ಕಾಸರಗೋಡು : ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಡಾ.ರಮಾನಂದ ಬನಾರಿಯವರ ನೂತನ ಕವಿತೆ, ಖಂಡ ಕಾವ್ಯಗಳ ಸಂಕಲನವಾದ ‘ಸದ್ದಾಗಿಯು ಸದ್ದಾಗದ ಸದ್ದುಗಳು’ ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 09-09-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಖ್ಯಾತ ವಿದ್ವಾಂಸ ಡಾ. ವಸಂತಕುಮಾರ್ ತಾಳ್ತಜೆಯವರು ಮಾತನಾಡುತ್ತಾ “ಡಾ. ರಮಾನಂದ ಬನಾರಿ ಮಂಜೇಶ್ವರ ಅವರದು ಸಹಜ ಕಾವ್ಯ. ಸಾಮಾಜಿಕ ಸಂಗತಿಗಳಿಗೆ, ಸಮಾಜದ ಏರುಪೇರುಗಳಿಗೆ, ಕಾಲಾನುಗತ ಬದಲಾವಣೆಗಳಿಗೆ ಅವರ ಕವಿ ಹೃದಯ ಮಿಡಿದಿದೆ. ಮೌಲ್ಯಗಳಲ್ಲಿ ಆದ ಬದಲಾವಣೆಗಳಿಗೆ ಅವರ ಕವಿತೆಗಳು ಸ್ಪಂದಿಸಿವೆ” ಎಂದು ಹೇಳಿದ್ದಾರೆ.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, “ಕುಟುಂಬ ವೈದ್ಯರಾಗಿ, ಯಕ್ಷಗಾನ ಅರ್ಥಧಾರಿಯಾಗಿ, ಸಾಹಿತಿಯಾಗಿ ಡಾ. ರಮಾನಂದ ಬನಾರಿ ಕನ್ನಡಕ್ಕೆ ಸಲ್ಲಿಸಿದ ಸೇವೆ ಮಹತ್ತರವಾದುದು. ಗಡಿನಾಡಿನಲ್ಲಿ ಸಾಹಿತ್ಯದ ಜೊತೆಗೆ ಕನ್ನಡದ ಜ್ಯೋತಿ ನಿರಂತರ ಉರಿಯುತ್ತಿರಬೇಕು ಹಾಗೂ ಕನ್ನಡ ಸಂಸ್ಕೃತಿ ಸದಾ ಜೀವಂತವಾಗಿರಬೇಕು ಎಂಬ ಡಾ.ರಮಾನಂದ ಬನಾರಿ ಅವರ ಕಾಳಜಿ ಅನುಪಮವಾದುದು” ಎಂದು ನುಡಿದರು.
ಹಿರಿಯ ಲೇಖಕಿ, ನಿವೃತ್ತ ಉಪನ್ಯಾಸಕಿ ಡಾ.ಪ್ರಮೀಳಾ ಮಾಧವ ಕೃತಿ ಪರಿಚಯ ಮಾಡಿ, “ಬನಾರಿ ಅವರ ಕಾವ್ಯಗಳು ನಿತ್ಯವೂ ಹೊಸತನದಿಂದ ಕೂಡಿದೆ” ಎಂದು ಹೇಳಿದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಪಿ.ಶ್ರೀಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. “ಮಂಜೇಶ್ವರ ಗೋವಿಂದ ಪೈ ಅವರ ಊರಿನಲ್ಲಿ ಬದುಕಿ, ಎಡನೀರಿನಲ್ಲಿ ಕಲಾಸೇವೆ ಮಾಡಲು ಅನುಗ್ರಹ ದೊರೆತಿರುವುದು ನನ್ನ ಸೌಭಾಗ್ಯ” ಎಂದು ಕೃತಿಕಾರ ಡಾ. ರಮಾನಂದ ಬನಾರಿ ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಕಾಸರಗೋಡು, ಲೇಖಕ ಎಸ್.ನಿತ್ಯಾನಂದ ಪಡ್ರೆ ಶುಭಹಾರೈಸಿದರು. ಕಾರ್ಯಕ್ರಮದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಡಾ.ಯು.ಮಹೇಶ್ವರಿ, ವಿಜಯಲಕ್ಷ್ಮಿ ಶ್ಯಾನುಭೋಗ್, ಸತ್ಯವತಿ ಕೊಳಚಪ್ಪು, ಪ್ರಮೀಳಾ ಚುಳ್ಳಿಕ್ಕಾನ, ವೆಂಕಟ್ ಭಟ್ ಎಡನೀರು, ಸುಶೀಲಾ ಪದ್ಯಾಣ ಕವನಗಳನ್ನು ವಾಚಿಸಿದರು. ರಾಜೇಂದ್ರ ಕಲ್ಲೂರಾಯ ದಂಪತಿಯನ್ನು ಕಾರ್ಯಕ್ರಮದಲ್ಲಿ ಡಾ.ರಮಾನಂದ ಬನಾರಿ ಅವರು ಶಾಲು ಹೊದೆಸಿ ಸನ್ಮಾನಿಸಿದರು.
