Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೀರ್ಚಾಲಿನಲ್ಲಿ ಶ್ರೀಕೃಷ್ಣ ಭಟ್ ಇವರಿಗೆ ಸಹಸ್ರಚಂದ್ರ ದರ್ಶನ ಅಭಿನಂದನಾ ಸಮಾರಂಭ | ಜನವರಿ 05
    Book Release

    ನೀರ್ಚಾಲಿನಲ್ಲಿ ಶ್ರೀಕೃಷ್ಣ ಭಟ್ ಇವರಿಗೆ ಸಹಸ್ರಚಂದ್ರ ದರ್ಶನ ಅಭಿನಂದನಾ ಸಮಾರಂಭ | ಜನವರಿ 05

    December 27, 2024Updated:January 7, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನೀರ್ಚಾಲು : ಪ್ರೊ. ಪಿ. ಶ್ರೀಕೃಷ್ಣ ಭಟ್ ಅಭಿನಂದನ ಸಮಿತಿ ಕಾಸರಗೋಡು ಇದರ ವತಿಯಿಂದ ಸಹಸ್ರಚಂದ್ರ ದರ್ಶನ ಅಭಿನಂದನಾ ಸಮಾರಂಭ’ವನ್ನು ದಿನಾಂಕ 05 ಜನವರಿ 2025ರಂದು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.

    ಮಹಾಜನ ಶಿಕ್ಷಣ ಸಂಸ್ಥೆಗಳ ಪ್ರಬಂಧಕರು ಶ್ರೀ ಜಯದೇವ ಖಂಡಿಗೆ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಅಭಿನಂದನಾ ಗ್ರಂಥ ‘ಶ್ರೀಪಥ’, ‘ಆಲೋಕನ’, ‘ಅರಿವಿನ ನೆಲೆ ಹುಡುಕಿ’ ಮತ್ತು ಶ್ರೀಕೃಷ್ಣ ಭಟ್ಟರ ವಿದ್ಯಾರ್ಥಿಗಳ ಕೃತಿಗಳು ಬಿಡುಗಡೆಗೊಳ್ಳಲಿದೆ. ಬೆಳಗ್ಗೆ 11-00 ಗಂಟೆಗೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತಕುಮಾರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಪಾದೇಕಲ್ಲು ವಿಷ್ಣು ಭಟ್ ಇವರು ‘ಶ್ರೀಕೃಷ್ಣ ಭಟ್ಟರ ಸಾಹಿತ್ಯ ಚಿಂತನೆ’, ಪ್ರಾಧ್ಯಾಪಕರಾದ ಡಾ. ಮೋಹನ ಕುಂಟಾರ್ ಇವರು ‘ಶ್ರೀಕೃಷ್ಣ ಭಟ್ಟರ ಬಹುಭಾಷಾ ಚಿಂತನೆ’ ಮತ್ತು ವಿದ್ವಾಂಸರಾದ ಶ್ರೀ ಎಸ್. ಕಾರ್ತಿಕ್ ಇವರು ‘ಶ್ರೀಕೃಷ್ಣ ಭಟ್ಟರ ವ್ಯಾಕರಣ ಚಿಂತನೆ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಲಿರುವರು. ಅಪರಾಹ್ನ 2-00 ಗಂಟೆಗೆ ವಿಶ್ರಾಂತ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಇವರಿಂದ ‘ಕಾವ್ಯ ವಿಹಾರ’ ಪ್ರಸ್ತುತಗೊಳ್ಳಲಿದ್ದು, ಆ ಬಳಿಕ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಪಿ.ಎನ್. ಮೂಡಿತ್ತಾಯ ಇವರ ಅಧ್ಯಕ್ಷತೆಯಲ್ಲಿ ಶ್ರೀಕೃಷ್ಣ ಭಟ್ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಕಾಸರಗೋಡು ಕೇರಳಕ್ಕೆ ಸೇರಿದ ಮೇಲೆ ಅಲ್ಲಿ ಒಂದು ಸರಕಾರಿ ಕಾಲೇಜು ಸ್ಥಾಪನೆಯಾಯಿತು. ಇದರ ಸ್ಥಾಪನೆಯ ಹಿಂದೆ ದುಡಿದವರಲ್ಲಿ ಸ್ಥಳೀಯ ಕನ್ನಡಿಗರೇ ಮುಂಚೂಣಿಯಲ್ಲಿ ಇದ್ದರು. ಆರಂಭದಲ್ಲಿ ದ್ವಿತೀಯ ಭಾಷೆಯಾಗಿ ಮಾತ್ರ ಕನ್ನಡವಿತ್ತು. ಪದವಿ ತರಗತಿ ಆರಂಭವಾದ ಬಳಿಕ ಐಚ್ಛಿಕ ಕನ್ನಡವು ಆರಂಭವಾಗುವಲ್ಲೂ ಕನ್ನಡಿಗರ ಪ್ರತಿನಿಧಿಯಾಗಿ ಚುನಾವಣೆಗೆ ನಿಂತು ಆಯ್ಕೆಯಾದ ಶಾಸಕರ ವಿಶೇಷ ಪರಿಶ್ರಮವಿತ್ತು. ಮುಂದೆ ಅದು ಸ್ನಾತಕೋತ್ತರ ವಿಭಾಗವಾಗಿ ಹಾಗೂ ಅದಕ್ಕೂ ಮುಂದೆ ಸಂಶೋಧನ ಕೇಂದ್ರವಾಗಿ ಬೆಳೆಯಿತು. ದಿ. ಪ್ರೊ. ಸುಬ್ರಾಯ ಭಟ್ ಅವರು ವಿಭಾಗದ ಗುರುಪರಂಪರೆಯಲ್ಲಿ ಮೊದಲಿಗರಾಗಿ ತಮ್ಮ ವಿದ್ವತ್, ಪಾಂಡಿತ್ಯ, ಬೋಧನಾ ಕೌಶಲ್ಯ ಮತ್ತು ಶಿಷ್ಯವಾತ್ಸಲ್ಯಗಳಿಂದ ಆರಾಧ್ಯರೆನಿಸಿದರು. ಇನ್ನೂ ಸೇವೆಯಲ್ಲಿದ್ದಾಗಲೇ ತಮ್ಮ ನಡುಹರೆಯದಲ್ಲಿ ಅಪಘಾತವೊಂದಕ್ಕೆ ಬಲಿಯಾಗಿಬಿಟ್ಟರು. ಅವರ ಶತಮಾನೋತ್ಸವದ ಸಂಭ್ರಮಕ್ಕೆ ಕಾಲೇಜು ಎರಡು ವರುಷಗಳ ಹಿಂದೆ ಸಾಕ್ಷಿಯಾಗಿತ್ತು. ಡಾ. ಬಿ.ಕೆ. ತಿಮ್ಮಪ್ಪನವರು ಎರಡನೆಯವರಾಗಿ ಕಾಲಿಟ್ಟವರು. ಇವರು ಮಲಪ್ಪುರಂಗೆ ಪ್ರಾಂಶುಪಾಲರಾಗಿ ಬಡ್ತಿ ಹೊಂದಿ ತೆರಳಿದರೂ ಅನಾರೋಗ್ಯಕ್ಕೆ ತುತ್ತಾಗಿ ಇನ್ನೂ ಸೇವೆಯಲ್ಲಿದ್ದಾಗಲೇ ವಿಧಿವಶರಾದರು. ಹಾಸನ ಮೂಲದವರಾಗಿದ್ದ ಅವರು ಮೈಸೂರಿನ ಮಾನಸ ಗಂಗೋತ್ರಿಯ ವಿದ್ವಾಂಸರ ಗಡಣದಿಂದ ಕನ್ನಡ ವಾಙ್ಮಯದ ಗಂಧ, ರುಚಿಗಳನ್ನು ಸವಿದು ಬಂದವರಾಗಿದ್ದರು. ನಮಗೆ ಗುರುಗಳಾಗಿ ಬಂದ ಮೊದಲ ತಲೆಮಾರಿನವರೆಲ್ಲ ಕರ್ನಾಟಕದ ವಿಶ್ವವಿದ್ಯಾಲಯಗಳ ಶ್ರೇಷ್ಠ ಬೋಧಕರ ಗರಡಿಯಲ್ಲಿ ಪಳಗಿದವರು. ಪ್ರೊ. ಶ್ರೀಕೃಷ್ಣ ಭಟ್ಟರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎಂ. ಕಲಬುರ್ಗಿ, ಎಸ್‌.