ಮಂಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಎಂ. ಸಿ. ಸಿ. ಬ್ಯಾಂಕ್ ಲಿ., ಹಂಪನ್‌ಕಟ್ಟ ಇದರ ಸಭಾಂಗಣದಲ್ಲಿ ದಿನಾಂಕ 19 ಅಕ್ಟೋಬರ್ 2025ರಂದು ಸಾಹಿತ್ಯ ಭಂಡಾರ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಪ್ರಾಸ್ತಾವಿಕವಾಗಿ ಮಾತಾನಾಡಿ, ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಕ್ಷೇತ್ರಗಳಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಲು, ಸರಕಾರವು ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದೆ. ಕೊಂಕಣಿಯಲ್ಲಿ ವಿವಿಧತೆಯನ್ನು ಕಾಪಾಡಲು ಹಾಗೂ ಕೊಂಕಣಿಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಅಕಾಡೆಮಿಯು ನಿರಂತರವಾಗಿ ಕೆಲಸ ಮಾಡುತ್ತಿದೆ. ಅಕಾಡೆಮಿಯು ಸಾಹಿತಿಗಳಿಂದ ಪುಸ್ತಕಗಳನ್ನು ಪಡೆದು, ಪರಿಶೀಲಿಸಿ, ಸೂಕ್ತ ಪುಸ್ತಕಗಳನ್ನು ಆಯ್ದು, ಪ್ರಕಟಿಸಿ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಅಕಾಡೆಮಿಯು ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ, ಅವರನ್ನು ಗೌರವಿಸುತ್ತಾ ಬಂದಿದೆ. ಯಾರಾದರೂ ಹಿರಿಯ ಸಾಹಿತಿಗಳಿದ್ದಲ್ಲಿ ನಮಗೆ ತಿಳಿಸಿ, ಅವರನ್ನು ಖಂಡಿತ ಭೇಟಿ ಮಾಡುತ್ತೇವೆʼ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಜವಹರ್‌ಲಾಲ್ ನೆಹರು ವಿಶ್ವವಿದ್ಯಾಲಯ ನ್ಯೂಡೆಲ್ಲಿ ಇಲ್ಲಿನ ನಿವೃತ್ತ ಪ್ರಾಧ್ಯಾಪಕರಾದ ಶ್ರೀಯುತ ಪ್ರೊಫೆಸರ್ ವಲೇರಿಯನ್ ರೊಡ್ರಿಗಸ್ ಮಾತಾನಾಡಿ “ನನ್ನ ಮಾತೃಭಾಷೆ ಹಾಗೂ ನಾನು ಮನೆಯಲ್ಲಿ ಮಾತಾನಾಡುವ ಭಾಷೆ ಕೊಂಕಣಿ. ಭಾರತದಲ್ಲಿ ಕೊಂಕಣಿ ಮಾತಾನಾಡುವ ಜನಸಂಖ್ಯೆ ಕಡಿಮೆಯಿದ್ದರೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಸಾಹಿತಿಗಳು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಕೊಂಕಣಿ ಅಕಾಡೆಮಿಯು ಮಾಡುತ್ತಾ ಬಂದಿದೆ” ಎಂದು ಹೇಳಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.
ಖ್ಯಾತ ಕೊಂಕಣಿ ಸಾಹಿತಿಗಳು ಬರೆದ ಕೊಂಕಣಿಯ 9 ಪುಸ್ತಕಗಳು ವಿಮೋಚನೆಗೊಂಡವು. ಎಲ್ಲಾ ಸಾಹಿತಿಗಳ ಪರವಾಗಿ ಶ್ರೀ ಜ್ಯೋ ಲೋಬೊರವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀಮತಿ ಲಿಲ್ಲಿ ಮಿರಾಂದಾರವರು 2016ರಲ್ಲಿ ಕನ್ನಡದಿಂದ ಕೊಂಕಣಿಗೆ ಅನುವಾದಿಸಿದ ಪೂರ್ಣಚಂದ್ರ ತೇಜಸ್ವಿಯವರ ʼರ‍್ವಾಲೊʼ ಪುಸ್ತಕದ ಇ-ಬುಕ್ ಆವೃತ್ತಿಯನ್ನು ದೈಜಿ ವರ್ಲ್ಡ್ ಸಂಸ್ಥಾಪಕರಾದ ಶ್ರೀ ವಾಲ್ಟರ್ ನಂದಳಿಕೆ ಇವರು ಲೋಕಾರ್ಪಣೆಗೊಳಿಸಿದರು . ಎಂ. ಸಿ. ಸಿ. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಇವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಐ. ಎ. ಎಸ್. ಅಧಿಕಾರಿ, ಪ್ರಸ್ತುತ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾಗಿ ನೇಮಿಸಲ್ಪಟ್ಟ ಶ್ರೀ ವಿನ್ಸೆಂಟ್ ರಿಚರ್ಡ್ ಡಿಸೋಜರವರನ್ನು ಹೂಗುಚ್ಚ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.
ಕೊಂಕಣಿ ಅಕಾಡೆಮಿಯು ಹಮ್ಮಿಕೊಂಡ ಸಾಹಿತ್ಯ ಸ್ಪರ್ಧೆಯಲ್ಲಿ ಕಾದಂಬರಿ ವಿಭಾಗದ ವಿಜೇತರಾದ ಶ್ರೀ ರೋಶನ್ ಮೆಲ್ಕಿ ಸಿಕ್ವೇರಾ, ಶ್ರೀ ವಿನ್ಸೆಂಟ್ ಪಿಂಟೊ, ಆಂಜೆಲೊರ್, ಶ್ರೀ ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚರ‍್ಯ) ಹಾಗೂ ಕಿರುನಾಟಕ ವಿಭಾಗದ ವಿಜೇತರಾದ ಶ್ರೀ ಹಿಲರಿ ಡಿಸಿಲ್ವ (ಪ್ರಸನ್ನ್ ನಿಡ್ಡೋಡಿ), ಫಾ. ಅನಿಲ್ ಅವಿಲ್ಡ್ ಲೋಬೊ ಇವರಿಗೆ ಎಂ. ಸಿ. ಸಿ. ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಅಕಾಡೆಮಿ ಸದಸ್ಯರಾದ ನವೀನ್ ಲೋಬೊರವರು ವಂದನಾರ್ಪಣೆಗೈದರು. ಶ್ರೀ ಕ್ರಿಸ್ಟೋಫರ್ ಅನಿಲ್ ಮೊಂತೇರೊ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ಸಮರ್ಥ ಭಟ್, ದಯಾನಂದ ಮಡ್ಕೇಕರ್, ಸುನಿಲ್ ಸಿದ್ದಿ, ಸಪ್ನಾ ಮೇ ಕ್ರಾಸ್ತಾ, ಅಕ್ಷತಾ ನಾಯಕ್ ಉಪಸ್ಥಿತರಿದ್ದರು.