ಡಾ.ಅನ್ನಪೂರ್ಣೇಶ್ವರಿ ಏತಡ್ಕ ಶಶಿಪ್ರಭಾ ವರುಂಬುಡಿ, ಸ್ವಾತಿ ಕಡೆಕಲ್ಲು, ಸುಧಾ ಮುರಳಿ ಮಾಣಿತ್ತೋಡಿ ಅವರು ಡಾ.ರಮಾನಂದ ಬನಾರಿ ಅವರ ಕಾವ್ಯಗಳ ಗಾಯನ ನಡೆಸಿದರು. ಲೇಖಕರ ಸಂಘದ ಜೊತೆ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಚಂದ್ರಶೇಖರ ಏತಡ್ಕ ವಂದಿಸಿ, ಶಿಕ್ಷಕಿ ಸುಶೀಲಾ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.
ಲೇಖಕರ ಬಗ್ಗೆ :
ಡಾ. ಕೆ. ರಮಾನಂದ ಬನಾರಿಯವರು ವೃತ್ತಿಯಲ್ಲಿ ವೈದ್ಯರಾಗಿದ್ದು ಜನಾನುರಾಗಕ್ಕೆ ಪಾತ್ರರಾದವರು. ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಕನ್ನಡ ಸಂಸ್ಕೃತಿ ಪರ ಹೋರಾಟಗಾರರಾಗಿ, ಸಮಾಜ ಸೇವೆಯೊಂದಿಗೆ ತಾಳಮದ್ದಳೆ ಅರ್ಥಧಾರಿಯಾಗಿರುವುದು ಮಾತ್ರವಲ್ಲದೆ ಗಮಕ ಕಲೆಯಲ್ಲಿ ವಿಶೇಷ ಆಸಕ್ತಿಯ ಇವರು ವಾಚನಕಾರರ ವಾಚನಕ್ಕೆ ಉತ್ತಮ ವ್ಯಾಖ್ಯಾನಕಾರರಾಗಿರುವುದು ಹೆಗ್ಗಳಿಕೆ. ಮಕ್ಕಳ ಹಾಗೂ ದೊಡ್ಡವರ ಕವನ ಸಂಕಲನ, ವೈದ್ಯಕೀಯ ಕವನ ಸಂಕಲನ, ಪ್ರಬಂಧ ಸಂಕಲನ ಇತ್ಯಾದಿ ಇವರ ಜ್ಞಾನಧಾರೆಯಿಂದ ಹರಿದು ಬಂದ ಬರಹಗಳು.
ವೈದ್ಯಕೀಯ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ ಪ್ರಶಸ್ತಿ, ಲಷ್ಕರಿ ಪ್ರಶಸ್ತಿ ಇತ್ಯಾದಿ ಹತ್ತು ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸುವುದರೊಂದಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಂತಹ ವೇದಿಕೆಗಳೂ ಸೇರಿ ಅನೇಕ ಸನ್ಮಾನ, ಗೌರವಗಳಿಗೆ ಪಾತ್ರರಾಗಿದ್ದಾರೆ. ಇವೆಲ್ಲವೂ ತಮ್ಮ ವೈದ್ಯ ವೃತ್ತಿಯೊಂದಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಕೊಡುಗೆಗೆ ಸಂದ ಗೌರವ.