿಗೇರಿದ ಸುಮನಶ್ರೀ ಪ್ರಶಸ್ತಿಯು ಈಗಾಗಲೇ ರಜುವಾತುಗೊಳಿಸಿದೆ.

    ಸಾಧನೆಯ ಗರಿಮೆಗೆ ಸುಮನಶ್ರೀಯ ಹಿರಿಮೆ
    ಜಾತಿ-ಮತ–ಪಂಥಗಳ ಭೇದವಿಲ್ಲದೆ, ಬಡ–ಹಿಂದುಳಿದ–ದೀನ–ದಲಿತ–ದುರ್ಬಲ-ಶೋಷಿತ ಸಮಾಜದ ಸಾಧಕರಿಗಾಗಿಯೇ ಈ ‘ಸುಮನಶ್ರೀ ಪ್ರಶಸ್ತಿ’ಯು ಮೀಸಲಾಗಿದೆ. ಸ್ಥರೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಉನ್ನತ ವರ್ಗಕ್ಕೆ ಸೇರಿದ್ದರೂ,ಆರ್ಥಿಕವಾಗಿ ಸಬಲರಲ್ಲದ, ಸುಪ್ತ ಪ್ರತಿಭೆಗಳನ್ನೂ ಕೂಡ ‘ಸುಮನಶ್ರೀ’ಯು ತನ್ನವರೆಂದೇ ತಬ್ಬಿಕೊಂಡಿದೆ ಅದು ಈ ಕೆಳಗಿನಂತಿದೆ.
    2010ರಲ್ಲಿ ಕಾರವಾರ ತಾಲ್ಲೂಕಿನ ತೊಡೂರು ಗ್ರಾಮದ ಹೆಸರಾಂತ ಜನಪದ ವೈದ್ಯರಾದ ಶ್ರೀಯುತ ಶೇಷು ಬೀರಗೌಡರಿಗೆ ಪ್ರಪ್ರಥಮವಾಗಿ ಮುಡಿಗೇರಿದ ಸುಮನಶ್ರೀ ಪ್ರಶಸ್ತಿ, 2011ರಲ್ಲಿ ಹೊನ್ನಾವರ ತಾಲ್ಲೂಕಿನ ಅರೆಅಂಗಡಿಯ ಕ್ಷೌರಿಕ ಕುಲ ಕಸುಬಿನ ಮೂರ್ತಿಶಿಲ್ಪಿಯಾಗಿರುವ ಶ್ರೀಯುತ ಗಣಪತಿ ದತ್ತ ಮಹಾಲೆ, 2012ರಲ್ಲಿ ಸಾವಿರ ಹೆರಿಗೆಯ ಯಶಸ್ವಿನಿಯಾದ ಅಂಕೋಲಾದ ಹಾಲಕ್ಕಿ ಸಮುದಾಯದ ಶ್ರೀಮತಿ ರಾಣಿ ರೂಪ ಗೌಡ, 2013ರಲ್ಲಿ ಉತ್ತರ ಕನ್ನಡ ಮೂಲದ ಧಾರವಾಡದ ನಿವಾಸಿಯಾಗಿರುವ ನಾಡವರ ಜನಾಂಗದ ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಶ್ರೀಮಾನ್ ದಯಾನಂದ ತೊರ್ಕೆ, 2014ರಲ್ಲಿ ಭಟ್ಕಳದ ಅರುಕೆಯ ಗೊಂಡ ಸಮುದಾಯದ ಗೊಂಡ ರಾಮಾಯಣದ ಗಾಯಕರಾದ ಶ್ರೀಯುತ ತಿಮ್ಮಪ್ಪ ಗೊಂಡ, 2015ರಲ್ಲಿ ಕಾರವಾರ ತಾಲ್ಲೂಕಿನ ಮಾಜಳಿಯ ಕೊಂಕಣ ಮರಾಠ ಸಮಾಜದ ಜನ ಮತ್ತು ಜಾನುವಾರು ವೈದ್ಯರಾದ ಶ್ರೀ ಸದಾ ಗಣಪತಿ ನಾಯ್ಕ, 2016ರಲ್ಲಿ ಹೊನ್ನಾವರ ತಾಲ್ಲೂಕಿನ ಹಳದಿಪುರ ಗ್ರಾಮದ ನಿವಾಸಿಯಾಗಿರುವ ಜಾನಪದ ಹಾಡುಗಾರ್ತಿ ಶ್ರೀಮತಿ ನಾಗಿ ಶಿವು ಮುಕ್ರಿ, 2017ರಲ್ಲಿ ಯಲ್ಲಾಪುರ ತಾಲ್ಲೂಕಿನ ಮದ್ದೂರಿನ ಗೌಳಿ ಜನಾಂಗದ ಜನ ಮತ್ತು ಜಾನುವಾರು ವೈದ್ಯರಾಗಿರುವ ಶತಾಯುಷಿ ಶ್ರೀಯುತ ವಿಟ್ಟು ಲಕ್ಕು ಯಾಮ್ಕರ್ ಹಾಗೂ 2018 ರಲ್ಲಿ ಕುಮಟಾದ ಕುಡ್ತಗಿಬೈಲಿನ ಬೆಸ್ತರ ಜನಪದ ಹಾಡುಗಾರ್ತಿ ಶ್ರೀಮತಿ ಲೀಲಾವತಿ ಅಂಬಿಗ ಇವರೆಲ್ಲರೂ ‘ಸುಮನಶ್ರೀ’ಯನ್ನು ತಮ್ಮದಾಗಿಸಿಕೊಂಡವರು.

    ಮುಂದೆ ಕರೋನ ಕಾರಣದಿಂದ 2019ರಿಂದ 2023ರವರೆಗೆ ನೀಡಲಾಗಿರದ ಸುಮನಶ್ರೀ ಪ್ರಶಸ್ತಿಯನ್ನು 2024ರಲ್ಲಿ ಹೊನ್ನಾವರ ತಾಲ್ಲೂಕಿನ ಅರೆಅಂಗಡಿಯ ಜೈನರ ಪರಿಣಿತ ವಾಹನ ಚಾಲಕ ಶ್ರೀ ನೀಲಕಂಠ ಜನ್ನಯ್ಯ ನಾಯಕ, ಕಡತೋಕದ ಹವ್ಯಕರ ಗೀತಾರಾಮಾಯಣದ ಗಾಯಕ ಶ್ರೀಯುತ ಶ್ರೀಪಾದ ಭಟ್, ಗಾಣಿಗರ ಪ್ರಗತಿಪರ ಕೃಷಿಕ ಶ್ರೀಮಾನ್ ಗಣಪಯ್ಯ ಮಂಜಯ್ಯ ಶೆಟ್ಟಿ, ತೋಳಸಾಣಿಯ ಕುಂಬ್ರಿ ಮರಾಠಿ ಜನಾಂಗದ ಕೋಲಾಟದ ಕಲಾವಿದ ಶ್ರೀಯುತ ದೇವು ಟಾಕು ಮರಾಠಿ ಹಾಗೂ ಗೋಳಿಬೈಲ ಮುಡಾರಿಯ ಬೆಸ್ತ ಸಮಾಜದ ಖ್ಯಾತ ಗಾರೆ ಮತ್ತು ಕಟ್ಟಡ ಕಾರ್ಮಿಕ ನಾಗೇಂದ್ರ ಮೊಗೇರ್ರವರಿಗೆ ನೀಡಲಾಯಿತು.

