ಉಡುಪಿ : ಖ್ಯಾತ ವಿಮರ್ಶಕ ಪ್ರೊ. ವಿ.ಎಂ. ಇನಾಂದಾರ್ ಇವರ ನೆನಪಿನಲ್ಲಿ ನೀಡುವ ‘ಇನಾಂದಾರ್ ಪ್ರಶಸ್ತಿ’ಗೆ ಖ್ಯಾತ ಕವಿ, ನಾಟಕಕಾರ ಹಾಗೂ ರಂಗನಿರ್ದೇಶಕರಾದ ರಘುನಂದನ ಅವರ ‘ತುಯ್ತವೆಲ್ಲ ನವ್ಯದತ್ತ, ಅಂದತ್ತರಉಯ್ಯಾಲೆ ಮತ್ತು ಅದರ ಸುತ್ತ’ ವಿಮರ್ಶಾ ಕೃತಿಯು 2024ರ ಸಾಲಿಗೆ ಆಯ್ಕೆಯಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯನ್ನು ದಿನಾಂಕ 23 ಏಪ್ರಿಲ್ 2025ರಂದು ನಡೆಯುವ ಎಂ.ಜಿ.ಎಂ. ಕಾಲೇಜಿನ ವಾರ್ಷಿಕ ಮುದ್ದಣ ಸಾಹಿತ್ಯೋತ್ಸವದ ಸಂದರ್ಭದಲ್ಲಿ ನೀಡಿ ಗೌರವಿಸಲಾಗುತ್ತದೆ.
ರಘುನಂದನ ಅವರು ವೃತ್ತಿ ನಿರತ ರಂಗ ನಿರ್ದೇಶಕರು, ರಂಗ ಕಲೆಯ ಅಧ್ಯಾಪಕರು, ಕವಿ ಹಾಗೂ ನಾಟಕಕಾರರು. ಅವರು ಮೈಸೂರಿನ ರಂಗಾಯಣ ಮತ್ತು ನೀನಾಸಂ ಸಂಸ್ಥೆಯಲ್ಲಿ ತೊಡಗಿಸಿಕೊಂಡವರು. ಇವರ ಪದ್ಯಗಳು, ಗದ್ಯಲೇಖನಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ, ಅಂತರ್ಜಾಲತಾಣಗಳಲ್ಲಿ ಪ್ರಕಟವಾಗಿವೆ. ಇವರ ಕವನ ಸಂಕಲನ ‘ನಾನು ಸತ್ತಮೇಲೆ’ ಈಗಾಗಲೇ ಪ್ರಕಟವಾಗಿದೆ. ಇವರಿಗೆ ಪು.ತಿ.ನ.ಕಾವ್ಯ-ನಾಟಕ ಪುರಸ್ಕಾರ ಸಂದಿದೆ. ಅಲ್ಲದೆ ನೀನಾಸಂ ಪ್ರತಿಷ್ಠಾನ ನೀಡುವ ಬಿ.ವಿ.ಕಾರಂತ ಫೆಲೋಶಿಪ್ ಪಡೆದ ಮೊದಲಿಗರಾಗಿದ್ದಾರೆ.