ಬೆಂಗಳೂರು : ನವಕರ್ನಾಟಕ ಪ್ರಕಾಶನ ಸಂಸ್ಥೆಯ ಮೂಲಕ ಅಕ್ಷರ ಕ್ರಾಂತಿಯನ್ನು ಮಾಡಿದ ಆರ್.ಎಸ್. ರಾಜಾರಾಮ್ 17 ಆಗಸ್ಟ್ 2024ರಂದು ಬೆಂಗಳೂರಿನಲ್ಲಿ ನಿಧನರಾದರು .
ನವಕರ್ನಾಟಕ ಪ್ರಕಾಶನ ಈವರೆಗೂ ಸುಮಾರು 6000 ಕನ್ನಡದ ವಿಶಿಷ್ಟ ಕೃತಿಗಳನ್ನು ನೀಡಿದೆ. ಈ ಬೃಹತ್ ಸಾಧನೆಯ ಹಿಂದೆ ಸುಮಾರು ಐದು ದಶಕಗಳಿಗೂ ಹೆಚ್ಚಿನ ಕಾಲದ ಪ್ರೇರಣಾತ್ಮಕ ಶ್ರಮ ವಹಿಸಿದವರು ಆರ್. ಎಸ್. ರಾಜಾರಾಮ್. ‘ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬ ನವಕರ್ನಾಟಕದ ಘೋಷವಾಕ್ಯದ ಮೂಲಕ ಕನ್ನಡಿಗರಿಗೆ ಉತ್ತಮ ಪುಸ್ತಕಗಳು ದೊರಕುವಂತೆ ಮಾಡಿದ್ದರು.
ನವಕರ್ನಾಟಕ ಸಂಸ್ಥೆಯನ್ನು ಸ್ವತಂತ್ರ ಪ್ರಕಾಶನ ಸಂಸ್ಥೆಯಾಗಿ ಬೆಳೆಸಲೇಬೇಕೆಂಬ ಆಕಾಂಕ್ಷೆಯಿಂದ ರಾಜಾರಾಮ್ ರೂಪಿಸಿದ ‘ವಿಶ್ವ ಕಥಾಕೋಶ’ 87 ದೇಶಗಳ 317 ಕಥೆಗಳ ಸಂಗ್ರಹ. ಅವುಗಳನ್ನು ಅನುವಾದ ಮಾಡಲು ಲೇಖಕರ ಪಡೆಯೇ ಮೂಡಿತು. ಅನೇಕ ರಾಯಭಾರ ಕಛೇರಿಗಳಿಗೆ ಪತ್ರ ಬರೆದು ಒಪ್ಪಿಗೆ ಪಡೆದರು. ನಿರಂಜನ ಅವರನ್ನು ಸಂಪಾದಕರಾಗಲು ಒಪ್ಪಿಸಿದರು. ಇದು ಕನ್ನಡ ಸಾರಸ್ವತ ಲೋಕದಲ್ಲಿ ಮೈಲುಗಲ್ಲಾಗಿದೆ. ‘ನೆಮ್ಮದಿಯ ನಾಳೆ ನಮ್ಮದು’ ಎಂದು ಅವರ ನೀಡಿದ ಘೋಷವಾಕ್ಯ ಅಕ್ಷರ ಲೋಕದ ಬಗ್ಗೆ ಅವರಿಗೆ ಇದ್ದ ನಂಬಿಕೆಗೆ ನಿದರ್ಶನವಾಗಿತ್ತು. ಅವರು ರೂಪಿಸಿದ ‘ಹೊಸತು’ ಪತ್ರಿಕೆ ಕನ್ನಡ ಪತ್ರಿಕೋದ್ಯಮಕ್ಕೆ ಹೊಸತನ್ನೇ ನೀಡಿತ್ತು.