    2010ರಿಂದ ಇದುವರೆಗಿನ ಸುಮನಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಲೋಚನಾ ವೇದಿಕೆಯಿಂದ ಹಲವಾರು ಗಣ್ಯರನ್ನು ಆಪ್ತವಾಗಿ ಸಂಮಾನಿಸಲಾಗಿದೆ. ಅವರಲ್ಲಿ ಅಂಕೋಲಾದ ಪ್ರಸಿದ್ಧ ವೈದ್ಯ ಡಾ. ಕೆ.ಪಿ.ದಾಮೋದರ,ಗೋಕರ್ಣದ ಖ್ಯಾತ ಯಕ್ಷ ಲೇಖಕ ಶ್ರೀ ಎಂ. ಜಿ. ಬರವಣಿ,ಹರಿಸೇವೆಯ ದಾಸ ಶ್ರೀ ನಾರಾಯಣ ನಾಯ್ಕ, ರಾಜಕೀಯ ಮುತ್ಸದ್ದಿ ಶ್ರೀಯುತ ಪಿ. ಎಸ್. ರಾಣೆ, ಕರ್ಕಿಯ ಶ್ರೀ.ಜಿ. ಎಂ. ಭಾಗ್ವತ್ ಕಲ್ಲು, ಹೊನ್ನಾವರವರದ ಜಾನಪದ ತಜ್ಞ ಡಾ. ಎನ್. ಆರ್. ನಾಯಕ, ಮೂರೂರಿನ ಶ್ರೀ ವಿ. ಎಸ್. ಹೆಗಡೆ, ಹಳದಿಪುರದ ಶ್ರೀ ಹನುಮಂತ ಗೋವಿಂದ ಭಟ್, ಸಂತೆಗುಳಿಯ ಶ್ರೀ ಎನ್. ಎಲ್. ಹೆಗಡೆ, ಗುಡ್ಡೆಬಾಳದ ಶ್ರೀಯುತ ಎಸ್. ಜಿ. ಹೆಗಡೆ ಹಾಗೂ ಕಾಜನಮನೆಯ ಶ್ರೀ ಕೆ. ಎಸ್. ಹೆಗಡೆ ಮೊದಲಾದವರು ಈ ಆದರಕ್ಕೆ ಪಾತ್ರರಾದವರು.

    ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀಮಾನ್ ನಾಗಮೋಹನದಾಸ್, ನಾಡೋಜ ಶ್ರೀಮಾನ್ ಎಸ್. ಆರ್. ನಾಯಕ ಹಾಗೂ ಸನ್ಮಾನ್ಯ ಸಚಿವರಾದ ಶೀಯುತ ಮಂಕಾಳ ವೈದ್ಯರಂತವರೆಲ್ಲ ಸುಮನಶ್ರೀಯ ಪರ್ವಕಾಲದಲ್ಲಿ ಸಾಕ್ಷಿಯಾಗಿ ಕಳೆ ಕಟ್ಟಿದ್ದಾರೆ.
    ಇತ್ತೀಚೆಗೆ ಹೊನ್ನಾವರ ತಾಲ್ಲೂಕಿನ ಅರೆಅಂಗಡಿಯಲ್ಲಿ ಐವರು ಸಾಧಕರಿಗೆ ಏಕಕಾಲದಲ್ಲಿ ಸುಮನಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿದ ವೇದಿಕೆಯಲ್ಲಿ ಅಭಿನಂದನಾ ಭಾಷಣಕಾರನಾಗಿ ನನ್ನನ್ನು ಅತ್ಯಂತ ಆಪ್ತವಾಗಿ ಬರಮಾಡಿಸಿಕೊಳ್ಳಲಾಗಿತ್ತು. ಶ್ರೀ ಕರಿಕಾನ್ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀಮಾನ್ ಸುಬ್ರಹ್ಮಣ್ಯ ಭಟ್, ಶೈಕ್ಷಣಿಕ ಕ್ಷೇತ್ರದ ಕರ್ಮಯೋಗಿ ಶ್ರೀಯುತ ಎಸ್.ಜೆ. ಕೈರನ್ ಹಾಗೂ ಕರ್ಕಿಯ ಶ್ರೀ ಚನ್ನಕೇಶ್ವರ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಲ್. ಎಂ. ಹೆಗಡೆಯವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಭಾಗ್ಯ ನನ್ನದಾಗಿದ್ದು ನನಗೆ ಎಲ್ಲಿಲ್ಲದ ಸಂತಸವನ್ನು ಉಂಟು ಮಾಡಿತ್ತು. ನಾನು ಮಂಜುವಿನ ಅಭಿಮಾನಿ, ಮಂಜು ನನ್ನ ಅಭಿಮಾನಿ ಎಂದು ಡಾ. ಶ್ರೀಪಾದ ಶೆಟ್ಟಿಯವರು ನನ್ನ ಕುರಿತು ಅತ್ಯಂತ ಅಭಿಮಾನದಿಂದ ಆಡಿದ್ದನ್ನಾಲಿಸುವಲ್ಲಿ ಪುಳುಕಿತಗೊಂಡಿದ್ದೆ. ನನ್ನ ಮಾತಿಗೆ ಕಿವಿಯಾಗಿದ್ದ ವೇದಿಕೆಯೊಂದಿಗಿನ ವಿದ್ವತ್ಪೂರ್ಣವಾದ ಸಭೆಯು ಮುಕ್ತ ಕಂಠದಿಂದ ಶ್ಲಾಘಿಸಿದ್ದಕ್ಕೆ ಸ್ವತಃ ನನಗೆ ಸುಮನಶ್ರೀ ಪ್ರಶಸ್ತಿಯೇ ಪ್ರಾಪ್ತವಾದಷ್ಟು ಖುಷಿಯಾಗಿದ್ದಂತೂ ಸುಳ್ಳಲ್ಲ.