ಎಂ. ವೃಷಭೇಂದ್ರ ಸ್ವಾಮಿ, ಆರ್.ಸಿ. ಹಿರೇಮಠ ಮುಂತಾದವರ ಬೋಧನೆಯ ಸವಿಯನ್ನು ಪಾಂಡಿತ್ಯದ ಆಳ ಅಗಲಗಳನ್ನು ದರ್ಶಿಸಿ, ಆ ಸ್ಫೂರ್ತಿಯನ್ನು ಆವಾಹಿಸಿಕೊಂಡು ಬಂದವರು. ದಿ. ಪ್ರೊ. ಪದ್ಮನಾಭರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಚಿದಾನಂದ ಮೂರ್ತಿ, ಜಿ.ಎಸ್. ಶಿವರುದ್ರಪ್ಪ, ಎಂ.ವಿ. ಸೀತಾರಾಮಯ್ಯರಂತಹ ಗುರುಗಳ ಪ್ರಭಾವಳಿಯಲ್ಲಿ ಮಿಂದು ಬಂದವರು. ಉಪ್ಪಂಗಳ ಶಂಕರನಾರಾಯಣ ಭಟ್ಟರು ಮಂಗಳಗಂಗೋತ್ರಿಯಲ್ಲಿ ಎಸ್.ವಿ. ಪರಮೇಶ್ವರ ಭಟ್ಟ, ಎಚ್.ಜೆ. ಲಕ್ಕಪ್ಪ ಗೌಡ ಮುಂತಾದ ಪ್ರಭೃತಿಗಳ ಶಾಸ್ತ್ರ ಮತ್ತು ಸಾಹಿತ್ಯ ಬೋಧನೆಯ ವೈಖರಿಯನ್ನು ಮೈಗೂಡಿಸಿಕೊಂಡು ಬಂದವರು. ಇವರೆಲ್ಲ ತಮ್ಮ ಗುರುಗಳ ಬಗ್ಗೆ ಹೇಳುತ್ತಿದ್ದರೆ ನಮಗೆ ಎಂಥದೋ ಪುಳಕ. ಈ ಮೊದಲ ತಲೆಮಾರಿನಿಂದ ಪಾಠ ಹೇಳಿಸಿಕೊಂಡವರು ಮತ್ತೆ ಎರಡನೆಯ ತಲೆಮಾರಿನ ಗುರುಗಳಾಗಿ ವಿಭಾಗಕ್ಕೆ ಸೇರಿದಾಗಲೂ ಆ ಸ್ಫೂರ್ತಿ, ಕಾವು ಮುಂದುವರಿದಿತ್ತು. ಐತಿಹಾಸಿಕವಾದ ಸಂಚಿಗೆ ಬಲಿಯಾಗಿ ಕನ್ನಡನಾಡಿನಿಂದ ಭೌತಿಕವಾಗಿ ಬೇರ್ಪಟ್ಟು ಗಡಿನಾಡಿನಲ್ಲಿ ಕುಳಿತು ಈ ಗುರುಗಳಿಂದ ಪಾಠ ಹೇಳಿಸಿಕೊಳ್ಳುವಾಗ ನಮಗೆ ಕನ್ನಡನಾಡಿನಲ್ಲಿಯೇ ಇರುವ ಅನುಭವವಾಗುತ್ತಿತ್ತು. ವಿಶ್ವವಿದ್ಯಾಲಯದ ವಾತಾವರಣದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುವ ಅದೃಷ್ಟವಂತರು ನಾವಲ್ಲದಿದ್ದರೂ ನಮ್ಮನ್ನು ಕನ್ನಡದ ಜಾಣಜಾಣೆಯರಾಗಿಸುವ ಶಾಸ್ತ್ರ ಮತ್ತು ಸಾಹಿತ್ಯಗಳೆರಡರಲ್ಲೂ ಪ್ರಬುದ್ಧರನ್ನಾಗಿಸುವ ಗರಿಷ್ಠ ಸಿದ್ಧತೆಯನ್ನು ಪಠ್ಯಪದ್ಧತಿಯಲ್ಲೂ, ಬೋಧನ ಕ್ರಮದಲ್ಲೂ ನಮ್ಮಗುರುಗಳು ಅಳವಡಿಸಿಕೊಂಡಿದ್ದರು. ಆಗ ಅದು ನಮ್ಮ ಅರಿವಿಗೆ ಬರುತ್ತಿರಲಿಲ್ಲ. ಈಗ ಹಿಂತಿರುಗಿ ನೋಡುವಾಗ ಆ ಬೋಧನೆಯ ಸತ್ವ ನಮ್ಮೊಳಗೆ ಅಂತರ್ಗತವಾದ ಬಗ್ಗೆ ಅಭಿಮಾನವೆನಿಸುತ್ತದೆ. ಇಲ್ಲಿ ಕಲಿತು ಕನ್ನಡನಾಡಿನ ಉದ್ದಗಲದಲ್ಲಿ ಸಾಧನಶೀಲರಾಗಿ ಬೆಳಗಿದ ಅನೇಕರು ಈ ಮಾತಿಗೆ ಸಾಕ್ಷಿಯಾಗಿದ್ದಾರೆ.

