ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಬ್ರಹ್ಮಾವರ ಇವರ ಆಯೋಜನೆಯ ಮೂರನೇ ವರ್ಷದ ‘ರಂಗೋತ್ಸವ’ ಕಾರ್ಯಕ್ರಮವು ದಿನಾಂಕ 05-04-2024ರ ಶುಕ್ರವಾರ ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ಆರಂಭಗೊಂಡು ಮೂರು ದಿನಗಳ ಕಾಲ ನಡೆದು ಭಾನುವಾರ ಸಮಾಪನಗೊಂಡಿತು. ಮೊದಲ ದಿನದ ಕಾರ್ಯಕ್ರಮವು ನಾದ ಮಣಿನಾಲ್ಕೂರು ಅವರ ಸದಾಶಯದ ಹಾಡುಗಳೊಂದಿಗೆ ಉದ್ಘಾಟನೆಗೊಂಡಿತು. ಈ ವೇಳೆ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕಿಯಾದ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ “ರಂಗಭೂಮಿ ಒಂದು ಸಮಷ್ಟಿ ಕಲೆ, ಇಂದಿನ ಕಾಲಘಟ್ಟದಲ್ಲಿ ನೈತಿಕ ಮೌಲ್ಯ ಅನ್ನೋದು ಇಳಿಯುತ್ತಿರುವಂತ ಸಂದರ್ಭದಲ್ಲಿ ನಾಟಕ ಕಲೆ, ರಂಗಚಟುವಟಿಕೆಗಳು ಅರ್ಥಪೂರ್ಣ ಹಾಗೂ ಅತ್ಯಗತ್ಯ” ಎಂದು ಅಭಿಪ್ರಾಯ ಹಂಚಿಕೊಂಡರು.
ರಂಗನಿರ್ದೇಶಕ ವಾಸುದೇವ ಗಂಗೇರ ಅವರು ಮಂದಾರದ ಕೆಲಸಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಹೋಲಿ ಫ್ಯಾಮಿಲಿ ಚರ್ಚ್ ಬ್ರಹ್ಮಾವರದ ಫಾದರ್ ಜಾನ್ ಫೆರ್ನಾಂಡಿಸ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಮಂದಾರದ ಅಧ್ಯಕ್ಷರಾದ ರೋಹಿತ್ ಎಸ್. ಬೈಕಾಡಿ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಸಚಿನ್ ಅಂಕೋಲಾ ಅವರು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಅಸ್ತಿತ್ವ (ರಿ.) ಮಂಗಳೂರು ಇವರ ಪ್ರಸ್ತುತಿಯ, ‘ಜುಗಾರಿ’ ನಾಟಕ ಪ್ರದರ್ಶನಗೊಂಡಿತು.
ರಂಗೋತ್ಸವದ ಎರಡನೇ ದಿನ ಅಂಕದಮನೆ ಜಾನಪದ ಕಲಾತಂಡ ರಿ. ಬಿರ್ತಿಯವರ ಜಾನಪದ ಹಾಡುಗಳ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಅಂದಿನ ಮುಖ್ಯ ಅತಿಥಿಗಳಾಗಿ ಡಾ. ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿಗಳಾದ ಡಾ. ಮಹಾಬಲೇಶ್ವರ್ ರಾವ್ ಅವರು ಉಪಸ್ಥಿರಿದ್ದು, “ರಂಗಚಟುವಟಿಕೆಗಳಿಗೆ ಏನೆಲ್ಲಾ ಹೊಸ ಆಯಾಮ ನೀಡುವುದೇ ರಂಗೋತ್ಸವದ ಉದ್ದೇಶ, ರಂಗಭೂಮಿ ಅಂದ್ರೆ ವಿನೋದ, ವಿಹಾರ ಅಷ್ಟೇ ಅಲ್ಲ ಅದಕ್ಕಿಂತ ಮುಖ್ಯವಾಗಿ ವೈಜ್ಞಾನಿಕ, ವೈಚಾರಿಕ, ಚಿಂತನೆಯ ಜಾಗೃತಿ, ರಂಗಭೂಮಿ ಪ್ರತಿಭಟನೆಯ ಪ್ರತಿರೋಧದ ಸಾಧನವಾಗಿ ಬೆಳೆಯಬೇಕು” ಎಂದು ಹೇಳಿದರು. ತದನಂತರ ರಂಗಪಯಣ ಬೆಂಗಳೂರು ಪ್ರಸ್ತುತಪಡಿಸಿದ ನಾಟಕ ‘ನವರಾತ್ರಿಯ ಕೊನೆಯ ದಿನ’ ಪ್ರದರ್ಶನಗೊಂಡಿತು.
ಮೂರನೇ ದಿನವಾದ ಭಾನುವಾರದ ಕಾರ್ಯಕ್ರಮವು ವಾಸುದೇವ ಗಂಗೇರ ಅವರ ನೇತೃತ್ವದಲ್ಲಿ ಸಮುದಾಯ ಕುಂದಾಪುರದ ಕಲಾವಿದರು ಪ್ರಸ್ತುತಪಡಿಸಿದ ರಂಗಗೀತೆಗಳ ಮೂಲಕ ಆರಂಭಗೊಂಡಿತು. ಆ ದಿನದ ಅತಿಥಿಗಳಾಗಿ ಆಗಮಿಸಿದ್ದ ನಿಕಟಪೂರ್ವ ರಾಜ್ಯ ಎನ್.ಎಸ್.ಎಸ್. ಅಧಿಕಾರಿಗಳು ಹಾಗೂ ಕರ್ನಾಟಕ ಸರ್ಕಾರದ ಪದನಿಮಿತ್ತ ಜಂಟಿಕಾರ್ಯದರ್ಶಿಗಳು ಆದ ಶ್ರೀ ಡಾ. ಗಣನಾಥ ಶೆಟ್ಟಿ ಎಕ್ಕಾರು ಆಗಮಿಸಿದ್ದರು. “ಸಂವಿಧಾನದ ಆಶಯಗಳಾದ ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಇದನ್ನು ಜನರಿಗೆ ತಲುಪಿಸುವ ಕೆಲಸ ರಂಗಭೂಮಿ ಮಾಡಬೇಕು. ಅದೇ ರಂಗಭೂಮಿಯ ಮುಖ್ಯ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.
ತದನಂತರ ಸಂಗಮ ಕಲಾವಿದೆರ್ ಮಣಿಪಾಲ ರಿ. ಪ್ರಸ್ತುತಪಡಿಸಿದ ‘ಮೃತ್ಯುಂಜಯ’ ನಾಟಕವು ಪ್ರದರ್ಶನಗೊಂಡಿತು. ಹೀಗೆ ಮೂರು ದಿನ ಮಂದಾರ ರಂಗೋತ್ಸವ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆದು ಅನೇಕ ಹಿರಿಯ ರಂಗಕರ್ಮಿಗಳು, ರಂಗಾಸಕ್ತರು, ಕಲಾಭಿಮಾನಿಗಳ ಜೊತೆಯಾಗುವಿಕೆಗೆ ಸಾಕ್ಷಿಯಾಯಿತು.