ಕುಂದಾಪುರ : ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ, ಸಾಲಿಗ್ರಾಮ ಮತ್ತು ವಿದ್ಯಾಚೇತನ ಪ್ರಕಾಶನ, ಸಿಂದಗಿ, ವಿಜಯಪುರ ಹಾಗೂ ಶ್ರೀ ಸಿದ್ದಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 28 ನವೆಂಬರ್ 2025ರಂದು ಶ್ರೀ ಸಿದ್ದಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಯಲ್ಲಿ ನಡೆಯುವ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಟ್ಟಿಅಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ ರಿಷಿಕಾ ದೇವಾಡಿಗ ಬೈಂದೂರು ಇವರು ಆಯ್ಕೆಯಾಗಿದ್ದಾರೆ.
ರಿಷಿಕಾ ದೇವಾಡಿಗ ಇವರು ಈಗಾಗಲೇ ರಾಜ್ಯಮಟ್ಟದ ಭಾಷಣ, ಕವನ ರಚನೆ, ಕವನ ವಾಚನ, ರಸಪ್ರಶ್ನೆ, ಏಕಪಾತ್ರಾಭಿನಯದಲ್ಲಿ ಭಾಗವಹಿಸಿ ಅಪಾರ ಜನಮನ್ನಣೆ ಹೊಂದಿರುವ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುತ್ತಾಳೆ. ಅಲ್ಲದೇ ಇವಳು ‘ಮೊದಲ ಹೆಜ್ಜೆ’ ಎಂಬ ಕಥಾ ಸಂಕಲನದ ಪುಸ್ತಕವನ್ನು ಬರೆದಿದ್ದು, ಓದಿನ ಜೊತೆಗೆ ಕಲೆ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಇವಳಿಗೆ ಕಳೆದ ವರ್ಷ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿ ಸಹ ಲಭಿಸಿದೆ. ಈಕೆ ಶಾಲೆಯ ಉಪಪ್ರಾಂಶುಪಾಲ ರಾಮ ದೇವಾಡಿಗ ಮತ್ತು ಶಿಕ್ಷಕಿ ರೂಪಾ ದಂಪತಿಯ ಪುತ್ರಿ.
ಈ ಸಮ್ಮೇಳನದ ಉದ್ಘಾಟಕರಾಗಿ ಧನ್ಯಶ್ರೀ ಜೋಗಿ ಕೋಟ ಹಾಗೂ ಕವನ ಗೋಷ್ಠಿಯ ಅಧ್ಯಕ್ಷರಾಗಿ ಸೃಜನ್ ಬೆಂಗಳೂರು ಹಾಗೂ ಕಥಾಗೋಷ್ಠಿಯ ಅಧ್ಯಕ್ಷರಾಗಿ ಸಿದ್ದೇಶ್ ಮೈಸೂರು ಆಯ್ಕೆಯಾಗಿದ್ದಾರೆ ಎಂದು ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ಪ್ರೊ. ಉಪೇಂದ್ರ ಸೋಮಯಾಜಿ ಮತ್ತು ಕಾರ್ಯದರ್ಶಿಗಳೂ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.