    ಪ್ರೊ. ಸುಬ್ರಾಯ ಭಟ್ ಮತ್ತು ಡಾ. ಬಿ.ಕೆ. ತಿಮ್ಮಪ್ಪನವರು ಜೊತೆಯಾಗಿ ವಿಭಾಗದ ಬೆಳವಣಿಗೆಯ ಕನಸನ್ನು ಕಂಡರು. ಪ್ರೊಫೆಸರ್ ಭಟ್ಟರ ಅಗಲಿಕೆಯ ಬಳಿಕ ವಿಭಾಗದ ನೇತೃತ್ವವನ್ನು ವಹಿಸಿದ ತಿಮ್ಮಪ್ಪನವರಿಗೆ ಅದನ್ನು ಒಂದು ಸಂಶೋಧನಾ ಕೇಂದ್ರವನ್ನಾಗಿ ಬೆಳೆಸಬೇಕೆಂಬ ಹಂಬಲವಿತ್ತು. ಅವರ ಸತತ ಪರಿಶ್ರಮದಿಂದ ಅದು ಮಂಜೂರಾಯಿತು. ಆದರೆ ತಾಂತ್ರಿಕ ಕಾರಣಗಳಿಂದ ಚಾಲನೆ ದೊರೆತಿರಲಿಲ್ಲ. ಪ್ರೊ. ಶ್ರೀಕೃಷ್ಣ ಭಟ್ಟರು ಸುದೀರ್ಘ ಕಾಲ ಕನ್ನಡ ವಿಭಾಗವನ್ನು ಮುನ್ನಡೆಸಿದವರು ಅದನ್ನು ಒಂದು ಸಂಶೋಧನಾ ಕೇಂದ್ರವನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಅವರ ಕೊಡುಗೆ ಅಪಾರ. ತಾವು ಪಿಎಚ್.ಡಿ. ಪದವಿ ಪಡೆದ ಬೆನ್ನಿಗೆ ಓರ್ವ ಮಾರ್ಗದರ್ಶಕನಿಗಿರಬೇಕಾದ ಅರ್ಹತೆಗಳನ್ನೂ ಪೂರೈಸಿ ಅಂಗೀಕಾರವಿದ್ದರೂ ನಿಷ್ಕ್ರಿಯವಾಗಿದ್ದ ಸಂಶೋಧನಾ ಕೇಂದ್ರವನ್ನು ಚಾಲನೆಗೊಳಿಸಿ ಭದ್ರಗೊಳಿಸಿದರು. ಶಿಷ್ಯರನ್ನು ಸಂಶೋಧನೆಯ ಹಾದಿಗೆ ಕರೆದೊಯ್ದು ಅವರ ಶಿಷ್ಯರೇ ಮುಂದೆ ಸಂಶೋಧನೆಯ ಮಾರ್ಗದರ್ಶಕರಾಗಿ ಪರಂಪರೆಯನ್ನು ಮುಂದುವರಿಸಿದರು. ಪ್ರೊ. ಶ್ರೀಕೃಷ್ಣ ಭಟ್ ಎಲ್ಲರನ್ನೂ ಸಮನ್ವಯದಿಂದ ಕೊಂಡೊಯ್ಯುವ ದಕ್ಷತೆಯನ್ನು ಮೆರೆದು ವಿಭಾಗದ ಉನ್ನತಿಗೆ ಬಹಳಷ್ಟು ಶ್ರಮಿಸಿದರು. ತನ್ನ ಸಹೋದ್ಯೋಗಿಗಳ ವಿಭಿನ್ನ ಸಾಮರ್ಥ್ಯಗಳನ್ನು ಗುರುತಿಸಿ ಒಟ್ಟಂದದಲ್ಲಿ ಎಲ್ಲ ಅಧ್ಯಾಪಕರ ಕ್ರಿಯಾತ್ಮಕ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸಿ ಅದೆಷ್ಟೋ ಕಾರ್ಯಕ್ರಮಗಳನ್ನು ಸಂಘಟಿಸಿ ಕಾಲೇಜಿನಲ್ಲಿ ಕನ್ನಡ ವಿಭಾಗವು ಘನತೆವೆತ್ತ ವಿಭಾಗವಾಗಿ ಬೆಳೆಯುವುದರಲ್ಲಿ ಧನ್ಯತೆಯನ್ನು ತಳೆದವರು. ಆಗಿನ ನಿಯಮಾವಳಿಯಂತೆ 55ರ ಪ್ರಾಯದಲ್ಲಿ ನಿವೃತ್ತಿಯನ್ನು ಹೊಂದಿದರೂ ಮುಖ್ಯವಾಗಿ ಅವರ ಪರಿಶ್ರಮದಿಂದಲೇ ಕಣ್ಣೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಆರಂಭವಾದ ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ 10 ವರ್ಷಗಳ ಕಾಲ ಮುನ್ನಡೆಸಿದರು. ಅನೇಕ ವಿದ್ಯಾರ್ಥಿಗಳು ಎಂ.ಫಿಲ್. ಮತ್ತು ಪಿಎಚ್.ಡಿ. ಪದವಿಗಾಗಿ ವ್ಯಾಸಂಗ ಮಾಡಿ ಪದವೀಧರರಾಗಲು ಇದರಿಂದ ಸಾಧ್ಯವಾಯಿತು. ಕಾಸರಗೋಡಿನಂತಹ ಪ್ರದೇಶದಲ್ಲಿ ಉನ್ನತ ಶಿಕ್ಷಣದ ಒಂದು ಸನ್ನಿವೇಶವನ್ನು ಕಲ್ಪಿಸಿ ಕೊಡುವುದರ ಮಹತ್ವ ಅದರ ಫಲಾನುಭವಿಗಳಿಗೆ ತಿಳಿಯುವುದಕ್ಕೆ ಸಾಧ್ಯ. ವಿಶ್ವವಿದ್ಯಾಲಯಗಳ ಕೇಂದ್ರಗಳಲ್ಲಿ ವ್ಯಾಸಂಗಮಾಡುವುದು ಇಲ್ಲಿನ ಅನೇಕರಿಗೆ ಕನಸಿನ ಮಾತು. ಅಂತಹ ಸ್ಥಿತಿಯಲ್ಲಿ ವಿಶ್ವವಿದ್ಯಾಲಯಗಳ ಸಿಲಬಸ್‌ಗೆ ಯಾವ ಬಗೆಯಲ್ಲೂ ಕುಂದು ಬರದ ರೀತಿಯಲ್ಲಿ ಗುಣಮಟ್ಟವನ್ನು ಖಾತರಿಗೊಳಿಸಿ ತಮ್ಮ ಬಳಿಗೆ ಬಂದ ವಿದ್ಯಾರ್ಥಿಗಳನ್ನು ಹೊರ ಪ್ರಪಂಚದಲ್ಲಿ ಈಜಾಡಲು ಸನ್ನದ್ಧಗೊಳಿಸಿ ಕಳುಹಿಸಿದ ಗುರುಗಳಿಗೆ ಅವರೆಲ್ಲರೂ ಋಣಿಯಾಗಿರುತ್ತಾರೆ.

