ಮಂಗಳೂರು : ಕವಿತಾ ಟ್ರಸ್ಟ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಸಾದ್ ಸೈಮಾಚೊ’ (ಪ್ರಕೃತಿಯ ನಾದಗಳು) ಎಂಬ ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗವು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಸಹಕಾರದಲ್ಲಿ ದಿನಾಂಕ 06-08-2023ರಂದು ನಡೆಯಿತು. ಗೋವಾದ ಢಾಯಿ ಆಖಾರ್ (ಎರಡುವರೆ ಅಕ್ಷರ) ತಂಡದವರು ಪ್ರಕೃತಿಯ ದನಿಗಳಿಗೆ ಸಂಬಂಧಪಟ್ಟ ಹಿಂದಿ ಮತ್ತು ಕೊಂಕಣಿಯ ಸಾಹಿತ್ಯವನ್ನು ಸಾದರಪಡಿಸಿದರು.
ಕೇದಾರ್ನಾಥ್ ಸಿಂಗ್ ಇವರ ‘ಬಾಘ್’, ಸಲೀಲ್ ಚತುರ್ವೇದಿಯ ‘ಕಹಾಂ ಗಯೀ ವಹ್ ನದೀ ಕೀ ಧಾರ್’ ಮತ್ತು ಝಾರ್ಖಂಡಿನ ಜಸಿಂತಾ ಕೆರ್ಕಟ್ಟಾ ಅವರ ‘ನದೀ, ಪಹಾಡ್ ಔರ್ ಬಜಾರ್’ ಹಿಂದಿ ಕವಿತೆಗಳನ್ನು ಹಾಗೂ ಮಮತಾ ವೆರ್ಲೇಕರ್ ಇವರ ‘ಗುಪೀತ್’, ‘ಫೊಂಡ್ಕುಲಾಂ’ ಮತ್ತು ಪ್ರಕಾಶ್ ಪರಿಯೆಂಕಾರ್ ಇವರ ‘ಪಾಣಿ ಆತಾಂ ದೆಂವ್ತಾ’ ಹಾಗೂ ‘ಹಿ ರಾನ್ಕಾಣಿ’ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಜ್ಞಾನಪೀಠ ಪುರಸ್ಕಾರ ವಿಜೇತ ಸಾಹಿತಿ ದಾಮೋದರ ಮಾವ್ಜೊ ಇವರ ಕತೆ ‘ಭುರ್ಗಿಂ ಮುಗೆಲಿಂ ತಿಂ’ ಇದರ ವಿಷಯ ಮತ್ತು ಪ್ರಸ್ತುತಿಯ ನೈಜತೆಯು ನೆರೆದ ಕೇಳುಗರ ಕಣ್ಣಲ್ಲಿ ನೀರೂರಿಸಿತು. ಡಾ.ರಮಿತಾ ಗುರವ್, ಡಾ.ಮನೀಷಾ ಖೊರಾಟೆ ಮತ್ತು ಮಮತಾ ವೆರ್ಲೆಕಾರ್ ಸುಂದರವಾಗಿ ವಾಚಿಸಿದರು. ಆರ್ತಿ ದಾಸ್ ಮತ್ತು ನಿಯತಿ ಪತ್ರೆ ಸಾಹಿತ್ಯ ಮತ್ತು ಸಾಹಿತಿಗಳ ಹಿನ್ನಲೆ ವಿವರಿಸಿದರು. ಪ್ರತಿಷ್ಟಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರು ಬಾಳಿಗಾ ‘ಢಾಯಿ ಆಖಾರ್’ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಟ್ರಸ್ಟಿಗಳಾದ ವಿಲಿಯಮ್ ಪಾಯ್ಸ್ ಸ್ವಾಗತಿಸಿ, ವಿಕ್ಟರ್ ಮಥಾಯಸ್ ವಂದಿಸಿದರು.
ನಂತರ ಸಾಹಿತ್ಯ ಅಕಾಡೆಮಿ ನವದೆಹಲಿ, ಕವಿತಾ ಟ್ರಸ್ಟ್ ಸಹಕಾರದಲ್ಲಿ ಆಯೋಜಿಸಿದ ‘ಲೋಕ: ವಿವಿಧ ಸ್ವರಗಳು’ ಎಂಬ ಜಾನಪದ ಕಾರ್ಯಕ್ರಮ ನಡೆಯಿತು. ನವ ಸಿದ್ಧಿ ಕಲಾ ತಂಡ ಮೈನಳ್ಳಿ ಇವರಿಂದ ಡಮಾಮ್, ಫುಗ್ಡಿ, ಜಾಕಯ್ ಮತ್ತು ಶಿಗ್ಮೊ ಆಟಗಳ ಪ್ರಸ್ತುತಿ ನಡೆಯಿತು. ಕಲಾವಿದ ಸುನೀಲ್ ಸಿದ್ದಿ ಈ ಪ್ರಕಾರಗಳ ವಿವರಣೆ ನೀಡಿದರು. ಅಕಾಡೆಮಿಯ ಕೊಂಕಣಿ ಸಲಹಾ ಸಮಿತಿಯ ಅಧ್ಯಕ್ಷ ಮೆಲ್ವಿನ್ ರೊಡ್ರಿಗಸ್ ಕಲಾವಿದರನ್ನು ಗೌರವಿಸಿದರು. ಸದಸ್ಯರಾದ ಎಚ್.ಎಂ.ಪೆರ್ನಾಳ್ ಸ್ವಾಗತಿಸಿ, ಸ್ಟ್ಯಾನಿ ಬೇಳ ಧನ್ಯವಾದವನ್ನಿತ್ತರು.