    ಮಂಜುನಾಥ ಗಾಂವಕರ್ ಬರ್ಗಿಯವರ ಶಿಕ್ಷಣ, ಸಾಹಿತ್ಯ, ಯಕ್ಷಗಾನ ಹಾಗೂ ಸಂಘಟನಾತ್ಮಕವಾದ ವ್ಯಕ್ತಿತ್ವವು ಅನನ್ಯವಾದುದು. ಕನ್ನಡ, ಸಂಸ್ಕೃತ, ಇತಿಹಾಸ, ಶಿಕ್ಷಣ ಮತ್ತು ಪತ್ರಿಕೋದ್ಯಮವನ್ನೊಳಗೊಂಡು ಐದು ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿ, ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಫೆಲೋಶಿಪ್‌ನಡಿಯಲ್ಲಿ ‘ಮಕ್ಕಳ ಒತ್ತಡ ನಿರ್ವಹಣೆ’ ಎಂಬ ವಿಷಯದ ಕುರಿತು ಕಿರು ಸಂಶೋಧನೆಯನ್ನು ಕೈಗೊಂಡಿದ್ದು, ಪ್ರಸ್ತುತ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ‘ಯಕ್ಷಗಾನದಲ್ಲಿ ಸಂಸ್ಕೃತ ಸಾಹಿತ್ಯ’ ಪಿ.ಎಚ್.ಡಿ. ವ್ಯಾಸಂಗವನ್ನು ಮಾಡುತ್ತಿದ್ದಾರೆ. ವರ್ಗಕೋಣೆಯಲ್ಲಷ್ಟೇ ಸಮರ್ಥ ಅಧ್ಯಾಪಕರಾಗಿರದೇ ಭಾಷಣ, ಚರ್ಚೆ ಹಾಗೂ ಉಪನ್ಯಾಸಗಳ ಮೂಲಕವಾಗಿ ಶಾಲಾ-ಕಾಲೇಜು ದಿನಗಳನ್ನು ಪ್ರಬರ ವಾಗ್ಮಿಯಾಗಿ ರಾಜ್ಯ ಹಾಗೂ ಅಂತರ್ ವಿಶ್ವವಿದ್ಯಾಲಯ ಮಟ್ಟದ ಹಲವಾರು ಪ್ರಶಸ್ತಿ-ಫಲಕ-ಬಹುಮಾನಗಳಿಗೆ ಭಾಜನರಾಗಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಉಪ್ಪಿನಂಗಡಿ ಘಟಕದ ವತಿಯಿಂದ ಕುಂಬ್ಳೆ ಶ್ರೀಧರ ರಾವ್ ಇವರಿಗೆ ನುಡಿನಮನ ಕಾರ್ಯಕ್ರಮ
    Next Article ಮೇಘರಂಜನಾ ತಂಡದಿಂದ ‘ಭಾವ ಶಿಬಿರ’ 
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.