    ಶಾಸ್ತ್ರ ಸಾಹಿತ್ಯ ವಿಹಾರಿಯಾಗಿ, ಹಳಗನ್ನಡದ ಶ್ರೇಷ್ಠ ವಿದ್ವಾಂಸರಾಗಿ, ಭಾಷಾತಜ್ಞರಾಗಿ ನಾಡಿಗೆ ಸಲ್ಲಿಸಿದ ಸೇವೆಯ ಋಣ ಅನೇಕರಿಗಿದೆ. ಪ್ರೊಫೆಸರ್ ಅವರ ಎಂಬತ್ತೆರಡರ ಹರೆಯ ಸಮಾನಮನಸ್ಕರಾದ ಅವರ ಶಿಷ್ಯರಿಗೆ ಋಣಭಾರವನ್ನು ಸಲ್ಲಿಸುವ ಒಂದು ಅವಕಾಶವನ್ನೊದಗಿಸಿತು. ಪುಣ್ಯವಶದಿಂದ ಆರೋಗ್ಯದಿಂದಿರುವ ಹಾಗೂ ಸಹಸ್ರಚಂದ್ರದರ್ಶನದ ಭಾಗ್ಯವನ್ನು ಪಡೆದ ಶಿಷ್ಯವತ್ಸಲರಾದ ಅವರನ್ನು ಪ್ರೀತಿ ಗೌರವಗಳಿಂದ ಆಭಿನಂದಿಸುವ ಸಿದ್ಧತೆಯನ್ನು ಅವರ ಶಿಷ್ಯರಾದ ನಾವು ಮಾಡುತ್ತಿದ್ದೇವೆ. ಹೊಸವರುಷದ ಆದಿಯಲ್ಲಿ ಜನವರಿ 5ನೇ ತಾರೀಕಿಗೆ ಕನ್ನಡದೋಜ ಪೆರಡಾಲ ಕೃಷ್ಣಯ್ಯ ನಡೆದಾಡಿದ ಬೋಧನೆ ಮಾಡಿದ ನೀರ್ಚಾಲಿನ ಮಹಾಜನ ಸಂಸ್ಕೃತ ಹೈಯರ್ ಸೆಕೆಂಡರಿ ಶಾಲೆ ಈ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಡಾ. ಬಿ.ಎ. ವಿವೇಕ ರೈ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಬಸವರಾಜ ಕಲ್ಗುಡಿ, ಡಾ. ವಸಂತಕುಮಾರ ತಾಳ್ತಜೆ, ಡಾ. ಪಾದೇಕಲ್ಲು ವಿಷ್ಣುಭಟ್, ಡಾ. ಕಾರ್ತಿಕ್, ಡಾ. ಮೋಹನ ಕುಂಟಾರ್ ಮೊದಲಾದವರು ಪಾಲ್ಗೊಳ್ಳುತ್ತಾರೆ. ಅಭಿನಂದನಾ ಗ್ರಂಥ, ಪ್ರೊಫೆಸರ್ ಅವರ ಮಾರ್ಗದರ್ಶನದ ಸಂಶೋಧನಾ ವಿದ್ಯಾರ್ಥಿಗಳ ಸಂಶೋಧನಾ ಗ್ರಂಥದ ಸಾರಲೇಖಗಳ ಸಂಗ್ರಹ ಹಾಗೂ ಪ್ರೊ. ಅವರ ವಿದ್ಯಾರ್ಥಿಗಳ ಹೊಸಪುಸ್ತಕಗಳ ಬಿಡುಗಡೆ, ವಿಚಾರಗೋಷ್ಠಿ, ಕಾವ್ಯವಿಹಾರ ಅಂತಿಮವಾಗಿ ಗುರು ಮತ್ತು ಗುರುಪತ್ನಿ ಶ್ರೀಮತಿ ಹೇಮಾವತಿಯವರಿಗೆ ಆತ್ಮೀಯವಾದ ಅಭಿವಂದನೆಯೊಂದಿಗೆ ಸಂಪನ್ನಗೊಳ್ಳಲಿದೆ. ಅವರ ಶಿಷ್ಯಗಡಣ, ಅಭಿಮಾನಿಗಳು ಮತ್ತು ಹಿತೈಷಿಗಳು ಪರಸ್ಪರ ಕಲೆಯುವ ಸಂಭ್ರಮಿಸುವ ಆ ದಿನವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.

    ಮಹೇಶ್ವರಿ ಯು.

    Share. Facebook Twitter Pinterest LinkedIn Tumblr WhatsApp Email
    Previous Articleವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ಸಮಾರೋಪ ಸಮಾರಂಭ
    Next Article ನಟನ ರಂಗ ಶಾಲೆಯಲ್ಲಿ ‘ಕೈಲಾ ಸಂಸಾರ’ ಹಾಸ್ಯ ನಾಟಕ | ಡಿಸೆಂಬರ್ 29
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.