ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಇವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ದಿನಾಂಕ 16 ಫೆಬ್ರವರಿ 2025ರಂದು ಆಚರಿಸಲಾಯಿತು.
ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ .ಮಹೇಶ ಜೋಶಿ ಮಾತನಾಡಿ “ತೊಂಬತ್ತು ವರ್ಷಕ್ಕೂ ಮೀರಿದ ಸಂತೃಪ್ತ ಜೀವನವನ್ನು ನಡೆಸಿದ ಶೇಷಗಿರಿ ರಾಯರು ಏನಿಲ್ಲವೆಂದರೂ ಮೂವತ್ತು ಸಾವಿರ ಪುಟಗಳಿಗೂ ಮಿರಿದ ಬರವಣಿಗೆಯನ್ನು ಮಾಡಿದ್ದಾರೆ. ಅವರ ಬರವಣಿಗೆ ಆರಂಭಿಸಿದ್ದು ಆಧುನಿಕ ಕನ್ನಡ ರೂಪುಗೊಂಡ ದಿನಗಳಲ್ಲಿ. ಆಗ ಇನ್ನೂ ವಿಮರ್ಶೆಯ ಸ್ವರೂಪ ನಿಖರವಾಗಿರಲಿಲ್ಲ. ಸಾಹಿತ್ಯದ ಪರಿಚಯ ಆಗಿನ ತುರ್ತು ಅಗತ್ಯವಾಗಿತ್ತು. ಅದನ್ನು ಶೇಷಗಿರಿ ರಾಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಶೇಷಗಿರಿ ರಾಯರು ವ್ಯಾಪಕವಾಗಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದರು. ಹೀಗೆ ಬರೆಯುವಾಗ ಸಮಾಜದ ಎಲ್ಲಾ ವರ್ಗದವರಿಗೂ ತಮ್ಮ ಚಿಂತನೆಗಳು ತಲುಪುವಂತೆ ಬರೆದರು. ಅವರ ಚಿಂತನೆಗಳು ಈ ಪ್ರಕ್ರಿಯೆಯಲ್ಲಿ ಸರಳವಾದವು. ಆದರೆ ತಮ್ಮ ಗಹನತೆಯನ್ನು ಕಳೆದುಕೊಳ್ಳಲಿಲ್ಲ. 1947ರ ವೇಳೆಗೆ ಆಗ ಪರಿಷತ್ತಿನ ಅಧ್ಯಕ್ಷರಾಗಿದ್ದ ತಿ. ತಾ. ಶರ್ಮ ಅವರ ಒತ್ತಾಯದ ಮೇರೆಗೆ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದರು. ಭಾರತದ ಗವರ್ನರ್ ಜನರಲ್ ಆಗಿದ್ದ ಸಿ. ರಾಜಗೋಪಾಲಾಚಾರಿ ಅವರು ಪರಿಷತ್ತಿಗೆ ಭೇಟಿ ನೀಡುವ ಸಂದರ್ಭ ಬಂದಿತು. ಆ ಸಮಯದಲ್ಲಿ ಅಧ್ಯಕ್ಷರು ಊರಿನಲ್ಲಿ ಇರಲಿಲ್ಲ. ಹೀಗಾಗಿ ಸಂಪೂರ್ಣ ಕಾರ್ಯಕ್ರಮದ ವ್ಯವಸ್ಥೆ ಶೇಷಗಿರಿ ರಾಯರ ಮೇಲೆಯೇ ಬಿದ್ದಿತು. ರಾಷ್ಟ್ರದ ಪ್ರಥಮ ಪ್ರಜೆ ಭಾಗವಹಿಸುವ ಕಾರ್ಯಕ್ರಮ ಆಗಿದ್ದರಿಂದ ರಾಜ್ಯದ ಐ. ಜಿ. ಪಿ ಬೊಂಭೋರೆ ಸ್ಥಳ ಪರಿಶೀಲನೆಗೆ ಬಂದರು. ಅವರು ಮೊದಲಿಗೆ ಆತಂಕ ಪಟ್ಟರೂ ಶೇಷಗಿರಿ ರಾಯರು ದಕ್ಷತೆಯಿಂದ ಅದನ್ನು ನಡೆಸಿದರು. ಕೇವಲ ಇಪ್ಪತ್ತೆರಡು ವರ್ಷದ ಹುಡುಗ ಇಷ್ಟೊಂದು ದಕ್ಷವಾಗಿ ಕಾರ್ಯಕ್ರಮ ನಡೆಸಿದ್ದ ಎಂದು ಬಹುಕಾಲ ಎಲ್ಲರ ಬಳಿ ಹೇಳಿ ಕೊಂಡು ಬಂದಿದ್ದರು. 