ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಅದ್ವಯ ಸಾಹಿತ್ಯ ಸಂಘ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ‘ಸಾಹಿತ್ಯ ಚಿಲುಮೆ -2024’ ಶೀರ್ಷಿಕೆಯಡಿ ಭಾಷಾ ವಿಭಾಗದ ನೇತೃತ್ವದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 19 ಸೆಪ್ಟೆಂಬರ್ 2024ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಂತ ಫಿಲೋಮಿನ ಕಾಲೇಜ್‌ನ ಉಪ ಪ್ರಾಂಶುಪಾಲ ಡಾ. ವಿಜಯ್ ಕುಮಾರ್ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲ್ ಮಾತನಾಡಿ “ವಿದ್ಯಾರ್ಥಿಗಳು ತಮ್ಮ ಅಭಿರುಚಿಗೆ ಹೊಂದಿಕೊಂಡು ತಮ್ಮನ್ನು ತಾವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.” ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಮಾತನಾಡಿದರು.
ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ದಯಾನಂದ ಸುವರ್ಣ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ವಾಚಿಸಿದರು. ದ್ವಿತೀಯ ಪದವಿ ಫ್ಯಾಷನ್ ಡಿಸೈನ್ ವಿಭಾಗದ ಪ್ರಕೃತಿ ಪ್ರಾರ್ಥನೆ ಹಾಡಿ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಹರಿಶ್ಚಂದ್ರ ಸ್ವಾಗತಿಸಿ, ಪ್ರಥಮ ಪದವಿ ಬಿ. ಸಿ. ಎ. ವಿಭಾಗದ ವಿದ್ಯಾರ್ಥಿನಿ ಅಪೇಕ್ಷಾ ಕಾರ್ಯಕ್ರಮ ನಿರ್ವಹಿಸಿ, ತೃತೀಯ ಪದವಿ ವಾಣಿಜ್ಯ ವಿಭಾಗದ ಕುಮಾರಿ ಕ್ಷೇಮಾ ವಂದಿಸಿದರು.