ಮಂಗಳೂರು : ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಅವರು ದಿನಾಂಕ 16-07-2024ರಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು
‘ಕೋಟ್೯ ಮಾರ್ಷಲ್’, ‘ಮಳೆ ನಿಲ್ಲುವ ವರೆಗೆ’, ‘ಉರುಳು’, ‘ಕಲಂಕ್ ದಿ ನೀರ್’ ಮುಂತಾದ ಅಧ್ಬುತ ನಾಟಕಗಳು ಇವರ ನಿರ್ದೇಶನದಿಂದ ಮೂಡಿಬಂದಿತ್ತು. ಮೂಲತಃ ಮೂಲ್ಕಿಯವರಾದ ಸುವರ್ಣರು ಮುಂಬೈನಲ್ಲಿ ರಾತ್ರಿ ಶಾಲೆಯಲ್ಲಿ ಕಲಿತು, ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ಹತ್ತಾರು ವರ್ಷಗಳ ಹಿಂದೆ ಮಂಗಳೂರಿಗೆ ಬಂದು ನೆಲೆಸಿದ್ದರು.
ಇವರು ನಿರ್ಮಿಸಿದ ಮೊದಲ ಸಿನಿಮಾ ‘ಘಟಶ್ರಾದ್ಧ’ ಇದು ಗಿರೀಶ್ ಕಾಸರವಳ್ಳಿಯವರ ಮೊದಲ ನಿರ್ದೇಶನದ ಸಿನಿಮಾ ಕೂಡಾ. ಗಿರೀಶ್ ಕಾಸರವಳ್ಳಿಯವರು ಕನ್ನಡ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆ ಊರಲು ನೆರವಾದವರು ಸುವರ್ಣರು.
ಬಳಿಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ‘ಮನೆ’, ‘ಕುಬಿ ಮತ್ತು ಇಯಾಲ’ ಮತ್ತು ‘ತಬರನ ಕಥೆ’ ಸಿನಿಮಾಗಳ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರು. ದೂರದರ್ಶನಕ್ಕೆ ಗುಡ್ಡದ ಭೂತ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ್ದರು. ಇದು ಪ್ರಕಾಶ್ ರೈ ಅವರಿಗೆ ಬ್ರೇಕ್ ಕೊಟ್ಟಿತು. ದೂರದರ್ಶನಕ್ಕೆ ಇವರ ನಿರ್ದೇಶನದಲ್ಲಿ ಕೋಟ ಶಿವರಾಮ ಕಾರಂತರ ಸಂದರ್ಶನದ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಹತ್ತು ಕಂತುಗಳಲ್ಲಿ ಪ್ರಸಾರವಾಗಿತ್ತು.