2008ರ ಡಿಸಂಬರ್ 12ರಿಂದ 15ರವರೆಗೆ ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶೇಷಗಿರಿ ರಾಯರು ಅಧ್ಯಕ್ಷರಾಗಿ ಆಯ್ಕೆಯಾದರು. ತಮ್ಮ ಅಧ್ಯಕ್ಷ ಭಾಷಣದಲ್ಲಿ ಶೇಷಗಿರಿ ರಾಯರು ಪಂಥಗಳನ್ನು ಮೀರಿದ ಕನ್ನಡ ಕಾಳಜಿ ತಮಗೆ ಇರುವುದನ್ನು ಖಚಿತವಾಗಿ ಬಿಂಬಿಸಿದರು. ಕನ್ನಡದ ಭವಿಷ್ಯದ ಕುರಿತು ಸ್ಪಷ್ಟ ಚಿಂತನೆಗಳನ್ನು ನೀಡಿದರು. ಅವರದು ಒಂದು ರೀತಿಯಲ್ಲಿ ಮಾದರಿ ಎನ್ನಿಸ ಬಲ್ಲ ಭಾಷಣವಾಗಿ ರೂಪುಗೊಂಡಿತ್ತು..
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್. ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ “ಗ್ರೀಕ್ ನಾಟಕಗಳು, ಇಂಗ್ಲೀಷ್ ಸಾಹಿತ್ಯ ಚರಿತ್ರೆ, ಅದರಲ್ಲಿಯೂ ಷೇಕ್ಸ್ ಪಿಯರ್ ಮತ್ತು ಮಹಾಕಾವ್ಯಗಳು ಶೇಷಗಿರಿ ರಾಯರಿಗೆ ಬಹಳ ಪ್ರಿಯವಾದ ಕ್ಷೇತ್ರಗಳು. ಈ ವಿಷಯಗಳ ಕುರಿತು ಅವರು ಮತ್ತೆ ಮತ್ತೆ ನಿರಂತರವಾಗಿ ಬರೆಯುತ್ತಲೇ ಹೋಗಿದ್ದಾರೆ. ಆದರೆ ಈ ಬರವಣಿಗೆಗಳು ಪುನರಾವರ್ತನೆಯಾದರೂ ಹೊಸ ಹೊಸ ಒಳನೋಟಗಳನ್ನು ಪಡೆಯುತ್ತಾ ಹೋಗಿವೆ. ತಮ್ಮ ವಿದ್ಯಾರ್ಥಿ ದೆಸೆಯಿಂದ ಕೊನೆಯ ದಿನಗಳವರೆಗೆ ಅವರು ಈ ಕುರಿತು ಅಧ್ಯಯನ ಮಾಡುತ್ತಾ ಹೋದರು. ಭಾರತದ ವಿವಿಧ ಪ್ರತಿಷ್ಟಿತ ಸಂಸ್ಥೆಗಳೊಂದಿಗೆ ಸಂಪರ್ಕವಿರಿಸಿ ಕೊಂಡ ಶೇಷಗಿರಿ ರಾಯರು ಈ ಒಡನಾಟವನ್ನು ಕನ್ನಡದ ಉಪಯೋಗಕ್ಕೆ ಬಳಸಿ ಕೊಂಡರು. ಕನ್ನಡ ಬರಹಗಾರರಲ್ಲಿ ಇಂತಹ ‘ನಾಯಕತ್ವದ ಗುಣ’ ಇರುವವರು ತೀರಾ ಅಪರೂಪ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ. ಭ. ರಾಮಲಿಂಗಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಲ್. ಎಸ್. ಶೇಷಗಿರಿ ರಾವ್ ಇವರ ಜನ್ಮಶತಮಾನೋತ್ಸವ ಕಾರ್ಯಕ್ರಮ
No Comments2 Mins Read