ಸುರತ್ಕಲ್ : ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಹಾಗೂ ಮಂಗಳೂರು ಘಟಕದ ವತಿಯಿಂದ ‘ಸಾಹಿತ್ಯ ಸಂಭ್ರಮ ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 04 ಮೇ 2025ರಂದು ಸುರತ್ಕಲ್ ಇಲ್ಲಿನ ವಿರಾಟ್ ಸಭಾ ಭವನದಲ್ಲಿ ನಡೆಯಿತು.
ಕ.ಸಾ.ಪ ಜಿಲ್ಲಾಧ್ಯಕ್ಷರಾದ ಶ್ರೀ ಎಂ. ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಸಿದ್ಧ ಸಾಹಿತಿಗಳಾದ ಡಾ.ಇಂದಿರಾ ಹೆಗಡೆ ದೀಪ ಬೆಳಗಿಸಿ ಉದ್ಘಾಟಿಸಿರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ , ಪಿ. ದಯಾಕರ್ , ಮಂಗಳೂರು ಕ. ಸಾ. ಪ. ಅಧ್ಯಕ್ಷರಾದ ಮಂಜುನಾಥ ರೇವನ್ಕರ್, ವಿನಯ ಆಚಾರ್ ಸಹಿತ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೃಷ್ಣ ಮೂರ್ತಿ ಸುರತ್ಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಭಾ ಕಾರ್ಯಕ್ರಮ ಹಾಗೂ ಗೀತ ಗಾಯನಗಳ ತರುವಾಯ ನಡೆದ ಕವಿಗೋಷ್ಠಿ ಯಲ್ಲಿ ವಿವಿಧ ರೀತಿಯ ಸ್ವರಚಿತ ಕಾವ್ಯ ವಾಚನವು ಸಭಿಕರನ್ನು ರಂಜಿಸಿತು. ರೇಮಂಡ್ ಡಿಕುನ್ಹಾ ತಾಕೊಡೆಯವರು ಸಕಾಲಿಕ ಕವನವನ್ನು, ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ್ ನೆಗಳಗುಳಿ ಇವರು ಸುಮಧುರ ಗಜಲ್ ಗಳನ್ನು, ಬಹುಮುಖ ಕಲೆಯ ಶಿಕ್ಷಕಿ ಪ್ರೇಮಾ ಆರ್. ಶೆಟ್ಟಿ ಇವರು ರಮ್ಯ ಕವನವನ್ನು, ಕರ್ನಾಟಕ ಬ್ಯಾಂಕ್ ಇದರ ಅಧಿಕಾರಿಯಾದ ಆಕೃತಿ ಭಟ್, ರಾಜೇಶ್ವರಿ ಎಚ್, ಪದ್ಮನಾಭ ಪೂಜಾರಿ, ನೇರಂಬೋಳು ರಂಜಿತ್ ಸಸಿಹಿತ್ಲು ಹಾಗೂ ಗುಲಾಬಿ ಸುರೇಂದ್ರ ಪ್ರಾಸ ಬದ್ಧ ಕವನ ಹಾಡಿದರು. ಕೊನೆಯಲ್ಲಿ ಸಂಘಟಕಿ ಅನುರಾಧ ಸುರತ್ಕಲ್ ಅವರ ಕವಿಗಳಿಗೆ ವಂದಿಸುವ ಕವನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.